ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿ ಪೋಸ್ಟ್ ಮಾಡಲಾದ ಘಟನೆ ವರದಿಯಾಗಿದೆ.ಇದನ್ನು ಸ್ವಪಕ್ಷಿಯರು ಖಂಡಿಸಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬಿಲ್ಲವ ಸಂದೇಶ್ (Billava Sandesh) ಎಂಬ ಫೇಸ್ಟುಕ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವಚಿತ್ರ ಬಳಸಿ ಅವರನ್ನು ನಿಂಧಿಸಿ, ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ.
ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.ಅಲ್ಲದೆ ಪ್ರತಿಭಟನೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಜನಪ್ರತಿನಿಧಿಗಳ ವಿರುದ್ಧ, ವಿಶೇಷವಾಗಿ ಮಹಿಳಾ ಶಾಸಕರ ಮೇಲೆ ಅಸಭ್ಯ ಭಾಷೆ, ಬೆದರಿಕೆ ಅಥವಾ ಅವಮಾನಕಾರಿ ಹೇಳಿಕೆಗಳನ್ನು ಬಳಸುವುದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿ ಅಲ್ಲ- ಪ್ರಜಾಪ್ರಭುತ್ವದ ಮೌಲ್ಯಗಳು, ಮಹಿಳೆಯರ ಗೌರವ ಮತ್ತು ನಾಗರಿಕ ಸಂಸ್ಕೃತಿಯ ಮೇಲಿನ ನೇರ ದಾಳಿ. ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಅಭಿವ್ಯಕ್ತಿಯ ಹೆಸರಿನಲ್ಲಿ ಅಸಭ್ಯತೆ, ದೌರ್ಜನ್ಯ ಮತ್ತು ಅಹಂಕಾರವನ್ನು ಸಮರ್ಥಿಸಲು ಸಾಧ್ಯವಿಲ್ಲ. ಇಂತಹ ವರ್ತನೆ ತೋರಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜ ಇಂತಹ ಅಸಂಸ್ಕೃತ ವರ್ತನೆಯನ್ನು ಒಟ್ಟಾಗಿ ಖಂಡಿಸಬೇಕು. ಗೌರವವೇ ನಮ್ಮ ಸಂಸ್ಕೃತಿ ಎಂದು ಪೋಸ್ಟ್ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತಿಳಿಸಿದೆ.
ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ : ಖಂಡನೆ

















