ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಬಂಧ ರಚನೆಯಾಗಿರುವ ಎಸ್‌ಐಟಿ ಗೆ ಕೂಡಲೇ ಧರ್ಮಸ್ಥಳಕ್ಕೆ ಹೋಗಿ ತನಿಖಾ ಪ್ರಕ್ರಿಯೆ ಶುರು ಮಾಡಲು ತಿಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪ್ರಣಬ್ ಮೊಹಂತಿ ನೇತೃತ್ವದ ತಂಡ ಇಂದು ಅಥವಾ ನಾಳೆ ಧರ್ಮಸ್ಥಳಕ್ಕೆ ಹೋಗಬಹುದು ಎಂದು ತಿಳಿಸಿರುವ ಗೃಹ ಸಚಿವರು, ಧರ್ಮಸ್ಥಳದ ಪೊಲೀಸರಿಗೂ ಈ ಸಂಬಂಧ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ.
ಎಸ್‌ಐಟಿ ತಂಡದಿಂದ ಯಾರೂ ಅಧಿಕಾರಿಗಳು ಹೊರಗುಳಿಯುವುದಿಲ್ಲ ಎಂದು ಹೇಳಿರುವ ಪರಮೇಶ್ವರ್, ಯಾರಾದರೂ ಹೊರಗೆ ಉಳಿಯುವುದಾದರೆ ನಮಗೆ ತಿಳಿಸಲಿ ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿಯವರು ಎಸ್‌ಐಟಿಗೆ ಯಾಕೆ ಆಕ್ಷೇಪ ಮಾಡುತ್ತಿದ್ದಾರೆ, ರಾಜಕೀಯ ಉದ್ದೇಶ ಇದೆ ಅಂತ ಈಗಲೇ ಅವರು ಹೇಗೆ ಹೇಳುತ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.



































