ದೀಪಗಳ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಪ್ರತೀ ವರ್ಷದಂತೆ ಈ ವರ್ಷವೂ ಸಂಭ್ರಮವನ್ನು ಹೊತ್ತು ತಂದಿದೆ. ಕತ್ತಲಿನಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಎಂಬ ಸಂದೇಶ ಸಾರುವ ದೀಪಾವಳಿಯ ಮಹತ್ವವೇ ದೊಡ್ಡದು.
ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ದೀಪಾವಳಿಯ ಆರಂಭ. ಕೆಲವು ಕಡೆಗಳಲ್ಲಿ ಮೂರು ದಿನ ಆಚರಿಸಿದರೆ ಇನ್ನು ಕೆಲವೆಡೆ ಐದು ದಿನಗಳ ಕಾಲವೂ ದೀಪಾವಳಿ ಸಂಭ್ರಮ ಇರುತ್ತದೆ. ಮನೆಮಂದಿಯೆಲ್ಲ ಒಟ್ಟು ಸೇರಿ, ಹೊಸ ಬಟ್ಟೆ ಧರಿಸಿ ವೈವಿಧ್ಯ ಖಾದ್ಯ ತಯಾರಿಸಿ ಒಟ್ಟಾಗಿ ಕುಳಿತು ಉಂಡು ಸಂಭ್ರಮಿಸುವ ಹಬ್ಬ ದೀಪಾವಳಿ. ಅದಕ್ಕೇ ದೀಪಾವಳಿ ಭಾರತದ ಹಿಂದೂಗಳ ಪಾಲಿಗೆ ವಿಶೇಷ.
ಹಿಂದೆಲ್ಲಾ ಕೂಡುಕುಟುಂಬದ ಒಡನಾಟ. ಆಗ ಹಬ್ಬ ಎಂದರೆ ವಿಶೇಷವಾದ ಸಂಭ್ರಮ. ಮನೆಯ ಸದಸ್ಯರೆಲ್ಲಾ ಸೇರಿ ಹಬ್ಬ ಆಚರಿಸುವುದು ವಾಡಿಕೆ. ಬಲಿಯೇಂದ್ರ ಮರ ಹಾಕಿ ದೀಪಾವಳಿಯಂದು ಬಲಿಯೇಂದ್ರನಿಗೆ ಪೂಜೆ ಸಲ್ಲಿಸುವುದು, ಪಟಾಕಿ ಸಿಡಿಸಿ, ಹೊಸ ಬಟ್ಟೆಯುಟ್ಟು, ಪರಸ್ಪರ ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಈಗಲೂ ಆ ಸಂಭ್ರಮ ಇದೆಯಾದರೂ, ದುಡಿಮೆ, ಶಿಕ್ಷಣಕ್ಕಾಗಿ ಊರಿನಿಂದ ಹೊರ ಹೋಗಿರುವವವರು ರಜೆ ಅಥವಾ ಇನ್ನಿತರ ಕಾರಣಗಳಿಂದಾಗಿ ಹಬ್ಬಕ್ಕೆ ಊರಿಗೆ ಆಗಮಿಸಿ ತಮ್ಮವರೊಂದಿಗೆ ಹಬ್ಬದ ಸಂಭ್ರಮದಲ್ಲಿ ಜೊತೆಯಾಗುವುದು ಕಡಿಮೆಯಾಗಿದೆ.
ಕತ್ತಲಿನ ಮೇಲೆ ಬೆಳಕು ವಿಜಯ ಸಾಧಿಸುವ, ಕೆಟ್ಟದನ್ನು ಸೋಲಿಸಿ ಒಳ್ಳೆಯತನ ವಿಜಯ ಸಾಧಿಸುವ ಸಂಕೇತವಾಗಿಯೂ ದೀಪಾವಳಿ ಮಹತ್ವ ಪಡೆದುಕೊಳ್ಳುತ್ತದೆ. ಜಗತ್ತಿನಲ್ಲಿ ಮೇಳೈಸುತ್ತಿರುವ ಕೆಟ್ಟದ್ದೆಲ್ಲಾ ಸರ್ವನಾಶವಾಗಿ ಕೇವಲ ಒಳ್ಳೆಯದೇ ವಿಜೃಂಭಿಸಲಿ ಎಂಬುದು ಈ ಹೊತ್ತಿನ ಪ್ರಾರ್ಥನೆಯಾಗಲಿ. ದ್ವೇಷ, ಅಸೂಯೆ, ಮದ, ಮತ್ಸರಗಳೆಲ್ಲ ಕೊನೆಯಾಗಿ ಪ್ರೀತಿ, ವಿಶ್ವಾಸ, ಸೌಹಾರ್ದತೆ, ಸಹಬಾಳ್ವೆಯ ಬದುಕೇ ಜಗತ್ತಿನಾದ್ಯಂತ ಪಸರಿಸಲಿ ಎಂಬುದೂ ದೀಪಾವಳಿಯ ಈ ಹೊತ್ತಿನಲ್ಲಿ ನಮ್ಮೆಲ್ಲರ ಸದಾಶಯವಾಗಲಿ.
