ಸುಳ್ಯ : ಬುಡಗಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳಿಗೂ ಹಂತ ಹಂತವಾಗಿ ಅಕಾಡಮಿಗಳನ್ನು ಸ್ಥಾಪಿಸುವ ಅವಶ್ಯಕತೆ ಇದೆ ಎಂದು ಸುಳ್ಯ ತಾಲೂಕು 28ನೇ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷ ತೇಜಕುಮಾರ್ ಬಡ್ಡಡ್ಕ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ನೇತ್ರತ್ವದಲ್ಲಿ ಕುಕ್ಕುಜಡ್ಕ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾಕೃತಿಕ ದಟ್ಟಣೆಯು ವಿರಳವಾಗುತ್ತಿರುವಂತೆ ನಾವುಗಳು ವಿಕಾಸದಿಂದ ವಿನಾಶದೆಡೆಗೆ ಸಾವಧಾನದ ಹೆಜ್ಜೆ ಇರಿಸುತ್ತಿದ್ದೇವೆ. ಭಾಷೆಗಳ ಅಳಿವಿನೊಂದಿಗೆ ಸಂಸ್ಕೃತಿಗಳೂ ನಾಶವಾಗುತ್ತಿವೆ. ಈ ಸತ್ಯವನ್ನರಿಯಲು ನಾವು ದೂರದತ್ತ ದೃಷ್ಟಿ ಬೀರುವ ಅಗತ್ಯವಿಲ್ಲ. ನಮ್ಮ ಸುತ್ತ ನೋಡಿದರೆ ಅದು ಅರ್ಥವಾಗಬಲ್ಲದು. ನಮ್ಮೂರ ಸಾಹಿತ್ಯದ ಉನ್ನತಿಗೆ ಕಾರಣವಾಗಿದ್ದು ಇಲ್ಲಿನ ಜನರಾಡುವ ವಿಭಿನ್ನ ಭಾಷೆಗಳ ಸೊಗಡೆಂಬುದರಲ್ಲಿ ಸಂಶಯವಿಲ್ಲ. ಅದೆಲ್ಲ ನಮ್ಮೂರ ಭಾಷೆಗಳೀಗ ವಿರಳವಾಗುತ್ತಿದೆ. ಇಲ್ಲಿ ನಾವಾಡುತ್ತಿರುವ ಅರೆಭಾಷೆ. ಹವ್ಯಗನ್ನಡ, ಮರಾಟಿ, ಕೊಂಕಣಿ, ತುಳು ಹಾಗೂ ಇನ್ನಿತರ ಭಾಷೆಗಳು ಕ್ಷೀಣಿಸುತ್ತಾ ಸಾಗುತ್ತಿವೆ. ಆಳುವ ಸರ್ಕಾರಗಳು ಇಂದು ಅಕಾಡಮಿಗಳನ್ನು ಸ್ಥಾಪಿಸಿ ಭಾಷೆಗಳ ಉಳಿಯುವಿಕೆಗಾಗಿ ಶ್ರಮಿಸುತ್ತಿವೆ. ಇಲ್ಲಿನ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆಗಳಿಗೆ ಅಕಾಡಮಿಗಳಿವೆ. ಆದರೆ ಇಲ್ಲಿಯ ಕರಾವಳಿಯುದ್ದಕ್ಕೂ ಅಂದರೆ ದ.ಕ.ದಿಂದ ಕಾರವಾರ ತನಕ ಪ್ರಚಲಿತದಲ್ಲಿರುವ ಹವ್ಯಗನ್ನಡಕ್ಕೆ ಅಕಾಡಮಿಯೊಂದು ಇನ್ನೂ ಸ್ಥಾಪಿಕನಾಗಿಲ್ಲ. ಈ ನಿಟ್ಟಿನಲ್ಲಿ ಇಲ್ಲಿಯ ಪ್ರಮುಖರು ಸರ್ಕಾರದ ಮುಂದೆ ಬೇಡಿಕೆಯನ್ನಿಟ್ಟು ಹೋರಾಡಬೇಕೆಂಬುದು ನನ್ನ ನಿಲುವು. ಅದೇ ರೀತಿ ಕರ್ನಾಟಕದ ಉದ್ದಗಲಕ್ಕೂ ಹರಡಿ ನಿಂತಿರುವ ಹತ್ತು ಹಲವು ಬುಡಗಟ್ಟು ಪಂಗಡಗಳನ್ನು ಕಾಣಬಹುದು. ಅವರುಗಳಲ್ಲಿ ಕೆಲವಾರು ಭಾಷೆಗಳು ಈಗಾಗಲೇ ಇಲ್ಲವಾಗಿವೆ. ಕುಡಿಯರು, ಕುಣಬಿಗಳು, ಮಸಣಸಿದ್ದರು, ಹಕ್ಕಿಪಿಕ್ಕಿಗಳು, ಗೌಳಿಗರು, ಹಂದಿಚಿಕ್ಕರು ಹಾಗೂ ಇನ್ನಿತರ ಪಂಗಡದವರು ಆಡುತ್ತಿದ್ದ ಅವರದೇ ಭಾಷೆಗಳೀಗ ಸೊರಗಿ ಬಡವಾಗಿದೆ. ನಮ್ಮ ತೀರ ಸಮೀಪದ ಪೂಮಲೆ ಕುಡಿಯರ ಭಾಷೆ ಈಗ ಕಾಣಸಿಗುತ್ತಿಲ್ಲ. ಅವರೀಗಾಗಲೇ ಮಲೆಯಾಳಿ, ಕೊಡವ, ಅರೆಭಾಷೆ, ಕನ್ನಡದವರಾಗಿ ಬದಲಾಗಿ ಹೋಗಿದ್ದಾರೆ.ಅಕಾಡೆಮಿ ಸ್ಥಾಪಿಸುವವುದು ಸಂಸ್ಕೃತಿಗಳ ಉಳಿವಿಗೆ ಅನಿವಾರ್ಯವಾಗಿದೆ.ಅಪಾರ ಸಂಸ್ಕೃತಿಯ ಹೂರಣವುಳ್ಳ ಹವ್ಯಗನ್ನಡಕ್ಕೊಂದು ಅಕಾಡಮಿಯನ್ನು ಅವಶ್ಯಕವಾಗಿ ಆದಷ್ಟು ಬೇಗನೇ ಸ್ಥಾಪಿಸಬೇಕು. ಹಲವು ರೀತಿಯಲ್ಲಿ ನಾಶದತ್ತ ಸಾಗುತ್ತಿರುವ ಕರ್ನಾಟಕದ ಬುಡಗಟ್ಟು ಜನಾಂಗದ ಹಾಗೂ ನಿರ್ಲಕ್ಷಿತ ಭಾಷೆಗಳಿಗಾಗಿ ಹಂತ ಹಂತವಾಗಿ ಆಕಾಡಮಿಗಳನ್ನು ಸ್ಥಾಪಿಸಬೇಕು.ಈ ವಿಷಯಗಳ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬುಡಗಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳಿಗೆ ಹಂತ ಹಂತವಾಗಿ ಅಕಾಡಮಿಗಳು ಸ್ಥಾಪಿತಗೊಳ್ಳುವ ಅವಶ್ಯಕತೆ ಇದೆ : ತೇಜಕುಮಾರ್ ಬಡ್ಡಡ್ಕ



































