ನಾಳೆ ದಿನ (ಅ.17) ಕೊಡಗು ಜಿಲ್ಲೆಯ ಕುಲ ದೇವತೆ, ಆರಾಧ್ಯ ದೇವಿ ಶ್ರೀ ಕಾವೇರಿ ಮಾತೆಯು ಐತಿಹಾಸಿಕ ಹಿನ್ನಲೆಯಂತೆ ವರ್ಷದ ಒಂದು ದಿನವಾದ ತುಲಾ ಸಂಕ್ರಮಣ ದಿನದಂದು ತಲಕಾವೇರಿಯಲ್ಲಿ ಶ್ರೀ ಕಾವೇರಿಯಮ್ಮ ತೀರ್ಥ ರೂಪಿಣಿಯಾಗಿ ಕಾಣಿಸಿಕೊಳ್ಳುವ ತೀರ್ಥ್ತೋದ್ಭವದ ಸಂಭ್ರಮ, ಸಡಗರದ ಕಾವೇರಿ ಜಾತ್ರೆಯ ಪುಣ್ಯ ದಿನ. ಮಧ್ಯಾಹ್ನ 1ಗಂಟೆ, 44 ನಿಮಿಷದ ಶುಭ ಮುಹೂರ್ತದಲ್ಲಿ ತೀರ್ಥ್ತೋದ್ಭವದ ಆಗಲಿದೆ.ಇದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.
ಕನ್ನಡ ನಾಡಿನ ಜೀವ ನದಿ ಕಾವೇರಿಯ ಹುಟ್ಟಿನ ಇತಿಹಾಸದ ಹಿನ್ನಲೆಯೇ ರೋಚಕ.ಸ್ಕಂದ ಪುರಾಣದಂತೆ ಕವೇರ ಮುನಿಗಳು ತನಗೆ ಮಕ್ಕಳಿಲ್ಲದ ಕೊರಗಿನಲ್ಲಿ ಮಕ್ಕಳನ್ನು ಪಡೆಯಲು ಬ್ರಹ್ಮನನ್ನು ಒಲಿಸಿಕೊಳ್ಳಲು ಕಠಿಣಾತಿ ಕಠಿಣವಾದ ತಪಸ್ಸು ಸಹ್ಯಾ ಪರ್ವತದಲ್ಲಿ ಆಚರಿಸುತ್ತಾರೆ. ಇದರ ಫಲವಾಗಿ ಬ್ರಹ್ಮನಿಂದ ಮಾನಸ ಪುತ್ರಿ, ವಿಷ್ಣುಮಾಯೆ ಎನ್ನುವ ಮಗಳನ್ನು ದತ್ತು ಪಡೆಯುತ್ತಾರೆ. ಮುಂದೆಗೆ ಈಕೆಗೆ ಕವೇರ ಮುನಿಯ ಮಗಳಾದ ಕಾರಣ ಕಾವೇರಿ ಎಂದು ನಾಮಕರಣ ಮಾಡುತ್ತಾರೆ. ಭವಿಷ್ಯದಲ್ಲಿ ಕಾವೇರಿಯ ಜೀವನ ಚರಿತ್ರೆ ಅಗಸ್ತ್ಯ ಮುನಿಗಳ ಪತ್ನಿಯಾಗಿ ಕೊನೆಗೆ ದಕ್ಷಿಣದ ನೀರಿನ ಕ್ಷಮಾ ನಿವಾರಣೆ ನದಿಯಾಗಿ ಹರಿಯುವ ವರ ನೀಡಿರುತ್ತಾರೆ. ಹಾಗೆ ಕಾವೇರಿ ಹಿಮಾಲಯದಲ್ಲಿ ಶಿವ ದೇವನನ್ನು ಒಲಿಸಿಕೊಳ್ಳಲು ತಪಸ್ಸು ಆಚರಿಸಲು ತೆರಳಿದವಳಿಗೆ ಅಗಸ್ತ್ಯ ಮುನಿಗಳ ಪರಿಚಯವಾಗುತ್ತದೆ. ಕಾವೇರಿಯ ರೂಪಕ್ಕೆ ಮನಸೋತ ಅಗಸ್ತ್ಯ ಮುನಿಗಳು ಕವೇರ ಮುನಿಗಳಲ್ಲಿ ಕಾವೇರಿಯನ್ನು ಮದುವೆ ಮಾಡಿಕೊಳ್ಳುವಂತೆ ಕೋರಿಕೊಳ್ಳುತ್ತಾರೆ. ತಂದೆಯ ಮಾತಿಗೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಕಾವೇರಿ ಅಗಸ್ತ್ಯ ಮುನಿಗಳನ್ನು ವರಿಸಲು ಒಪ್ಪಿಗೆ ಸೂಚಿಸುವ ಮೊದಲು ಒಂದು ಶರತ್ ವಿಧಿಸುತ್ತಾಳೆ. ತನ್ನನ್ನು ಯಾವುದೇ ಸಂಧರ್ಭದಲ್ಲಿ ಎಲ್ಲಿಯೂ ಒಂಟಿಯಾಗಿ ಬಿಟ್ಟು ಹೋಗದೆ ಜೊತೆಯಲ್ಲಿಯೇ ಇಟ್ಟುಕೊಳ್ಳುವಂತೆ ಕೋರಿಕೊಳ್ಳುತ್ತಾಳೆ. ಅಗಸ್ತ್ಯ ಮುನಿಗಳು ಆಕೆಯ ಒಪ್ಪಂದಕ್ಕೆ ಒಪ್ಪಿಕೊಂಡು ಮದುವೆ ಮಾಡಿಕೊಳ್ಳುತ್ತಾರೆ.
ಹೀಗಿರುವಾಗ ಒಮ್ಮೆ ದಕ್ಷಿಣ ಬಾರತದಲ್ಲಿ ನೀರಿಗೆ ಹಾಹಾಕಾರವಾದ ಸಂದರ್ಭದಲ್ಲಿ ಅಗಸ್ತ್ಯ ಮುನಿಗಳು ಉತ್ತರದಿಂದ ದಕ್ಷಿಣ ಭಾರತಕ್ಕೆ ಬರುತ್ತಾರೆ. ಆ ಸಂಧರ್ಭದಲ್ಲಿ ವಿಂದ್ಯಾ ಪರ್ವತ ಸೂರ್ಯನಿಗಿಂತ ಎತ್ತರಕ್ಕೆ ಬೆಳೆಯಲು ಪಣತೊಟ್ಟು ಸೂರ್ಯ, ನಕ್ಷತ್ರರಿಗೆ ಭೂಮಿಗೆ ಬೆಳಕು ನೀಡುವುದು ಬೆಟ್ಟ ಅಡ್ಡವಾಗಿ ಕಷ್ಟವಾಗುತಿತ್ತು.
ಅಗಸ್ತ್ಯರು ನಾನು ದಕ್ಷಿಣದ ಕಡೆ ಪ್ರಯಾಣ ಬೆಳೆಸುವ ಕಾರಣ ವಿಂದ್ಯಾ ಪರ್ವತವೇ ನಿನ್ನ ಶಿರ ತಗ್ಗಿಸು ನಾನು ತಿರುಗಿ ಬರುವ ತನಕ ನೀನು ತಲೆಬಾಗಿರು ಎಂದು ಹೇಳಿ ದಕ್ಷಿಣದ ಕಡೆ ಬರುತ್ತಾರೆ. ಮತ್ತೆಂದೂ ಅಗಸ್ತ್ಯರು ಉತ್ತರದ ಕಡೆ ಪ್ರಯಾಣ ಬೆಳೆಸದ ಕಾರಣ ವಿಂದ್ಯಾ ಪರ್ವತ ಹಾಗೆಯೇ ಎತ್ತರಕ್ಕೆ ಬೆಳೆಯದೆ ಉಳಿದು ಬಿಟ್ಟಿತ್ತು ಎಂದು ಇತಿಹಾಸ ಹೇಳುತ್ತದೆ.
ನೂರು ಕೊಂಬೆಗಳಿರುವ ನೆಲ್ಲಿ ಮರದಡಿಯಲ್ಲಿ ವಾಸವಿದ್ದ ಅಗಸ್ತ್ಯರು ಒಮ್ಮೆ ಸಮೀಪದ ಕನ್ನಿಕೆ ನದಿಗೆ ಸ್ನಾನಕ್ಕೆ ಹೋಗುತ್ತಾರೆ. ಕಾವೇರಿ ನಿದ್ರೆಯಲ್ಲಿ ಇರುವ ಕಾರಣ ಎಬ್ಬಿಸದೆ ತನ್ನ ಕಮಂಡಲದಲ್ಲಿ ಆವಾಹಿಸಿ ಹೋಗುತ್ತಾರೆ. ಅಷ್ಟು ಹೊತ್ತಿಗೆ ಬೀಸಿದ ಬಿರುಗಾಳಿಗೆ ಅಗಸ್ತ್ಯರ ಕಮಂಡಲ ಉರುಳಿ ಬೀಳುತ್ತದೆ. ಇದೇ ಸಂಧರ್ಭದಲ್ಲಿ ತನ್ನನ್ನು ಒಂಟಿಯಾಗಿ ಬಿಟ್ಟು ಸ್ನಾನಕ್ಕೆ ಹೋಗಿದ್ದ ಪತಿಯ ಮೇಲಿನ ಸಿಟ್ಟಿಗೆ ಕಾವೇರಿ ಕಮಂಡಲದಿಂದ ಹೊರಬಂದು ನದಿಯ ರೂಪದಲ್ಲಿ ಹರಿಯುತ್ತಾಳೆ. ಇದರೊಂದಿಗೆ ವಿಷ್ಣು ವನ್ನು ಪೂಜಿಸಲು ಅಗಸ್ತ್ಯರು ದೇವಲೋಕದ ವ್ರಜಾ ನದಿಯಿಂದ ತಂದ ನೀರು ಕೂಡ ಹರಿದು ಅಂತರ್ಮುಖಿಯಾಗಿ ಕೆಳಗಿನ ಭಾಗಮಂಡಲದಲ್ಲಿ ಕನ್ನಿಕೆ, ಸುಜ್ಯೋತಿ, ಗುಪ್ತಗಾಮಿನಿ ತ್ರಿವೇಣಿ ಸಂಗಮದಲ್ಲಿ ಕಾಣಿಸಿಕೊಳ್ಳುತ್ತಾಳೆ. ಇನ್ನೊಂದು ಪುರಾಣದ ಪ್ರಕಾರ ಹಿಂದೆ ಶೂರಪದ್ಮ ರಾಕ್ಷಸನೊಬ್ಬ ದಕ್ಷಿಣಭಾರತಕ್ಕೆ ಮಳೆ ಬರುವುದನ್ನು ತನ್ನ ಮಾಯಾ ಶಕ್ತಿಯಿಂದ ತಡೆಯುತ್ತಿದ್ದನಂತೆ ಇಂದ್ರ ಅಣತಿಯಂತೆ ಗಣಪತಿ ಕಾಗೆಯ ರೂಪದಲ್ಲಿ ಅಗಸ್ತ್ಯರ ಕಮಂಡ ನೆಲಕ್ಕೆ ಉರುಳಿಸಿದ ಪರಿಣಾಮಕ್ಕೆ ನದಿಯಾಯಿತು ಎನ್ನುವ ಪೌರಾಣಿಕ ಕಥೆಯು ಸಹ ಅಡಕವಾಗಿದೆ.
ಹೀಗೆ ಕೆಲವು ವಿಭಿನ್ನ ರೀತಿಯಲ್ಲಿ ಕಾವೇರಿಯ ಹುಟ್ಟು ಚರಿತ್ರೆ ಇತಿಹಾಸದ ಪುಟ ಸೇರಿದೆ.
ಕೊಡಗಿನಲ್ಲಿ ಮಹಿಳೆಯರು ಸೀರೆ ಸೆರಗನ್ನು ಹಿಮ್ಮುಖವಾಗಿ ಧರಿಸಲು ಒಂದು ಕಾರಣವಿದೆ ಕೊಡವ ಹೆಂಗಸರು ಒಮ್ಮೆ ಬಲಮುರಿ ಎನ್ನುವಲ್ಲಿ ವಿಹಾರಕ್ಕೆಂದು ತೆರಳಿದ್ದ ಸಮಯದಲ್ಲಿ ಬಲವಾಗಿ ಬೀಸಿದ ಗಾಳಿಯ ರಭಸಕ್ಕೆ ಉಟ್ಟ ಸೀರೆಯ ಸೆರಗು ಮುಂದಿನಿಂದ ಹಿಂದಕ್ಕೆ ಜಾರಿದ ಪರಿಣಾಮ ಕೊಡಗಿನ ಮಹಿಳೆಯರು ಅಂದಿನಿಂದ ಇಂದಿನ ತನಕ ಸೀರೆ ಸೆರಗು ಬೆನ್ನಿನ ಹಿಂಭಾಗ ಕಟ್ಟುವ ಸಂಪ್ರದಾಯ ಮುಂದುವರಿಸಿದರು ಎನ್ನುವ ಪ್ರತೀತಿ ಇದೆ.
ಕನ್ನಡ ನಾಡಿನ ನಗರದ ನೀರಿನ ಬವಣೆ, ರೈತರ ಕೃಷಿ ಭೂಮಿಗೆ ನಿರುಣಿಸುವ ಕಾವೇರಿ ಆಣೆಕಟ್ಟು, ವಿದ್ಯುತ್, ಒದಗಿಸಿ ಕರ್ನಾಟಕದಲ್ಲಿ 381 ಕಿ ಮೀ ಹರಿದು ತಮಿಳುನಾಡು, ಕೇರಳ, ಪಾಂಡೀಚೆರಿ, ನಾಲ್ಕು ರಾಜ್ಯಗಳ ನೀರಿನ ಬೇಡಿಕೆಗೆ ಜೀವ ನದಿಯಾಗಿ ಒಟ್ಟು 807 ಕಿ ಮೀ ದೂರ ಕ್ರಮಿಸಿ ಬಂಗಾಳ ಕೊಲ್ಲಿ ಸಮುದ್ರದ ನೀರಿನಲ್ಲಿ ನಿತ್ಯ ಜೀವಂತವಾಗಿ ತನ್ನ ಶಕ್ತಿ ತೋರಿದ್ದಾಳೆ.
ಸಮುದ್ರ ಮಟ್ಟದಿಂದ 5000 ಅಡಿ ಎತ್ತರದ ತಲಕಾವೇರಿಯನ್ನು ಸೇರಿ ನಾಳೆದಿನ ಕಾವೇರಿ ಮಾತೆಯನ್ನು ನಂಬಿ ಹೋದ ಭಕ್ತರಿಗೆ ಕಾವೇರಿ ಪುಣ್ಯ ನೀಡಲಿದ್ದಾಳೆ .ಅಂದು ಸೇವಿಸುವ ಪುಣ್ಯ ತೀರ್ಥದಿಂದ ಭಕ್ತರ ಸಕಲ ಪಾಪ ಕಳೆದು ಹೋಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
✍️ ಹರೀಶ್ ಕೆ.ಸಿ
ಪೆರಾಜೆ
ನಾಳೆ ತಲಕಾವೇರಿಯಲ್ಲಿ ಶ್ರೀ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಅವತರಿಸುವ ಕಾವೇರಿ ಜಾತ್ರೆಯ ಸಂಭ್ರಮ

















