ಸುಳ್ಯ ತಾಲೂಕಿನ ಬಹುಬೇಡಿಕೆಯ ೧೧೦ ಕೆವಿ ವಿದ್ಯುತ್ ಸಬ್‌ಸ್ಟೇಷನ್ ಲೈನ್ ಕಾಮಗಾರಿಗೆ ವಿದ್ಯುತ್ ಲೈನ್ ಬರುವ ಕಡೆ ಜಾಗವನ್ನು ಗುರುತಿಸಿ, ಖಾಸಾಗಿ ಆಸ್ತಿಯಾಗಿದ್ದರೆ ತಹಸೀಲ್ದಾರ ಮೂಲಕ ನೋಟಿಸ್ ನೀಡಿ ಅ. ೧೫ರ ಒಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಲು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಸೂಚನೆ ನೀಡಿದರು.
ಸುಳ್ಯ ತಾಲೂಕು ಪಂಚಾಯಿತಿಯ ಶಾಸಕರ ಕಚೇರಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸುಳ್ಯದ ೧೧೦ ಕೆವಿ ವಿದ್ಯುತ್ ಲೈನ್ ಕಾಮಗಾರಿ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕೆಪಿಟಿಸಿಎಲ್ ಅಧಿಕ್ಷಕ ಇಂಜಿನಿಯರ್ ಚೈತನ್ಯ ಸುಳ್ಯಕ್ಕೆ ೧೧೦ ಕೆವಿ ವಿದ್ಯುತ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಸುಳ್ಯ ಮತ್ತು ಪುತ್ತೂರು ತಾಲೂಕು ಸೇರಿ ಒಟ್ಟು ೮೯ ಟವರ್‌ಗಳ ನಿರ್ಮಾಣ ಆಗಬೇಕಿದೆ. ಇದರಲ್ಲಿ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ೫೦ ಟವರ್, ಪುತ್ತೂರು ವ್ಯಾಪ್ತಿಯಲ್ಲಿ ೩೯ ಟವರ್‌ಗಳ ನಿರ್ಮಾಣ ಅಗಬೇಕು. ೮೯ ವಿದ್ಯುತ್ ಟವರ್‌ಗಳಲ್ಲಿ ೨೫ ಟವರ್‌ಗಳು ಅರಣ್ಯದಲ್ಲಿ ಬರಲಿದೆ. ಈಗಾಗಲೇ ೯ ಟವರ್‌ಗಳಿಗೆ ಫೌಂಡೆಷನ್ ಆಗಿದೆ. ೨ ಟವರ್‌ಗಳ ಕೆಲಸ ಪ್ರಗತಿಯಲ್ಲಿದೆ. ಸುಳ್ಯದ ೫೦ ಟವರ್‌ಗಳ ಪೈಕಿ ೩೦ ಕಡೆ ಜಾಗದ ಸರ್ವೇ ಆಗಿದೆ. ಇನ್ನೂ ೨೦ ಕಡೆಗಳಲ್ಲಿ ಸರ್ವೇ ಕಾರ್ಯ ಆಗಬೇಕಿದೆ ಎಂದರು.