ನಮಗೆಲ್ಲಾ ತಿಳಿದಿರುವಂತೆ ದೀಪಾವಳಿ ಎಂದರೆ ದೀಪಗಳ ಹಬ್ಬ. ಮನೆಯಲ್ಲಿ ಸಾಲು ದೀಪಗಳನ್ನು ಹಚ್ಚಿ ಸಂಭ್ರಮಿಸುವ ಈ ದೀಪಾವಳಿಯ ದೀಪಗಳಿಗೆ ಅದರದ್ದೇ ಆದ ಮಹತ್ವವಿದೆ. ದೀಪ ಜ್ಞಾನ ಮತ್ತು ಬೆಳಕಿನ ಪ್ರತೀಕ. ಮನೆ-ಮನಗಳಲ್ಲಿ ತುಂಬಿರುವ ಅಂಧಕಾರವನ್ನು ಹೊಡೆದೋಡಿಸಿ ಜ್ಞಾನದ ಬೆಳಕನ್ನು ಪಸರಿಸುವ ಈ ದೀಪಗಳು ಜ್ಞಾನ ದೀವಿಗೆಯಾಗಿ, ನಂದಾದೀಪವಾಗಿ ಮನೆ-ಮನ ಬೆಳಗಲಿ ಎಂಬ ಸಂದೇಶಕ್ಕೆ ಮುನ್ನುಡಿಯಾಗುತ್ತದೆ. ಮನೆಯಲ್ಲಿ ಸಾಲು ದೀಪ ಹಚ್ಚಿ ಮನಸ್ಸಿನಲ್ಲಿ ಅಂಧಕಾರ ತುಂಬಿಸಿಕೊಂಡರೆ ದೀಪಾವಳಿಯ ಆಚರಣೆಯೇ ಪರಿಪೂರ್ಣವಾಗುವುದಿಲ್ಲ. ಮನುಷ್ಯ ಮನುಷ್ಯರ ನಡುವೆ ಕಂದಕ ಸೃಷ್ಟಿಸುವುದೇ ದ್ವೇಷ, ಅಸೂಯೆ, ಹೊಟ್ಟೆಕಿಚ್ಚಿನಂತಹ ಅನಿಷ್ಠಗಳು. ಮರ್ಕಟ ಮನಸ್ಸನ್ನು ನಿಗ್ರಹಿಸುವ ಚಾಣಾಕ್ಷತನ ಪ್ರತಿ ಮನುಷ್ಯರಲ್ಲಿ ಇರಬೇಕು. ಪರಸ್ಪರ ಪ್ರೀತಿ, ಗೌರವ, ಸೌಹಾರ್ದದೊಂದಿಗೆ ಬದುಕು ನಡೆಸುವ ಸಂಕಲ್ಪ ಪ್ರತಿಯೊಬ್ಬರದಾಗಬೇಕು. ಹಾಗಿದ್ದಲ್ಲಿ ಮಾತ್ರ ದೀಪಾವಳಿಗೆ ಹೊಸ ಅರ್ಥ. ಮಡಿಯಾದ ಹೊಸ ಬಟ್ಟೆ ಧರಿಸಿ ಬಾಹ್ಯವಾಗಿ ಶುಚಿಯಾಗಿದ್ದು, ಆಂತರಿಕವಾಗಿ ಕೊಳಕು ತುಂಬಿಕೊಂಡಿದ್ದರೆ ದೀಪಾವಳಿ ಆಚರಣೆ ಕೇವಲ ಆಚರಣೆಗಷ್ಟೇ ಸೀಮಿತವಾಗಿ ಉಳಿಯುತ್ತದೆ ಹೊರತು ಅದರ ನಿಜವಾದ ಮಹತ್ವದ ಪಾಲನೆಯಾಗುವುದಿಲ್ಲ.
*ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು*
*ಮನಸಿನಿಂದ ಮನಸನು ಬೆಳಗಬೇಕು ಮಾನವ*,
*ಮೇಲು ಕೀಳು ಭೇದ ನಿಲ್ಲಲು..*
*ಭೇದವಿಲ್ಲ ಬೆಂಕಿಗೆ, ದ್ವೇಷವಿಲ್ಲ ಬೆಳಕಿಗೆ..*
*ನೀ ತಿಳಿಯೋ! ನೀ ತಿಳಿಯೋ!*
ಕವಿ ಮನಸಿನಿಂದ ಮೂಡಿಬಂದ ಈ ಸಾಲುಗಳು ದೀಪಾವಳಿಯ ಇಡೀ ಸಾರವನ್ನು ಕೇವಲ ನಾಲ್ಕೈದು ವಾಕ್ಯಗಳಲ್ಲಿ ತಿಳಿಸಿಕೊಟ್ಟಿದೆ ಅಲ್ಲವೇ? ದೀಪದಿಂದ ದೀಪ ಹಚ್ಚಬೇಕು, ಪ್ರೀತಿಯನ್ನೂ ಹಾಗೆಯೇ..ದೀಪದಿಂದ ದೀಪವನ್ನು ಹೇಗೆ ಹಚ್ಚುತ್ತೇವೆಯೋ ಹಾಗೆಯೇ ಮನಸುಗಳನ್ನು ಮನಸಿನಿಂದಲೇ ಬೆಳಗಬೇಕು ಎಂಬುದು ಕವಿ ಮನಸು. ಮನಸ್ಸಿನಲ್ಲಿ ಕಲ್ಮಶ ತುಂಬಿಕೊಳ್ಳದೆ, ಮೇಲು ಕೀಳೆಂಬ ಬೇಧ ಸಾಧಿಸದೆ ಪ್ರತಿಯೊಬ್ಬರನ್ನು ಮನುಷ್ಯರಾಗಿ ಕಾಣಬೇಕು. ಬೆಂಕಿಗೆ ಹೇಗೆ ಭೇದವೆಂಬುದು ಗೊತ್ತಿಲ್ಲವೋ, ಬೆಳಕಿಗೆ ಹೇಗೆ ದ್ವೇಷ ಪಸರಿಸುವುದು ತಿಳಿದಿಲ್ಲವೋ ಮನುಷ್ಯನೂ ಹಾಗೇ ಇದ್ದರೆ ಈ ಜಗತ್ತು ಅದೆಷ್ಟು ಚೆನ್ನ ಎಂಬುದನ್ನು ಈ ಸಾಲುಗಳು ಪ್ರತಿನಿಧಿಸುತ್ತವೆ.
ಪೌರಾಣಿಕವಾಗಿಯೂ ದೀಪಾವಳಿ ಮಹತ್ವ
ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ರಾಮ ಅಯೋಧ್ಯೆಗೆ ಮರಳಿದ ದಿನವೂ ದೀಪಾವಳಿಯ ದಿನದಂದೇ. ರಾಮ ಬರುವಾಗ ಅಯೋಧ್ಯೆಯ ಜನರು ದೀಪಗಳನ್ನು ಬೆಳಗಿ ಸ್ವಾಗತಿಸುತ್ತಾರೆ ಎಂದು ಪೌರಾಣಿಕ ಇತಿಹಾಸ ಹೇಳುತ್ತದೆ. ಶ್ರೀಕೃಷ್ಣನು ನರಕಾಸುರನನ್ನು ವಧಿಸಿರುವುದೂ ದೀಪಾವಳಿಯ ಸಂದರ್ಭದಲ್ಲಿಯೇ ಆಗಿರುತ್ತದೆ. ಆಧ್ಯಾತ್ಮಿಕ ಉನ್ನತಿ, ಸಮೃದ್ದಿಯನ್ನು ಹೊತ್ತು ತರುವ ಹಬ್ಬ ಇದು. ಜೀವನದಲ್ಲಿ ಯಾವುದೇ ಹೊಸತನದ ಸಾಹಸಕ್ಕಿಳಿದರೂ ದೀಪಾವಳಿಯಂದು ಅದನ್ನು ಆರಂಭಿಸಿದರೆ ಶುಭವೆಂದು ಪರಿಗಣಿಸಲಾಗುತ್ತದೆ. ಸಂಪತ್ತು ಮತ್ತು ಸಮೃದ್ದಿಯ ದೇವತೆಯಾದ ಲಕ್ಷ್ಮೀ ದೇವಿಯನ್ನು ದೀಪಾವಳಿ ಸಂದರ್ಭದಲ್ಲಿ ಪೂಜಿಸುವುದು ವಾಡಿಕೆ.
✍️ *ಧನ್ಯಾ ಬಾಳೆಕಜೆ*



































