ಸಾಹಿತ್ಯ ಎಂಬುದು ವ್ಯಕ್ತಿಗೆ, ಜನತೆಗೆ, ಸಮಾಜಕ್ಕೆ ಹಿತವಾಗಿರಬೇಕು. ತನ್ನ ಹಿತಕ್ಕಿಂತಲೂ ಸಮಾಜದ ಹಿತವೇ ಮುಖ್ಯ ಎನಿಸುವಂತಿರಬೇಕು. ಅದು ಭವಿಷ್ಯದ ಏಳಿಗೆಗೆ, ಅಭಿವೃದ್ಧಿಗೆ ಪೂರಕವಾಗಿರಬೇಕು ಎಂಬ ಅಭಿಪ್ರಾಯವಿದೆ ಎಂದು ಸಾಹಿತಿ ಎ.ಕೆ ಹಿಮಕರ ಹೇಳಿದರು
ಅವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಪಂಜ ಹೋಬಳಿ ಘಟಕ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ
ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದ ಸರೋಜಿನಿ ಗಂಗಯ್ಯ ಮುಳುಗಾಡು ವೇದಿಕೆ,ಯು.ಸು ಗೌಡ ಸಭಾಂಗಣದಲ್ಲಿ ನಡೆದ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷ ನೆಲೆಯಿಂದ ಮಾತನಾಡಿದರು.
ಕತೆ ಬರೆಯುವುದು, ಕಾವ್ಯ ರಚಿಸುವುದು ಮನುಷ್ಯನ ಸೃಜನಶೀಲ ಕ್ರಿಯೆಯಾಗಿದೆ. ತನ್ನ ಹೃದಯಾಂತರಾಳದ ಭಾವನೆಗಳನ್ನು ಮನದಾಳದ ಇಂಗಿತವನ್ನು ಮೊದಲ ಹಂತದಲ್ಲಿ ಧ್ವನಿ ಮೂಲಕವೂ ನಂತರದಲ್ಲಿ ಅಕ್ಷರ ರೂಪದಲ್ಲೂ ತೋರ್ಪಡಿಸುತ್ತಾ ಬಂದಿದ್ದಾನೆ. ಇದರೊಂದಿಗೆ ಕಲೆಯನ್ನು ಮಾಧ್ಯಮವಾಗಿ ರೂಡಿಸಿಕೊಂಡಿದ್ದಾನೆ ಎಂಬುವುದನ್ನು ನಾವು ಸಾಹಿತ್ಯ ಚರಿತ್ರೆಯಲ್ಲಿ ನೋಡಬಹುದು.
ಸಾಹಿತ್ಯದ ಗುರಿ:ಉದ್ದೇಶಗಳು:
ರಷ್ಯಾದ ಪ್ರಕನೋವ್ ಎಂಬ ಕಲಾ ವಿಮರ್ಶಕನು, ಕಲೆಯ ಉದ್ದೇಶದ ಬಗ್ಗೆ ವಿವರಿಸುತ್ತಾ “ಕಲೆಗಾಗಿ ಕಲೆ ಅಲ್ಲ; ಜನರಿಗಾಗಿ ಕಲೆ” ಎಂದು ಹೇಳಿದ್ದಾನೆ. ಕಲೆಯು ನಮ್ಮ ಮನೆಯ ಗೋಡೆಗಳನ್ನು ಅಲಂಕರಿಸುವುದಕ್ಕಾಗಿ ಅಲ್ಲ, ಬದಲಿಗೆ ಕಲೆಯು ಜನರ ಉಳಿತಿಗಾಗಿ ಇರಬೇಕು; ಅದಕ್ಕೊಂದು ಸಾಮಾಜಿಕ ಉದ್ದೇಶವಿದೆ. ಹಾಗೆಯೇ ಸಾಹಿತ್ಯ ಕೂಡಾ. ಮನುಷ್ಯ ಮಾತು ಕಲಿತದ್ದೇ ತನ್ನ ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ. ಮಾತು ಬಾರದ ಪ್ರಾಣಿಗಳು ಕೂಡಾ ಸದ್ದು ಮಾಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಅಕ್ಷರ ಕಲಿತ ಮನುಷ್ಯ ಕಲೆ ಮತ್ತು ಸಾಹಿತ್ಯದ ಮೂಲಕ ತನ್ನ ಅಭಿಪ್ರಾಯವನ್ನು ಸಮರ್ಥವಾಗಿ ಸಮಾಜದ ಮುಂದಿಡಬಲ್ಲ.
