ನಾವು ಕನ್ನಡ ರಾಜೋತ್ಸವ ಸಂಭ್ರಮದಲ್ಲಿದ್ದೆವೆ.ನ.1ರಂದು ಕರ್ನಾಟಕದಲ್ಲಿ ಕನ್ನಡ ರಾಜೋತ್ಸೋವ ಆಚರಿಸಲಾಗುತ್ತಿದೆ. ಕನ್ನಡ ಭಾಷಾವಾರು 5 ಪ್ರಾಂತ್ಯಗಳಾಗಿ ವಿಂಗಡಿಸಿದ ಮುಂಬೈ, ಹೈದರಾಬಾದ್, ಮದ್ರಾಸ್, ಕೊಡಗು, ನಿಜಾಮರ ಪ್ರಾಂತ್ಯವೆಂದು ಹಂಚಿಕೆಯಲ್ಲಿದ್ದ ಕನ್ನಡ ಭಾಷಿಗರ ಈ ಎಲ್ಲಾ ಪ್ರದೇಶಗಳನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸಿ ನವಂಬರ್ 1 -1956 ರಂದು ಮೈಸೂರು ರಾಜ್ಯವೆಂದು ಹೆಸರಿಟ್ಟು ಸಂಭ್ರಮಿಸಿದ ಅವಿಸ್ಮರಣೀಯ ದಿನವನ್ನು ಕನ್ನಡ ರಾಜ್ಯೋತ್ಸವದ ಕನ್ನಡ ಹಬ್ಬವಾಗಿ ಅದ್ದೂರಿಯಾಗಿ ನಾಡಿನೆಲ್ಲೆಡೆ ಆಚರಿಸಲಾಗುತ್ತದೆ.
ಕಪ್ಪು ಮಣ್ಣಿನ ನಾಡು ಕರುನಾಡು ಮೈಸೂರು ರಾಜ್ಯವಾಗಿ ಸ್ಥಾಪನೆಗೊಳ್ಳಲು ನಮ್ಮ ನಾಡಿನ ಹಿರಿಯರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದ ಜೊತೆ ಜೊತೆಯಲ್ಲಿ ಚಳುವಳಿ ಹುಟ್ಟು ಹಾಕಿದ್ದರು. ಇದಕ್ಕೆ ನಾಡಿನ ಶ್ರೇಷ್ಠ ಸಾಹಿತಿಗಳು, ರಾಜಕಾರಣಿಗಳು, ಭುದ್ದಿಜೀವಿಗಳು, ರಾಜ ಮಹಾರಾಣಿಗಳ ಅಪಾರ ಶ್ರಮದ ಕೊಡುಗೆಯ ಫಲವಿತ್ತು.
ಕನ್ನಡ ಏಕೀಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಅಂದಿನ ಕಾಲದಲ್ಲಿ ಕುಲ ಪುರೋಹಿತರೆಂದೇ ಪ್ರಖ್ಯಾತಿ ಪಡೆದಿದ್ದ ಆಲೂರು ವೆಂಕಟರಾವ್, ಹುಲಿಗೋಳ ನಾರಾಯಣ, ಗೋವಿಂದ ಪೈ, ನಂಜುಂಡಯ್ಯ, ಶಿವರಾಮ ಕಾರಂತ, ಆ ನ ಕೃ, ಶ್ರೀಕಂಠಯ್ಯ, ಸಿದ್ದಪ್ಪ ಕಂಬಳಿ, ಚೆನ್ನಬಸಪ್ಪ,.. ಹತ್ತಾರು ಕನ್ನಡ ಸಾಹಿತಿಗಳು ಸರಪಳಿ ಕೊಂಡಿಗಳಂತೆ ಕೂಡಿಕೊಂಡಿದ್ದರು. ಅಲ್ಲದೇ ರಾಜ ಮಹಾರಾಜರ ಕಾಲದಲ್ಲಿ ಕೂಡ ಕನ್ನಡವನ್ನು ಉತ್ತಿ,ಭಿತ್ತಿ ಬೆಳೆಸಲು ರಾಜ ಕುಟುಂಬಗಳು ಇನ್ನಿಲ್ಲದ ಪ್ರಯತ್ನ ಮಾಡಿದ್ದವು. ಕದಂಬರ ಆಡಳಿತದ ಕಾಲದಲ್ಲಿ ಶಾಸನಗಳು ಕೆತ್ತಲ್ಪಟ್ಟವು. ಗಂಗಾ, ರಾಷ್ಟ್ರ ಕೂಟ, ಹೊಯ್ಸಳ, ಚಾಲುಕ್ಯರು, ಹಕ್ಕ ಬುಕ್ಕರ ರಾಜ ಮನೆತನವನ್ನು ಸ್ಮರಿಸಬೇಕಾಗಿದೆ.
ಅದರಲ್ಲೂ ಮಯೂರ, ಕೆಳದಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಳಿಕೇಶಿ ರಾಜರುಗಳು ಕನ್ನಡದ ಬೆಳವಣಿಗೆಗೆ ಛಾಪು ಮೂಡಿಸಿದ ದೊರೆಗಳು.
