ಐನೂರು ವರ್ಷಗಳ ಇತಿಹಾಸದ ಹಿನ್ನೆಲೆ ನಮ್ಮ ಅರೆಭಾಷೆಗಿದೆ. ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡಿರುವ ಈ ಭಾಷೆ ದಕ್ಷಿಣ ಕನ್ನಡ ಕೆಲವು ಭಾಗ ಮತ್ತು ಕೊಡಗಿನ ಕೆಲವು ಪ್ರದೇಶಗಳಲ್ಲಿ ರಾಜ ಭಾಷೆಯಾಗಿ ಮೆರೆಯುತ್ತಿದೆ. ಇದನ್ನು ಉಳಿಸಿ ಬೆಳೆಸುವ ಮೂಲಕ ಅರೆಭಾಷೆ ಜನಾಂಗವನ್ನು ಬೆಳೆಸಿದಂತೆ ಎಂದೂ ಬೆಳ್ತಂಗಡಿ ಪ್ರಸನ್ನ ಕಾಲೇಜು ಉಪನ್ಯಾಸಕಿ ಸುಶ್ಮಿತಾ ಆದಿತ್ಯ ಚಿದ್ಗಲು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಮಡಪ್ಪಾಡಿ ಗ್ರಾಮ ಗೌಡ ಸಮಿತಿ ಹಾಗೂ ಮಹಿಳಾ ಘಟಕಗಳ ಆಶ್ರಯದಲ್ಲಿ ಮಾರ್ಚ್ 08 ರಂದು ಮಡಪ್ಪಾಡಿಯಲ್ಲಿ ನಡೆದ ಅರೆಭಾಷೆ ಗ್ರಾಮೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ದಿಕ್ಸೂಜಿ ಭಾಷಣ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ವಹಿಸಿದ್ದರು. ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ವೇದಿಕೆಯಲ್ಲಿದ್ದರು.ಮುಖ್ಯ ಅತಿಥಿಗಳಾಗಿ ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಬರಹಗಾರ ದಿನೇಶ್ ಹಾಲೆಮಜಲು, ಮಡಪ್ಪಾಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಉಷಾ ಜಯರಾಮ, ಮಡಪ್ಪಾಡಿ ಶಾಲಾ ಮುಖ್ಯೋಪಾಧ್ಯಾಯರಾದ ಕುಶಾಲಪ್ಪ ಪಾರೆಪ್ಪಾಡಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶ್ರೀ ಲಕ್ಷ್ಮಣ ಗೌಡ ಮಾಯಿಪನ ಮನೆ (ಅರೆಭಾಷೆ ಸಾಹಿತ್ಯ), ಡಾ. ಹರಿಣಾಕ್ಷಿ ಸೀತಾರಾಮ ಕೇವಳ -ಶಿಕ್ಷಣ ಸಂಶೋದನೆ, ಶ್ರೀಮತಿ ಶಿವಮ್ಮ ಬಲ್ಕಜೆ ಹೆರಿಗೆ ತಜ್ಞೆ -ನಾಟಿವೈದ್ಯೆ, ಶ್ರೀ ತಾರನಾಥ ಗೌಡ ಅಂಬೆಕಲ್ಲು (ಯಕ್ಷಗಾನ) ಕ್ಷೇತ್ರಗಳಾಗಿ ಸಲ್ಲಿಸಿದ ಸೇವೆಗಾಗಿ ಅವರನ್ನು ಸನ್ಮಾನಿಸಲಾಯಿತು. ನ್ಯಾಯವಾದಿ ದಿನೇಶ್ ಮಡಪ್ಪಾಡಿ ಸನ್ಮಾನಿತರಿಗೆ ಅಭಿನಂದನಾ ಭಾಷಣ ಮಾಡಿದರು. ವಿಶೇಷವಾಗಿ 50ವರ್ಷಗಳ ದಾಂಪತ್ಯವನ್ನು ನಡೆಸುತ್ತಿರುವ ವಿಮಲ ಬಾಲಕೃಷ್ಣ ಗೌಡ ಪೂಂಬಾಡಿ, ಜಾನಕಿ ಕುಶಾಲಪ್ಪ ಗೌಡ ಹಾಡಿಕಲ್ಲು, ಶುಭಾವತಿ ನಿತ್ಯಾನಂದ ಬಳ್ಳಡ್ಕ ದಂಪತಿಗಳನ್ನು ಹಾರ ಹಾಕಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಕಾಡೆಮಿ ಆಯೋಜಿಸಿದ ವಿವಿಧ ಅರೆಭಾಷೆ ಸ್ಪರ್ಧೆಗಳ ವಿಜೇತರಿಗೆ ನಗದು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಅರೆಭಾಷೆಯ ಮಡಪ್ಪಾಡಿ ಗ್ರಾಮದ ವಿದ್ಯಾರ್ಥಿ ಭಾರ ಎತ್ತುವ ಸ್ಪರ್ಧೆಯಲ್ಲಿ 4 ಚಿನ್ನದ ಪದಕ ಪಡೆದ ದರ್ಶನ್ ಜಿ.