ಚಾರಿತ್ರಿಕವಾಗಿ ಮಾನವನು ವಿಕಾಸ ಹೊಂದುವಲ್ಲಿ ಹೆಬ್ಬೆರಳು ಉಳಿದ ಬೆರಳುಗಳಿಂದ ಪ್ರತ್ಯೇಕವಾದದ್ದು, ತಂತ್ರ ಸಾಧನಗಳನ್ನು ಬಳಸುವುದನ್ನು ಕಲಿತುಕೊಳ್ಳುವ ಪ್ರಕ್ರಿಯೆಯಲ್ಲಿ ಮತ್ತು ತನ್ನ ಅನುಭವಗಳನ್ನು ಮಾಹಿತಿ ರೂಪದಲ್ಲಿ ಶೇಖರಿಸಿಡುವ ಪ್ರಕ್ರಿಯೆಯಲ್ಲಿ ಆತನ ಹಣೆಯು ಮುಂದೆ ಬಂದಿರುವುದನ್ನು ನಿಯೋಲಿತಿಕ್ ರೆವೈಲ್ಯೂಶನ್ ಎನ್ನಲಾಗುತ್ತಿದೆ. ಮಾನವನ ವ್ಯಕ್ತಿಗತ ಮತ್ತು ಸಾಮಾಜಿಕ ಅನುಭವಗಳನ್ನು ಮಾಹಿತಿಯನ್ನು ಅಕ್ಷರ ರೂಪದಲ್ಲಿ ಶೇಖರ ಮಾಡಿಡುವ ಉದ್ದೇಶದಿಂದ ಅಕ್ಷರಮಾಲೆ ಮತ್ತು ಸಾಹಿತ್ಯವು ಬೆಳದಿದೆ. ಸಾಹಿತ್ಯವು ಮಾನವೀಯ ಸಂಬಂಧಗಳ ತುಡಿತವನ್ನು ಹೊಂದಿರಬೇಕು. ಮಕ್ಕಳು, ಮಹಿಳೆಯರು, ಕೆಳಸ್ತರ ಜನರ, ಶೋಷಿತರ, ಉತ್ತೀಡಿತರ ದೌರ್ಜನ್ಯಕ್ಕೊಳಗಾದವರ, ಆಸಹಾಯಕತೆ, ಬಡವರ ಹಿತಕಾಯುವಂತಿದ್ದರೆ ಅದು ಜನ ಸಾಹಿತ್ಯವಾಗಬಲ್ಲುದು ಮತ್ತು ಜನಪರ ಮತ್ತು ಪ್ರಗತಿಪರ ಎಂದು ಪರಿಗಣಿಸಲ್ಪಡುತ್ತದೆ. ಇದೇ ಅಭಿವೃದ್ಧಿ ಪರವಾದ ಸಾಹಿತ್ಯಕ ಕಾಳಜಿಯಾಗುತ್ತದೆ.
ಸಾಹಿತ್ಯವು ಚರಿತ್ರೆಯುದ್ದಕ್ಕೂ ಸರ್ವಾಧಿಕಾರದ ವಿರುದ್ದ ಸೆಣಸಾಡುತ್ತಾ ಬಂದಿದೆ. ಪ್ರಾಣ ಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ನಂತರದ ಸ್ಥಾನವನ್ನು ಪತ್ರಿಕಾರಂಗಕ್ಕೆ ನೀಡಲಾಗಿದ್ದು, ಅದನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಪರಿಗಣಿಸಲಾಗಿದೆ.
ಪ್ರಾಚೀನ ಗ್ರೀಸ್ ಮತ್ತು ರೋಮ್‌ನಲ್ಲಿ ‘ಬಾಡ್ ಸಿಂಗರ್ಸ್’ ಎಂಬುದಾಗಿ ಕರೆಯಲ್ಪಡುವ ಮಂದಿ ಚರಿತ್ರೆಯನ್ನು ಹಾಡಿನ ರೂಪದಲ್ಲಿ ದಾಖಲಿಸಿರುವುದಾಗಿ ತಿಳಿದು ಬರುತ್ತದೆ. ಬಾಡ್ ಸಾಂಗ್ಸ್ ಸುಮಾರಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಂಡು ಬರುವ ಲಾವಣಿಗಳೊಂದಿಗೆ ಹೋಲಿಸಬಹುದು. ತುಳುನಾಡಿನ ಭಾಗವಾಗಿರುವ ಸುಳ್ಯದಲ್ಲಿ ಲಾವಣಿಗಳು ಚಾಲ್ತಿಯಲ್ಲಿದ್ದ ಬಗ್ಗೆ ತಿಳಿದು ಬರುವುದಿಲ್ಲ. ಆದರೆ ಪ್ರಾಚೀನ ಚರಿತ್ರೆಯನ್ನು ಲಾವಣಿಗಳ ಬದಲಿಗೆ ಸಂಧಿ ಪಾಡ್ಡನಗಳಲ್ಲಿ ಕಾಣಬಹುದು. ಭೂತಾರಾಧನೆ ಮತ್ತು ಕೃಷಿ ಬದುಕಿನೊಂದಿಗೆ ಬಂದಿರುವ ಮೌಖಿಕ ಸಾಹಿತ್ಯವನ್ನು ನಮ್ಮ ಆರಂಭಿಕ ಸಾಹಿತ್ಯ ಪರಂಪರೆ ಎನ್ನಬಹುದು ಎಂದರು.



































