ಸಮೀಕ್ಷೆ ವೇಳೆ ಅರೆಭಾಷೆ ಎಂದು ನಮೂದಿಸಲು ನಿರ್ಧಾರ

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪ್ರತ್ಯೇಕ ಪ್ರತ್ಯೇಕವಾಗಿ ನಡೆಸಲುದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳ ಜಾತಿ ಕಾಲಂನಲ್ಲಿ GOWDA, ಉಪ ಜಾತಿ ಕಾಲಂನಲ್ಲಿ ಅರೆಭಾಷೆ ಗೌಡ, ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂದು ನಮೂದು ಮಾಡುವಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಬೆಂಗಳೂರಿನ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿರವರು ಈ ವಿಷಯಗಳಿಗೆ ಸಹಮತ ವ್ಯಕ್ತಪಡಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಈ ರೀತಿಯಲ್ಲಿ ಗೌಡ ಸಮಾಜಗಳ ಸಭೆ ನಡೆಸಿ ಈ ಕುರಿತಂತೆ ಅಲ್ಲಿಯೂ ಒಮ್ಮತದ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಸುಳ್ಯ ಮತ್ತು ಮಡಿಕೇರಿಯಲ್ಲಿ ತಕ್ಷಣ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡುವಂತೆ ಸಭೆ ತೀರ್ಮಾನಿಸಿತು. ಈ ದಿಸೆಯಲ್ಲಿ ಈ ವಿಚಾರವನ್ನು ಪ್ರಚುರ ಪಡಿಸಿ ಜನಾಂಗದ ವ್ಯಕ್ತಿಗಳಿಗೆ ತಲುಪಿಸಲು ಎಲ್ಲ ಗೌಡ ಸಮಾಜಗಳ ಅಧ್ಯಕ್ಷರ ಸಮಿತಿ ಮಾಡಿ ಅವರಿಗೆ ಜವಾಬ್ದಾರಿ ವಹಿಸುವಂತೆ ಸಭೆ ತೀರ್ಮಾನಿಸಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ ವಿ ಸದಾನಂದ ಗೌಡರು, ಕೇಂದ್ರ ಮತ್ತು ರಾಜ್ಯ ಸರಕಾರದ ಜಾತಿ ಗಣತಿ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಜಾಗೃತಿ ಅಭಿಯಾನದ ಸಮೀಕ್ಷೆಯಲ್ಲಿ ಎಲ್ಲರೂ ಭಾಗಿಯಾಗಬೇಕು ಮತ್ತು ಸೂಕ್ತವಾಗಿ ಆಲೋಚಿಸಿ ನೋಂದಾವಣೆ ಮಾಡಬೇಕೆಂದು ಕರೆ ನೀಡಿದರು. ನಮ್ಮ ಜನಾಂಗಕ್ಕೆ ಹಿಂದಿನಿಂದ ಸಿಗುತ್ತಿರುವ ಸೌಲಭ್ಯವನ್ನು ಉಳಿಸಿಕೊಳ್ಳಬೇಕು ಮತ್ತು ಮುಂದೆ ಯಾವುದೇ ತೊಂದರೆಗೆ ಒಳಪಡದಂತೆ ನಿರ್ಣಯ ಆಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ವಿಧಾನಸಭಾ ಅದ್ಯಕ್ಷರಾದ ಶ್ರೀ ಕೆ ಜಿ ಬೋಪಯ್ಯ ರವರು ಮಾತನಾಡಿ ಕೊಡಗಿನ ನಮ್ಮಜನಾಂಗದ ಎಲ್ಲಾ ದಾಖಲೆಗಳು GOWDA ಎಂಬ ಹೆಸರಿನಲ್ಲಿದ್ದು ಮುಂದೆ ಜಾತಿ ಕಾಲಂನಲ್ಲಿ ಬೇರೆ ನಮೂದು ಮಾಡಿದಲ್ಲಿ ಸಮುದಾಯಕ್ಕೆ ತೊಂದರೆಯಾಗಬಹುದೆಂಬ ಆತಂಕ ವ್ಯಕ್ತಪಡಿಸುತ್ತಾ ನಮ್ಮ ಹಿಂದಿನಿಂದ ಬಂದಂತಹ GOWDA ಜಾತಿಯನ್ನೇ ಮುಂದುವರಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಬಿಳಿಮಲೆಯವರು ಮಾತನಾಡಿ ನಮ್ಮ ಎಲ್ಲರ ನಿರ್ಣಯ ಒಂದೇ ಆಗಬೇಕಿದ್ದು ಶೈಕ್ಷಣಿಕ ಮತ್ತು ಆರ್ಥಿಕ ದೃಷ್ಟಿಯಿಂದ GOWDA ಎಂದು ನಮೂದಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಒಕ್ಕೂಟದ ಉಪಾಧ್ಯಕ್ಷ ಡಾ ತೇನನ ರಾಜೇಶ್ ಇವರು ಜಾತಿ ಸಮೀಕ್ಷೆಯ ಪೂರ್ಣ ವಿವರವನ್ನು ಪುರಾವೆಗಳೊಂದಿಗೆ ಸಭೆಯ ಮುಂದೆ ಮಂಡಿಸಿದರು ಮತ್ತು ಯಾವ ಕಾರಣಕ್ಕಾಗಿ ನಾವು GOWDA ಎಂದು ಜಾತಿ ಕಾಲಂನಲ್ಲಿ ನಮೂದು ಮಾಡಬೇಕಿದೆ ಎಂದು ದಾಖಲೆ ಸಮೇತ ವಿವರಿಸಿದರು. ಪ್ರಸ್ತುತ ಜಾತಿ ಗಣತಿಯಲ್ಲಿ ಭಾಗವಹಿಸುತ್ತಿರುವ ವಿಷಯ ತಜ್ಞರಾದ ಶ್ರೀ ಪಟ್ಟಡ ಶಿವಕುಮಾರವರು ಈ ಬಗ್ಗೆ ವಿವರವಾಗಿ ಮಾತನಾಡಿ ನಾವು GOWDA ಎಂಬುದನ್ನು ಮಾತ್ರ ಯಾಕೆ ಬರೆಯಬೇಕೆಂಬುದನ್ನು ವಿವರಿಸಿದರು.
ಎಲ್ಲಾ ಸಲಹಾ ಸಮಿತಿ ಸದಸ್ಯರು, ಸಮಾಜ ಚಿಂತಕರು, ಸಮಾಜಗಳ ಅದ್ಯಕ್ಷ ಮತ್ತು ಪದಾಧಿಕಾರಿಗಳು ಒಳಗೊಂಡ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾಗಿರುವ ಶ್ರೀ ಆನಂದ ಕರಂದ್ಲಾಜೆ ರವರು ಒಕ್ಕೂಟ ನಡೆದು ಬಂದ ದಾರಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಸಭೆಗೆ ವಿವರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಬೆಂಗಳೂರು ಶಾಖೆಯನ್ನು ಉದ್ಘಾಟಿಸಲಾಯಿತು. ಬೆಂಗಳೂರಿನ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಶ್ರೀ ಕೇಕಡ ನಾಣಯ್ಯ ಇವರು ಸಭೆಯನ್ನು ಸ್ವಾಗತಿಸಿದರು. ಕೊಡಗು ಗೌಡ ಸಮಾಜ ಬೆಂಗಳೂರು ಇದರ ಕಾರ್ಯದರ್ಶಿ ಶ್ರೀ ಬಿಪಿನ್ ಬೇಕಲ್ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top