ರಾಜ್ಯದಲ್ಲಿ 2026ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ.ಈ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ನೀಡಬೇಕು ಅನ್ನುವ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ.ಈ. ಪ್ರಶ್ನೆಗೆ ವಿದ್ಯಾರ್ಥಿಗಳು ಗಮನಿಸ ಬೇಕಾದ ಅಂಶಗಳು ಅಂದರೆ- ಸಾಮಾನ್ಯವಾಗಿ ಹತ್ತು ವರ್ಷಗಳ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಉನ್ನತ ಶಿಕ್ಷಣಕ್ಕೆ ಹಾಗೂ ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯಲು ಅಗತ್ಯವಾದ ಪ್ರಮುಖ ಹಂತವೇ ಎಸ್.ಎಸ್.ಎಲ್.ಸಿ ಪರೀಕ್ಷೆ. ಆದ್ದರಿಂದ ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆ ಶಾಲಾ ಶಿಕ್ಷಣದ ಅಂತಿಮ ಹಂತದ ಪರೀಕ್ಷೆಯಾಗಿದ್ದು, ವಿದ್ಯಾರ್ಥಿಗಳ ಜ್ಞಾನ, ಸಾಮರ್ಥ್ಯ, ಪರಿಶ್ರಮ ಮತ್ತು ಶಿಸ್ತುಗಳನ್ನು ಅಳೆಯುವ ಮಹತ್ವದ ಹಂತವಾಗಿದೆ. ಈ ಪರೀಕ್ಷೆಯ ಫಲಿತಾಂಶವು ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ದಾರಿಗೆ ದಿಕ್ಕು ತೋರಿಸುತ್ತದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳು ಪಿಯುಸಿ, ಡಿಪ್ಲೊಮಾ, ಐಟಿಐ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಅವಕಾಶಗಳನ್ನು ಹೊಂದುತ್ತಾರೆ.
ಆದ್ದರಿಂದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ವಿಶೇಷ ತಯಾರಿ ಮಾಡಿಕೊಂಡು ಆತ್ಮವಿಶ್ವಾಸದಿಂದ ಎದುರಿಸಬೇಕು. ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ನಿಯಮಿತ ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂತಹ ಸಾಧನೆ ಅವರ ಭವಿಷ್ಯದ ಜೀವನಕ್ಕೆ ದೃಢವಾದ ಅಡಿಪಾಯವಾಗುತ್ತದೆ.
ಇದರ ಜೊತೆಗೆ ಎಸ್.ಎಸ್.ಎಲ್.ಸಿ ಪ್ರಮಾಣಪತ್ರವು ಭವಿಷ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳಿಗೆ ಮೂಲ ಅರ್ಹತೆಯಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ವೃತ್ತಿಜೀವನದ ದೃಷ್ಟಿಯಿಂದಲೂ ಈ ಪರೀಕ್ಷೆ ಅತ್ಯಂತ ಮಹತ್ವದ್ದಾಗಿದೆ.
*ಕೊನೆಯ ನುಡಿಗಳು*
ಎಸ್.ಎಸ್.ಎಲ್.ಸಿ ಪರೀಕ್ಷೆ ಕೇವಲ ಒಂದು ಪರೀಕ್ಷೆಯಷ್ಟೇ ಅಲ್ಲ; ಅದು ವಿದ್ಯಾರ್ಥಿಗಳ ಭವಿಷ್ಯದ ಗುರಿಗಳನ್ನು ತಲುಪುವ ಮೊದಲ ಹೆಜ್ಜೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದಿಂದ ಈ ಪರೀಕ್ಷೆಯನ್ನು ಎದುರಿಸಿ, ಉತ್ತಮ ಸಾಧನೆ ಮಾಡಬೇಕು. ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನಕ್ಕೆ ಪ್ರೇರಣೆಯಾಗಲಿ ಹಾಗೂ ಭವಿಷ್ಯದ ಬದುಕಿಗೆ ಬೆಳಕಾಗಲಿ.
*ಜೇಸಿ ಮೋಹನ್ ಚಂದ್ರ, ಉಪನ್ಯಾಸಕರು, ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು*.
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ಕೊಡಬೇಕು? !!!


















