ಧನ್ಯಾ ಬಾಳೆಕಜೆ*
ವಿದ್ಯೆಯ ದೀಪವನ್ನು ಸದಾ ಬೆಳಗಿಸುತ್ತಾ, ಮೌಲ್ಯಗಳ ಮಾರ್ಗವನ್ನು ಪ್ರಕಾಶಿಸುತ್ತಾ, ಶಿಸ್ತಿನ ಪರಿಸರದಲ್ಲಿ ಭವಿಷ್ಯದ ಸತ್ಪ್ರಜೆಗಳನ್ನು ದೇಶಕ್ಕೆ ನೀಡಿದ, ನೀಡುತ್ತಿರುವ ಸಾವಿರಾರು ಮಕ್ಕಳ ಬದುಕಿಗೆ ಅಕ್ಷರದೀವಿಗೆಯಾದ ನಮ್ಮ ಶಾಲೆ ಅಮೃತ ಸಂಭ್ರಮದಲ್ಲಿದೆ. ಸುದೀರ್ಘ 75 ವರ್ಷಗಳ ಇತಿಹಾಸದೊಂದಿಗೆ ನಮ್ಮ ಶಾಲೆ ಮುನ್ನಡೆಯುತ್ತಿರುವುದು ಶಾಲೆಯ ಮಡಿಲಲ್ಲಿ ಆಡಿ ಬೆಳೆದ ಸಾವಿರಾರು ಮಕ್ಕಳಿಗೆ ಹೆಮ್ಮೆಯ ವಿಷಯ.
ಹೌದು. ನನ್ನ ಮತ್ತು ನನ್ನಂತ ಅದೆಷ್ಟೋ ವಿದ್ಯಾರ್ಥಿಗಳ ಜೀವನ ರೂಪಿಸಿದ ನಮ್ಮ ತೊಡಿಕಾನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಅಮೃತ ಸಂಭ್ರಮ.
ಶಾಲೆಯೆಂದರೆ ಕೇವಲ ಕಲಿಕೆಯ ತಾಣವಲ್ಲ; ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಹಿಂದಿರುವ ಶಕ್ತಿಕೇಂದ್ರವದು. ಶಿಕ್ಷಣದ ಜೊತೆಗೆ ಬಾಲ್ಯದ ಸಹಜತೆಯನ್ನು ಸವಿಯಲು ಅದೊಂದು ಸುಂದರ ಸ್ಥಳ. ಎಳವೆಯಲ್ಲೇ ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುವ ವಿದ್ಯಾದೇಗುಲ.
ಪ್ರಾಥಮಿಕ ಶಿಕ್ಷಣ ಶೈಕ್ಷಣಿಕ ಜೀವನದ ಆರಂಭದ ಹಂತ. ಈ ಹಂತದ ಕಲಿಕೆ ಭವಿಷ್ಯಕ್ಕೊಂದು ಶಾಶ್ವತ ಅಡಿಪಾಯವಿದ್ದಂತೆ. 75 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಅದೆಷ್ಟೋ ಪುಟ್ಟ ಪುಟ್ಟ ಹೆಜ್ಜೆಗಳನ್ನು ನೋಡಿದೆ ಈ ಶಾಲೆ. ಬಾಲ್ಯದ ತುಂಟಾಟಗಳು, ದ್ವೇಷ-ಅಸೂಯೆಗಳೇ ತುಂಬಿರದ ಮುಗ್ದ ಮನಸುಗಳು, ಹುಸಿ ಮುನಿಸು, ಒಂದಷ್ಟು ಕೋಪ, ಹಾಡು-ಹರಟೆ ಎಲ್ಲವನ್ನೂ ತನ್ನಲ್ಲಿ ಹಚ್ಚ ಹಸಿರಾಗಿಸಿಕೊಂಡಿದೆ.
ಆಧುನಿಕ ಶಿಕ್ಷಣದ ಹೆಸರಿನಲ್ಲಿ ಅಲ್ಲಲ್ಲಿ ತಲೆ ಎತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳ ನಡುವೆ ಗ್ರಾಮೀಣ ಭಾಗದ ಶಾಲೆಗಳ ಅಳಿವು ಉಳಿವಿನ ಕೂಗು ಕಳೆದ ಕೆಲ ವರ್ಷಗಳಿಂದೀಚೆಗೆ ದೊಡ್ಡದಾಗಿದೆ. ಇಂತಹ ಸವಾಲುಗಳ ನಡುವೆಯೂ ಗ್ರಾಮೀಣ ಭಾಗದ ಸರಕಾರಿ ಕನ್ನಡ ಶಾಲೆಯೊಂದು ಸುದೀರ್ಘ 75 ವರ್ಷಗಳಿಂದ ಮಕ್ಕಳ ಸರ್ವಾಂಗೀಣ ಪ್ರಗತಿಗೆ ದಾರಿದೀಪವಾಗಿ ಮುನ್ನಡೆಯುತ್ತಿದೆ ಎಂದರೆ ಅಲ್ಲಿ ಸಿಗುವ ಶಿಕ್ಷಣ ಮತ್ತು ಶಿಕ್ಷಕರ ಮೇಲೆ ಪೋಷಕರಿಗೆ ಇರುವ ಭರವಸೆಯೇ ಕಾರಣ. ಅಂತಹ ಭರವಸೆ ಮತ್ತು ಪೂರಕ ಶಿಕ್ಷಣದ ಹೆಗ್ಗಳಿಕೆಯೊಂದಿಗೆ ನಮ್ಮ ಶಾಲೆ ಮುಂದುವರಿಯುತ್ತಿದೆ.
ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಇದೇ ಶಾಲೆಯಲ್ಲಿ ಕಲಿತಿರುವ ಹೆಮ್ಮೆ ನನಗಿದೆ. ನನ್ನ ಇಡೀ ವ್ಯಕ್ತಿತ್ವವನ್ನು ರೂಪಿಸಿದ್ದು ನನ್ನ ಪ್ರಾಥಮಿಕ ಶಾಲೆ. ನನ್ನಲ್ಲಿ ನಾಯಕತ್ವ ಗುಣ ಬೆಳೆಸಿದ್ದು, ಬರವಣಿಗೆಯ ಮೇಲೆ ಆಸಕ್ತಿ ಹುಟ್ಟಿಸಿದ್ದು ಈ ಶಾಲೆ. ಪ್ರಾಥಮಿಕ ಶಿಕ್ಷಣ, ಇಲ್ಲಿ ಕಳೆದ ಪ್ರತಿ ಕ್ಷಣಗಳೂ ಅಚ್ಚಳಿಯದ ನೆನಪುಗಳ ಮಹಾಸಂಗಮ.
ಪ್ರಾಥಮಿಕ ಶಾಲೆ ಎಂದಾಗ ನನಗೆ ಮೊದಲಿಗೆ ನೆನಪಿಗೆ ಬರುವುದೇ ಶಾಲಾ ಮಂತ್ರಿಮಂಡಲದ ಮತದಾನದ ದಿನ. 2002-2003ರಲ್ಲಿ ನಾನು ಏಳನೇ ತರಗತಿ ವಿದ್ಯಾರ್ಥಿನಿ. ಆಗ ನನ್ನ ತಂದೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದರು. ಎಸ್‌ಡಿಎಂಸಿ ಅಧ್ಯಕ್ಷರ ಮಗಳು ಶಾಲೆಯ ಮುಖ್ಯಮಂತ್ರಿಯಾಗಬೇಕು ಮತ್ತು ಶಾಲೆಯ ಮಕ್ಕಳು ನಾನು ಹೇಳಿದಂತೆ ಕೇಳಬೇಕೆಂಬ ತವಕ ನನ್ನದು. ನನ್ನ ತರಗತಿಯಲ್ಲಿ ಸುಮಾರು 40ರಷ್ಟು ಹುಡುಗಿಯರಿದ್ದರೆ, ಹುಡುಗರು ಕೇವಲ 10 ಮಂದಿ! ಆದರೂ ಮುಖ್ಯಮಂತ್ರಿ ಸ್ಥಾನಕ್ಕೆ ಹೈ ವೋಲ್ಟೇಜ್ ಕದನ. 5, 6 ಮತ್ತು 7ನೇ ತರಗತಿಯ ಮಕ್ಕಳಿಗೆ ಓಟ್ ಹಾಕಲು ಅವಕಾಶವಿತ್ತು. ಆಗ ನನ್ನ ತಮ್ಮ 5ನೇ ತರಗತಿಯಲ್ಲಿದ್ದ. ಅವನಿಗೂ ಓಟ್ ಹಾಕಲು ಅವಕಾಶ ಇದ್ದದ್ದರಿಂದ ಅಕ್ಕನಿಗೆ ಓಟ್ ಹಾಕುವುದು ಗ್ಯಾರೆಂಟಿಯಿತ್ತು. ಆದರೆ ರಾಜಕಾರಣದಲ್ಲಿರುವಂತೆ ಇಲ್ಲಿಯೂ ಕೂಡಾ ಆತನಿಗೆ ಅಕ್ಕನಿಗೆ ಓಟ್ ಹಾಕಬಾರದು ಎಂಬುದಾಗಿ ಯಾರಿಂದಲೋ ಬೆದರಿಕೆ ಹೋಗಿತ್ತು! ಓಟ್ ಹಾಕುವ ದಿನ ನನ್ನ ತಮ್ಮ ಹೆದರಿ ಶಾಲೆಗೇ ಬಂದಿರಲಿಲ್ಲ! ನನಗೆ ಒಂದು ಓಟೂ ಮಿಸ್ಸ್. ಸದಾ ಡಿಕ್ಟೇಶನ್ ಹೇಳುತ್ತಾ, ಸ್ವಲ್ಪ ತುಟಿ ಅಲುಗಾಡಿಸಿದರೂ ತರಗತಿಯಲ್ಲಿ ಮಾತನಾಡುತ್ತಾನೆಂದು ಹೆಸರು ಬರೆದು ಜಯಲತಾ ಟೀಚರ್‌ಗೆ ಒಪ್ಪಿಸುತ್ತಿದ್ದ ನನ್ನನ್ನು ಕಂಡರೆ ನಮ್ಮ ತರಗತಿಯ ಹುಡುಗರಿಗೆ ಆಗಿ ಬರುವುದಿಲ್ಲ. ಆ ಹತ್ತು ಮಂದಿ ಹುಡುಗರ ಓಟ್ ವಿರೋಧ ಪಕ್ಷದ ಕೈ ಸೇರಿದರೆ, ಉಳಿದೆಲ್ಲಾ ಓಟ್‌ಗಳು ನನಗೆ ಬಂದಿತ್ತು ಮತ್ತು ನಾನು ಶಾಲೆಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದೆ. ಆಗ ಇದೊಂದು ಸೀರಿಯಸ್ ವಿಷಯವಾದರೆ, ಈಗ ಪ್ರತಿ ಕ್ಷಣ ನೆನಪಾದಾಗಲೆಲ್ಲಾ ನಗು ಬರುತ್ತದೆ.
ವಿದ್ಯಾರ್ಥಿಗಳ ಏಳಿಗೆಗೆ ಶಾಲೆಯ ಪರಿಸರವಷ್ಟೇ ಅಲ್ಲ, ಅಲ್ಲಿನ ಶಿಕ್ಷಕರ ಪಾತ್ರವೂ ದೊಡ್ಡದು. ಪ್ರಾಥಮಿಕ ಹಂತವೆಂದರೆ ಬದುಕಿನ ಕಲಿಕೆಯ ಹಂತ ಕೂಡಾ. ಮಕ್ಕಳು ಶಿಕ್ಷಕರನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಅಂತಹ ಅನುಸರಣೀಯ ಮತ್ತು ಅನುಕರಣೀಯ ಶಿಕ್ಷಕರು ನಮಗೆ ಕಲಿಸಿದ್ದರೆಂಬ ಧನ್ಯತೆ ನಮಗಿದೆ. ಆಗ ಮುಖ್ಯ ಶಿಕ್ಷಕಿಯವರಾಗಿದ್ದ ಗಂಗಮ್ಮ ಟೀಚರ್, ಶಿಕ್ಷಕರಾಗಿದ್ದ ಕೃಷ್ಣ ಮುರಾರಿ ಸರ್, ತಂಗಮ್ಮ ಟೀಚರ್, ಜಯಲತಾ ಟೀಚರ್, ಸವಿತಾ ಟೀಚರ್ (ನನ್ನ ಚಿಕ್ಕಮ್ಮ) ನಮ್ಮ ಸಂಪೂರ್ಣ ವ್ಯಕ್ತಿತ್ವ ವಿಕಸನದಲ್ಲಿ ನಮ್ಮ ಈ ಎಲ್ಲಾ ಗುರುಗಳ ಕೊಡುಗೆ ಸ್ಮರಣೀಯ. ಶಾಲೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನಮಗೆ ಕಲಿಸಿದ ಗುರುಗಳನ್ನು ಈ ಬರಹದ ಮೂಲಕ ಮತ್ತೊಮ್ಮೆ ನೆನಪಿಸುವಂತಾಯಿತು.
ಶಾಲೆಯಲ್ಲಿ ಓಡಾಡಿದ ದಿನಗಳು ಹಸಿರಾಗಿವೆ.. ಕುಣಿದಾಡಿದ ಖುಷಿ ಘಳಿಗೆಗಳಿವೆ.. ವರ್ಣಿಸಲಾಗದಷ್ಟು ಬಗೆಯ ಸಿಹಿ ಕ್ಷಣಗಳಿವೆ.. ಬಗೆದಷ್ಟು ಮೊಗೆವ ನೆನಪುಗಳಿವೆ.. ಅಮೃತ ಘಳಿಗೆಯಲ್ಲಿರುವ ಅಕ್ಷರ ಕಲಿಸಿದ ಶಾಲೆಗೆ ಇದೋ ನನ್ನ ಅಕ್ಷರ ನಮನ. ನಮ್ಮ ಶಾಲೆ ಸದಾ ಬೆಳಗುತ್ತಿರಲಿ, ಸದೃಢ ಬದುಕು ಕಲ್ಪಿಸಿದ ಶಾಲೆಗೆ ನೂರು ತುಂಬಲಿ.



































