ಸುಳ್ಯ ನಗರ ಪಂಚಾಯತ್ನ ಮಾಜಿ ಅಧ್ಯಕ್ಷರು, ಸುಳ್ಯದ ಹಿರಿಯ ನ್ಯಾಯವಾದಿಯಾಗಿರುವ ಎಂ.ವೆಂಕಪ್ಪ ಗೌಡ ಹಾಗೂ ಚಂಪಾ ವೆಂಕಪ್ಪ ಗೌಡರು ಸುಳ್ಯದ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಿಸಿದ ಆರೋಹಿ ಎನ್ಕ್ಲೇವ್ ಸಂಕೀರ್ಣದ ಶುಭಾರಂಭ ಹಾಗೂ ಗಾಂಧಿನಗರದಲ್ಲಿದ್ದ ಎಂ.ವೆಂಕಪ್ಪ ಗೌಡರ ನ್ಯಾಯವಾದಿ ಕಚೇರಿಯ ಸ್ಥಳಾಂತರಗೊಂಡಿದ್ದು ಅದರ ಉದ್ಘಾಟನಾ ಕಾರ್ಯಕ್ರಮ ನ.೮ರಂದು ನಡೆಯಿತು.
ಎಂ.ವೆಂಕಪ್ಪ ಗೌಡರ ಸಹೋದರ ಪೆರ್ಗಡೆ ಗೌಡರು ಹಾಗೂ ಚಂಪಾ ವೆಂಕಪ್ಪ ಗೌಡರ ತಂದೆ ಪುಂಗವ ಗೌಡರು ನೂತನ ಸಂಕೀರ್ಣದ ಎದುರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.
ನ್ಯಾಯವಾದಿ ಕಚೇರಿಯಲ್ಲಿ ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ರಾಮಚಂದ್ರರು ದೀಪ ಬೆಳಗಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ವಹಿಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಮಂಜುಳಾ, ನ.ಪಂ. ಮಾಜಿ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ, ಸುಳ್ಯ ಎನ್ನೆಂಸಿ ನಿವೃತ್ತ ಪ್ರಾಂಶುಪಾಲ ಪ್ರೊ| ದಾಮೋದರ ಗೌಡ ಕೆ.ವಿ., ಕಲ್ಕುಡ ದೈವಸ್ಥಾನದ ಪ್ರಮುಖರಾದ ಪಿ.ಕೆ. ಉಮೇಶ್, ಉದ್ಯಮಿ ನಂದಕುಮಾರ್ ಮಡಿಕೇರಿ, ಲಯನ್ಸ್ ಮಾಜಿ ಗನರ್ವರ್ ಎಂ.ಬಿ.ಸದಾಶಿವ, ನಾಗಭೂಷನ್ ಗುರೂಜಿ, ಕಟ್ಟಡದ ಇಂಜೀನಿಯರ್ ವಿಜಯಕುಮಾರ್ ತುದಿಯಡ್ಕ ಶುಭಹಾರೈಸಿದರು.
ನಾಲ್ಕಂತಸ್ತಿನ ಸಂಕೀರ್ಣ ಇದಾಗಿದ್ದು ನೆಲ ಮಹದಿಯಲ್ಲಿ ವಾಣಿಜ್ಯ ಸಂಕೀರ್ಣವಾಗಿದ್ದು ಎರಡನೇ ಮಹಡಿಯ ಎದುರು ಭಾಗದಲ್ಲಿ ನ್ಯಾಯವಾದಿ ಕಚೇರಿಯನ್ನು ತೆರೆಯಲಾಗಿದೆ. ಹಿಂಬದಿಯಲ್ಲಿ ಹಾಗೂ ಮೂರನೇ ಮಹಡಿಯಲ್ಲಿ ಬಾಡಿಗೆ ಕೊಠಡಿಗಳನ್ನು ಮಾಡಲಾಗಿದ್ದು, ಅದರ ಮೇಲೆ ೧೦೦ ಜನರು ಕುಳಿತುಕೊಳ್ಳಬಹುದಾದ ವಿಶಾಲವಾದ ಹಾಲ್ ನ್ನು ಮಾಡಲಾಗಿದೆ.
ಸಾವಿರಾರು ಮಂದಿ ಆಗಮಿಸಿ ವೆಂಕಪ್ಪ ಗೌಡ ದಂಪತಿಗಳಿಗೆ ಹಾಗೂ ಅವರ ಮಗ ಮನ್ಜೀತ್ಎಂ. ಗೌಡರಿಗೆ ಶುಭಾಶಯ ಕೋರಿದರು. ಬೆಳಗ್ಗೆ ೧೧ ಗಂಟೆಯಿಂದಲೇ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಿರೂಪಕರಾದ ಹರ್ಷಿತ್ ಮರ್ಕಂಜ ಕಾರ್ಯಕ್ರಮವನ್ನು ನಿರ್ವಹಿಸಿದರು.
ಅಂಬಟೆಡ್ಕ: ಎಂ.ವೆಂಕಪ್ಪ ಗೌಡ ಮಾಲಕತ್ವದ ಆರೋಹಿ ಎನ್ ಕ್ಲೇವ್ ಸಂಕೀರ್ಣ ಶುಭಾರಂಭ ಹಾಗೂ ಕಚೇರಿ ಉದ್ಘಾಟನೆ

