ಎಸ್ ರವರನ್ನು ಮತ್ತು ಯೋಗ ಸ್ಪರ್ಧೆಯಲ್ಲಿ ವಿಶೇಷ ಪ್ರಶಸ್ತಿ ಪಡೆದುಕೊಂಡ ಕು.ಸೋನಾ ಅಡ್ಯಾರ್ ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಅರೆಭಾಷೆ ಅಕಾಡೆಮಿಯ ಸದಸ್ಯೆ ಗ್ರಾಮೋತ್ಸವದ ಸಹ ಸದಸ್ಯರು ಆಗಿರುವ ಲತಾಪ್ರಸಾದ್ ಕುದ್ದಾಜೆ ಯವರು ಸ್ವಾಗತಿಸಿ ಕಾಠ್ಯಕ್ರಮದ ಆಯೋಜನೆ ಕುರಿತು ಮಾತನಾಡಿದರು. ಕೊನೆಯಲ್ಲಿ ಅಕಾಡೆಮಿ ಸದಸ್ಯೆ ಚಂದ್ರಾವತಿ ಬಡ್ಡಡ್ಕ ವಂದನಾರ್ಪಣೆ ಸಲ್ಲಿಸಿದರು. ವೇದಿಕೆಯಲ್ಲಿ ಅಕಾಡೆಮಿಯ ಸದಸ್ಯರಾದ ಪಿ.ಎಸ್ ಕಾರ್ಯಪ್ಪ ಗೌಡ ಚಿದ್ದಲ್ಲು, ಡಾ| ಎಸ್.ಎ.ಜ್ಞಾನೇಶ್, ತೇಜಕುಮಾರ್ ಬಡ್ಡಡ್ಕ, ಚಂದ್ರಶೇಖರ ಪೇರಾಲು, ಲೋಕೇಶ್ ಊರುಬೈಲು, ಸೂದನ ಈರಪ್ಪ, ಮೋಹನ ಪೊನ್ನಚನ, ವಿನೋದ್ ಮೂಡಗದ್ದೆ, ಗೋಪಾಲ ಪೆರಾಜೆ, ಸ್ವಾಗತ ಸಮಿತಿ ಅಧ್ಯಕ್ಷರಾದ ಗಂಗಯ್ಯ ಗೌಡ ಪೂಂಬಾಡಿ, ಸಂಚಾಲಕ ಸೋಮಶೇಖರ ಕೇವಳ, ಕಾರ್ಯದರ್ಶಿ ಗೋಪಾಲಕೃಷ್ಣ ಪಾರೆಮಜಲು, ಮಹಿಳಾ ಮಂಡಲದ ಅಧ್ಯಕ್ಷೆ ಇಂದಿರಾ ಕುಡೆಕಲ್ಲು ಉಪಸ್ಥಿತರಿದ್ದರು.
ತದನಂತರ ಹವಿನ್ ಗುಂಡ್ಯರ ನಿರ್ದೇಶನದ “ಕೋಲ” ಅರೆಭಾಷೆಯ ಕಿರು ಚಿತ್ರ ಹಾಗೂ ಶೇಖರ ಮಣಿಯಾಣಿಯವರ ನೇತೃತ್ವದಲ್ಲಿ ಅರೆಭಾಷೆಯ “ಭಸ್ಮಾಸುರ ಮೋಹಿನಿ” ಯಕ್ಷಗಾನ ಪ್ರದರ್ಶನ ನಡೆಯಿತು. ಖ್ಯಾತ ಹಾಡುಗಾರಾ ಶಶಿಧರ ಮಾವಿನಕಟ್ಟೆ, ರಮೇಶ್ ಮೆಟ್ಟಿನಡ್ಕ, ಸಂಧ್ಯಾ ಮಂಡೆಕೋಲು ರವರಿಂದ ಅರೆಭಾಷೆ ರಸಮಂಜರಿ, ಶೋಭಾನೆ, ದೈವಕ್ಕೆ ಪಾರಿ ಹೇಳುವುದು, ಸತ್ತವರಿಗೆ ಸ್ವರ್ಗ ಸಲ್ಲಿಸುವಂತಹ ವಿನೂತನ ಸ್ಪರ್ಧೆ, ಅರೆಭಾಷೆ ರಸಪ್ರಶ್ನೆ ಹೀಗೆ ಹಲವು ಸಾಂಸ್ಕೃತಿಕ ಕಾಠ್ಯಕ್ರಮಗಳು ನಡೆದು ಬಂತು. ಮಧ್ಯಾಹ್ನ ಮಡಪ್ಪಾಡಿ ಗ್ರಾಮಸ್ಥರಿಂದ ಭೋಜನದ ಆತಿಥ್ಯ ನೀಡಲಾಯಿತು.
ಅರೆಭಾಷೆ ರಾಜ ಭಾಷೆಯಾಗಿ ಮೆರೆಯುತ್ತಿದ್ದು ,ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ : ಸುಶ್ಮಿತಾ ಆದಿತ್ಯ ಚಿದ್ಗಲು




































