ಸುಳ್ಯ : ಕಾವ್ಯ ಸೆಳೆದಷ್ಟು ಬೇರೆ ಯಾವ ಸಾಹಿತ್ಯ ಪ್ರಕಾರವು ನಮ್ಮನ್ನು ಸೆಳೆಯುವುದಿಲ್ಲ.ಕವನಗಳನ್ನು ಬರೆಯಲು ವಯಸ್ಸಿನ ಅಂತರವಿಲ್ಲ ಕೇವಲ ಭಾವನೆಗಳ ಸಮತೋಲನವನ್ನು ಅರ್ಥ ಮಾಡಿಕೊಂಡರೆ ಸಾಕು.ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುವವನು ಮೊದಲು ಕವಿಯಾಗಿ ಪಾದಾರ್ಪಣೆ ಮಾಡುತ್ತಾನೆ.ಸಾಹಿತಿಯಾದವನಿಗೆ ಅಭಿಮಾನ ಮತ್ತು ಅವಮಾನಗಳನ್ನು ಸಹಿಸಿಕೊಳ್ಳುವ ಇರಬೇಕೆಂದು ಸಾಹಿತಿ ಹಾಗೂ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ.ಶಾಲಿನಿ ಡಿ.ಎಲ್ ಹೇಳಿದರು.
ಅವರು ಕುಕ್ಕುಜಡ್ಕದಲ್ಲಿ ನಡೆಯುತ್ತಿರುವ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾಷಾ ಪ್ರೇಮಿಯಾದವನು ಕವಿತೆ ರಚಿಸಬಹುದು. ಕವನದಲ್ಲಿ ನಮ್ಮಲ್ಲಿರುವ ಭಾವನೆಗಳಿಗೆ ಉಸಿರು ನೀಡಬೇಕು.ಕವಿತೆಗಳು ಅಮೂಲ್ಯವಾಗಬೇಕಾದರೆ ಪುಸ್ತಕ ರೂಪದಲ್ಲಿ ಹೊರ ಬರಬೇಕು.ಭಾವನೆಗಳ ಸಮತೋಲನವನ್ನು ಅರ್ಥ ಮಾಡಿಕೊಂಡಾಗ ಕಾವ್ಯ ಹೊರಹೊಮ್ಮುತ್ತದೆ ಎಂದು ಹೇಳಿದರು.
ಕವಿಗಳಾದ ಪರಿಮಳ ಐವರ್ನಾಡು, ಮಮತಾ ಸುಧೀರ್ ಚಿದ್ಗಲ್ ರೇಣುಕಾ ಆರ್.ನಾವಲಗಿ, ಅನುರಾಧ ಶಿವಪ್ರಕಾಶ್,ಮಾನ್ಯಶ್ರೀ ಕೆ.ಎಂ.ಪುಳಿಕುಕ್ಕು, ಅಶ್ವಿನಿ ಕೋಡಿಬೈಲು, ಮುಸ್ತಫ ಬೆಳ್ಳಾರೆ, ಗಾಯತ್ರಿ ರಾಜೀವ್ ಸ್ನೇಹಗಿರಿ, ಸುಮತಿ ಕೆ.ಕಾನತ್ತಿಲ, ದೀಪಶ್ರೀ ಅಡ್ತಲೆ ತಮ್ಮಸ್ವರಚಿತ ಕವನಗಳನ್ನು ವಾಚಿಸಿದರು.
ಕಸಾಪ ಸುಳ್ಯ ಘಟಕದ ನಿರ್ದೇಶಕ ರಮೇಶ್ ನೀರಬಿದಿರೆ ಸ್ವಾಗತಿಸಿದರು. ರೂಪವಾಣಿ ಬಿ.ವಂದಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.
ಸಾಹಿತಿಯಾದವನಿಗೆ ಅಭಿಮಾನ ಮತ್ತು ಅವಮಾನಗಳನ್ನು ಸಹಿಸಿಕೊಳ್ಳುವ ಶಕ್ತಿಯಿರಬೇಕು : ಡಾ.ಶಾಲಿನಿ ಡಿ.ಎಲ್



































