ಉಳ್ಳಾಲ: ನಾಯಿ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿದ ಘಟನೆ ಉಳ್ಳಾಲದ ಕುಂಪಲದಲ್ಲಿ 14ರಂದು ನಡೆದಿದೆ.
ಮೃತ ವ್ಯಕ್ತಿಯನ್ನು ಕುಂಪಲ ನಿವಾಸಿ ದಯಾನಂದ (60 ವ) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಕುಂಪಲ ಬೈಪಾಸ್ ಬಳಿ ರಸ್ತೆ ಬದಿಯ ಅಂಗಡಿಯ ಎದುರಲ್ಲಿ ಕಳೆದ ರಾತ್ರಿ ದಯಾನಂದ ಮಲಗಿದ್ದರು. ಮದ್ಯಪಾನ ಸೇವಿಸಿ ಮಲಗಿದ್ದ ಇವರ ಮೇಲೆ ಮುಂಜಾನೆ ವೇಳೆ ನಾಯಿ ದಾಳಿ ಮಾಡಿದೆ. ಈ ವೇಳೆ ಅಲ್ಲಿಂದ ರಸ್ತೆಯ ಮತ್ತೊಂದೆಡೆಯ ಮನೆಯತ್ತ ಓಡಿದ್ದರು. ಅಲ್ಲಿಯೂ ಬೆನ್ನಟ್ಟಿದ್ದ ನಾಯಿ ಮತ್ತೆ ದಾಳಿ ನಡೆಸಿ ಕೊಂದು ಹಾಕಿತ್ತು.
ರಸ್ತೆ ಬದಿ ಮೃತದೇಹ ಕಂಡ ಸ್ಥಳೀಯರು ಇದೊಂದು ಕೊಲೆ ಎಂದೇ ಭಾವಿಸಿದ್ದರು. ದೇಹದ ಮೇಲೆ ಕಡಿದ ರೀತಿಯ ಗಾಯಗಳು ಅಷ್ಟೊಂದು ತೀವ್ರವಾಗಿತ್ತು. ವ್ಯಕ್ತಿ ಕಣ್ಣು ಸೇರಿ ದೇಹ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ತಜ್ಞರು ಇದೊಂದು ಪ್ರಾಣಿ ದಾಳಿ ಎಂದು ಸೂಚಿಸಿದರು. ಬಳಿಕ ಇದು ನಾಯಿಯ ದಾಳಿ ಎಂದು ಖಚಿತವಾಯಿತು.
ಸದ್ಯ ನಾಯಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಯಿ ದಾಳಿಗೆ ವ್ಯಕ್ತಿ ಸಾವು

