ಇದಕ್ಕೆ ಉತ್ತರಿಸಿದ ಸಹಾಯಕ ಆಯುಕ್ತರು ಖಾಸಗಿ ಜಮೀನುಗಳಲ್ಲಿ ವಿದ್ಯುತ್ ಟವರ್‌ಗಳು ಬರುವ ಕಡೆಗಳಲ್ಲಿ ಜಾಗಗಳನ್ನು ಗುರುತಿಸುವ ಕೆಲಸ ಮಾಡಿ. ಈಗಾಗಲೇ ೩೦ ಕಡೆ ಸ್ಥಳಗಳ ಸರ್ವೆ ಪೂರ್ಣಗೊಂಡಿದ್ದು ಸೆಪ್ಟೆಂಬರ್ ೧೫ರ ಒಳಗೆ ಇನ್ನು ಉಳಿದ ೨೦ ಸ್ಥಳಗಳ ಸರ್ವೆ ಕಾರ್ಯಕ್ಕೆ ಬೇಕಾದ ಸ್ಥಳ ತನಿಖೆ ನಡೆಸಿ ರೇಖಾ ಚಿತ್ರ ತಯಾರಿಕೆ ಮಾಡಬೇಕು. ಖಾಸಾಗಿ ಸ್ಥಳಗಳಿರುವಲ್ಲಿ ತಹಸೀಲ್ದಾರರ ಮೂಲಕ ನೋಟಿಸ್ ನೀಡಿ ಎಂದು ಪುತ್ತೂರು ಸಹಾಯಕ ಆಯುಕ್ತರು ತಿಳಿಸಿದರು. ಅಲ್ಲದೇ ಜಾಲ್ಸೂರು ಗ್ರಾಮದ ಅಡ್ಕಾರ್ ದೇಗುಲದ ಪರಿಸರದ ಬಳಿಯಲ್ಲಿ ಟವರ್ ನಿರ್ಮಾಣಕ್ಕೆ ಗುಂಡಿಗಳನ್ನು ತೆಗೆದಾಗ ಅಲ್ಲಿನ ಸ್ಥಳೀಯರು ಬೆದರಿಸಿ ಮುಚ್ಚಿಸಿದ್ದಾರೆ ಎಂದು ಗುತ್ತಿಗೆದಾರರು ಸಭೆಯ ಗಮನಕ್ಕೆ ತಂದು ಈ ಕುರಿತು ಪರಿಶೀಲನೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲು ಕಂದಾಯ ನಿರೀಕ್ಷರಿಗೆ ಸೂಚಿಸಿದರು.
ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ವಿದ್ಯುತ್ ಲೈನ್ ಬರುವ ಕಡೆ ಮರಗಳನ್ನು ತೆಗೆಯಲು ಗುರುತು ಮಾಡಲಾಗಿದೆ. ಇದಕ್ಕಾಗಿ ಈಗಾಗಲೇ ಕರಾರು ಪತ್ರ ಮಾಡಲು ಬಾಕಿ ಇದ್ದು ಅದನ್ನು ಕೂಡಲೇ ಸಿದ್ದಪಡಿಸಿ ಬಳಿಕ ಕೇಂದ್ರ ಸರಕಾರದ ಆದೇಶದನ್ವಯ ಉಳಿಸಬಹುದಾದ ಮರಗಳ ಸಂಖ್ಯೆಗಳನ್ನು ಹಿಂಬರಹ ನೀಡಿ ಮರಗಳ ಕಟಾವು ಪ್ರಾರಂಭವಾಗಲಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ತಿಳಿಸಿದರು.
ಮುಂದಿನ ಮಳೆಗಾಲಕ್ಕೆ ಮುನ್ನ ೧೧೦ ಕೆವಿ ವಿದ್ಯುತ್ ಸಬ್‌ಸ್ಟೇಷನ್‌ಗೆ ಚಾಲನೆ – ಮುರುಳ್ಯ
೧೧೦ ಕೆವಿ ವಿದ್ಯುತ್ ಸಬ್‌ಸ್ಟೇಷನ್ ಸುಳ್ಯ ತಾಲೂಕಿನ ಹಲವು ದಶಕಗಳ ಬೇಡಿಕೆ. ಬೇಸಿಗೆ ಆರಂಭವಾದೊಡನೆ ಕುಡಿಯುವ ನೀರಿನ ಸಮಸ್ಯೆ, ಕೃಷಿಗೆ ನೀರು ಹಾಯಿಸಲು ವಿದ್ಯುತ್ ಸಮಸ್ಯೆ, ಅದರೊಂದಿಗೆ ಅಡಕೆ ಹಳದಿ ರೋಗಗಳಿಂದಕೃಷಿಕರು ಬೇಸೆತ್ತಿದ್ದಾರೆ. ಮುಂದಿನ ಮಳೆಗಾಲಕ್ಕೆ ಮೊದಲು ಅಂದರೆ ೮ ತಿಂಗಳಲ್ಲಿ ೧೧೦ ವಿದ್ಯುತ್ ಸಂಪರ್ಕ ಸುಳ್ಯಕ್ಕೆ ಸಿಗುವಂತಾಗಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಿದರು. ಅಲ್ಲದೇ ಮುಂದಿನ ಸಭೆಯಲ್ಲಿ ಪರಿಹಾರ ಪಾವತಿ ಹಾಗೂ ಇತರೆ ಮಾಹಿತಿಗಳನ್ನು ಕೆಪಿಟಿಸಿಎಲ್ ಅಧಿಕಾರಿಗಳು ನೀಡಬೇಕು ಜೊತೆಗೆ ಕೆಲಸಗಳಿಗೆ ವೇಗ ನೀಡಬೇಕು ಅಲ್ಲದೇ ಸೆಪ್ಟೆಂಬರ್ ತಿಂಗಳ ಅಂತ್ಯದ ಒಳಗೆ ೧೧೦ ಕೆವಿ ಪ್ರಗತಿ ಕುರಿತು ಸಭೆಯನ್ನು ನಡೆಸಲು ಸೂಚಿಸಿದರು.
ವಿದ್ಯುತ್ ಲೈನ್ ಬರುವ ಕಡೆ ಟವರ್ ಗಳ ನಿರ್ಮಾಣ ಸಂದರ್ಭದಲ್ಲಿ ಒಂದು ಟವರ್ ೧.೭ ಸೆಂಟ್ಸ್ ಸ್ಥಳದಲ್ಲಿ ನಿರ್ಮಾಣ ಆಗಲಿದೆ. ಈ ಸ್ಥಳಕ್ಕೆ ಸುಮಾರು ೪.೫೦ ಲಕ್ಷ ರೂಪಾಯಿಗಳ ಪರಿಹಾರ ಸಿಗಲಿದ್ದು ಇವುಗಳನ್ನು ೩ ಹಂತಗಳಲ್ಲಿ ವಿತರಿಸಲಾಗುವುದು ಎಂದು ಕಾಮಗಾರಿ ಗುತ್ತಿಗೆದಾರ ಚಂದ್ರಶೇಖರ್ ತಿಳಿಸಿದರು.
ಸಭೆಯಲ್ಲಿ ಕೆಪಿಟಿಸಿಎಲ್ ಅಧಿಕ್ಷಕ ಇಂಜಿನಿಯರ್ ಚೈತನ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಕೆಪಿಟಿಸಿಎಲ್ ಎಕ್ಸಿಕ್ಯುಟಿವ್ ಎಂಜಿನಿಯರ್ ಶ್ರೀನಾಥ್ ಆಚಾರ್ಯ , ಕೆಪಿಟಿಸಿಎಲ್ ಎಇಇ ಸಚಿನ್ ಕುಮಾರ್, ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ವಿವೇಕಾನಂದ ಶೆಣೈ, ಸುಳ್ಯ ಎಡಿಎಲ್‌ಆರ್ ಜಿನೇಶ್ ಕುಮಾರ್, ಪುತ್ತೂರು ಎಡಿಎಲ್‌ಆರ್ ಶ್ರೀನಿವಾಸ ಮೂರ್ತಿ, ಸುಳ್ಯ ವಲಯ ಅರಣ್ಯಧಿಕಾರಿ ಮಂಜುನಾಥ್. ಎನ್, ಪುತ್ತೂರು ವಲಯ ಅರಣ್ಯಧಿಕಾರಿ ಕಿರಣ್ ಬಿ ಎಂ, ಸುಳ್ಯ ಉಪ ತಹಸೀಲ್ದಾರ್ ಚಂದ್ರಕಾಂತ್ ಎಂ. ಆರ್, ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ಸುಳ್ಯ ಮೆಸ್ಕಾ ಎಇಇ ಹರೀಶ್ ನಾಯ್ಕ್, ಮೆಸ್ಕಾಂ ಎಇ ಸುಪ್ರೀತ್, ಸರ್ವ ಸೂಪರ್‌ವೈಸರ್ ಪ್ರಕಾಶ್ ಉಪಸ್ಥಿತರಿದ್ದರು. ಶಾಸಕರ ಆಪ್ತ ಸಹಾಯಕ ಹರೀಶ್ ಕೆ ಸ್ವಾಗತಿಸಿ ವಂದಿಸಿದರು.
ಸುಳ್ಯದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ೧೧೦ ಕೆವಿ ವಿದ್ಯುತ್ ಲೈನ್ ಕಾಮಗಾರಿ ಬಗ್ಗೆ ಅಧಿಕಾರಿಗಳ ಸಭೆ

