2300 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡಿನ ಮೊದಲ ರಾಜಧಾನಿ ಬನವಾಸಿ ಪ್ರದೇಶವನ್ನು ಆಯ್ಕೆ ಮಾಡಲಾಗಿತ್ತು.
ಕಾವೇರಿಯಿಂದ ಗೋದಾವರಿ ತನಕ ಕನ್ನಡ ನಾಡು ವಿಸ್ತರಣೆಗೊಂಡಿತ್ತು. ಕೆಲವರು ನರ್ಮದಾ ತನಕ ಕನ್ನಡ ಪ್ರದೇಶದ ಕುರುಹು ಇತ್ತು ಎನ್ನುವ ವಾದ ಮಾಡಿಸುತ್ತಾರೆ.
ನಂತರದಲ್ಲಿ 19 ಜಿಲ್ಲೆಗಳನ್ನು ಹೊಂದಿದ್ದ ಮೈಸೂರು ರಾಜ್ಯವನ್ನು 1973 ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸರ ಕಾಲದಲ್ಲಿ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿತ್ತು. ಈ ನೂತನ ಹೆಸರು ಸೇರ್ಪಡೆಗೆ ಅಂದಿನ ವಿಧಾನಸಭಾ ವಿರೋಧ ಪಕ್ಷದ ನಾಯಕ ಹೆಚ್. ಡಿ. ದೇವೇಗೌಡರ ಬೆಂಬಲ ಕೂಡ ದೊರಕ್ಕಿತ್ತು.
ನಮ್ಮ ದೇಶವನ್ನು 562 ಸಂಸ್ಥಾನಗಳಾಗಿ ವಿಂಗಡಿಸಿದ ಬ್ರಿಟಿಷರ ಆಡಳಿತದಲ್ಲಿ ಕರ್ನಾಟಕ ಭಾಗದಲ್ಲಿ ರಚಿಸಲಾಗಿದ್ದ 5 ಕನ್ನಡ ಪ್ರಾಂತ್ಯಗಳು ಒಂದಾದ ನಂತರ ಸಂಪೂರ್ಣ ಕನ್ನಡ ಭಾಷಾವಾರ್ ಪ್ರದೇಶಗಳು ಅಲ್ಲಲ್ಲಿ ಕರ್ನಾಟಕದಿಂದ ಕೈ ತಪ್ಪಿದೆ. ಮದ್ರಾಸ್ ಸಂಸ್ಥಾನದಿಂದ ಕೊಳ್ಳೇಗಾಲ ಪ್ರದೇಶ ಕನ್ನಡ ನಾಡಿಗೆ ಸೇರಿಸಿ ಕೊಳ್ಳುವುದರಲ್ಲಿ ಕರ್ನಾಟಕ ಯಶಸ್ವಿಯಾಗಿದೆ. ಕನ್ನಡಿಗರೇ ಹೆಚ್ಚಿರುವ ಕೇರಳ ರಾಜ್ಯದ ಕಾಸರಗೋಡು, ಮಹಾರಾಷ್ಟ್ರ ರಾಜ್ಯದ ಹಿಡಿತದಲ್ಲಿರುವ ಸಾಂಗ್ಲಿ, ಕೊಲ್ಲಾಪುರ ಪ್ರದೇಶಗಳನ್ನು ಕರ್ನಾಟಕದ ಬುಟ್ಟಿಗೆ ಹಾಕಿಕೊಳ್ಳಲು ನಮ್ಮ ಆಡಳಿತ ವ್ಯವಸ್ಥೆ ವಿಫಲಗೊಂಡಿದೆ.
ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೆ. ಸಿ. ರೆಡ್ಡಿ ಎಸ್. ನಿಜಲಿಂಗಪ್ಪ,ಅವರ ಆಡಳಿತ ಕಾಲದಿಂದಲೂ ಕನ್ನಡ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರ ದ ಜೊತೆ ರಾಜಕೀಯವಾಗಿ ಪ್ರಯತ್ನ ಸಾಗುತ್ತಲೇ ಇತ್ತು. ಕೊನೆಗೆ 2007 ನೇ ಇಸವಿಗೆ ಕೇಂದ್ರ ಒಪ್ಪಿಗೆ ನೀಡಿದ ನಂತರ 2009 ನೇ ಇಸವಿಯನ್ನು ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅನುಷ್ಠಾನ ವರ್ಷವೆಂದು ಘೋಷಣೆ ಮಾಡಲಾಗಿತ್ತು.
ಕರ್ನಾಟಕದಲ್ಲಿ ಬಳಕೆಯಲ್ಲಿರುವ 177 ಉಪಭಾಷೆಗಳಿಗೆ ಕನ್ನಡವೇ ಅಗ್ರಜ.
ಕನ್ನಡ ನಾಡಿನ ನೆಲ, ಜಲ, ