ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಸುಳ್ಯ, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ ೫೪ನೇ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ ಸುಳ್ಯ ಶ್ರೀಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬ ಕಲಾ ವೇದಿಕೆಯಲ್ಲಿ ಒಂಬತ್ತು ದಿನಗಳ ಕಾಲ ನಡೆದು ಒಂಬತ್ತನೇ ದಿನವಾದ ಮಂಗಳವಾರ ಶ್ರೀ ಶಾರದಾದೇವಿಯ ವೈಭವದ ಶೋಭಾಯಾತ್ರೆ ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿತು.
ಮಂಗಳವಾರ ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ ನಡೆಯಿತು. ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಶ್ರೀದೇವಿಗೆ ವಿಶೇಷ ಅಲಂಕಾರೊಂದಿಗೆ, ವಿದ್ಯುತ್ ದೀಪಗಳಿಂದ ಅಲಂರ್ಕತಗೊಂಡ ಮಂಟಪದಲ್ಲಿ ಅಪರಾಹ್ನ ಶ್ರೀ ಶಾರದಾ ದೇವಿಯ ಶೋಭಾಯಾತ್ರೆಗೆ ಚೆನ್ನಕೇಶವ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಚಾಲನೆ ನೀಡಲಾಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಸುಳ್ಯ ತಹಶೀಲ್ದಾರ್ ಮಂಜುಳಾ ಅವರು ಶೋಭಾಯಾತ್ರೆ ಚಾಲನೆ ನೀಡಿದರು. ಶೋಭಾಯಾತ್ರೆಯ ಸಂದರ್ಭದಲ್ಲಿ ಆಯ್ದ ಸ್ಥಳಗಳಲ್ಲಿ ಭಕ್ತರಿಂದ ಹಣ್ಣು ಕಾಯಿ ಸ್ವೀಕರಿಸಲಾಯಿತು.
ಶಾರದಾಂಬ ಉತ್ಸವ ಸಮೂಹ ಸಮಿತಿಗಳ ಪ್ರಮುಖರಾದ ನಾರಾಯಣ ಕೇಕಡ್ಕ, ಡಾ.ಲೀಲಾಧರ ಡಿ.ವಿ., ಕೃಷ್ಣ ಕಾಮತ್ ಅರಂಬೂರು, ಕೆ.ಗೋಕುಲದಾಸ್, ರಾಜು ಪಂಡಿತ್, ಅಶೋಕ ಪ್ರಭು, ಸಂತೋಷ್ ಕುತ್ತಮೊಟ್ಟೆ, ಬೂಡು ರಾಧಾಕೃಷ್ಣ, ನವೀನ್‌ಚಂದ್ರ ಕೆ.ಎಸ್., ಎಂ.ಕೆ.ಸತೀಶ, ಗಣೇಶ್ ಆಳ್ವ, ಸುನಿಲ್‌ಕೇರ್ಪಳ, ಲತಾ ಮಧುಸೂದನ್,ವೆಂಕಪ್ಪ ಗೌಡ,ಭವಾನಿಶಂಕರ ಕಲ್ಮಡ್ಕ ಚೇತನ್ ಕಜೆಗದ್ದೆ ಸೇರಿದಂತೆ ಸಮಿತಿಯ ಪದಾಕಾರಿಗಳು, ಭಕ್ತರು, ಸಾರ್ವಜನಿಕರು ಭಾಗವಹಿಸಿದ್ದರು.
ಆಕರ್ಷಕ ಸ್ತಬ್ಧಚಿತ್ರಗಳು:
ಶೋಭಾಯಾತ್ರೆ ಮೆರವಣಿಗೆಯಲ್ಲಿ ವಿವಿಧ ರೀತಿಯ ಆಕರ್ಷಕ ಸ್ತಬ್ಧ ಚಿತ್ರಗಳು ಕಣ್ಮನಸೆಳೆಯಿತು. ವಿವಿಧ ಇಲಾಖೆ, ಸಂಘಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಹತ್ತಕ್ಕೂ ಅಧಿಕ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿಬಂದವು. ಹುಲಿ ಕುಣಿತ, ಸಿಂಹ ಕುಣಿತ, ಪೌರಾಣಿಕ ಕಥೆಗಳ ಪ್ರಸ್ತುತ ಪಡಿಸುವ ಸ್ತಬ್ಧ ಚಿತ್ರಗಳು, ಹಾಸ್ಯಮಯ ಸ್ತಬ್ಧಚಿತ್ರಗಳು, ಪ್ರಾಣಿಗಳ ಸೇರಿದಂತೆ ವಿವಿಧ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಸಗವಹಿಸಿದ್ದವು. ಶೋಭಾಯಾತ್ರೆ ಸಂದರ್ಭದಸಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಸುಳ್ಯ ದಸರಾ ಸಂಪನ್ನ, ವೈಭವದಿಂದ ನಡೆದ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ



































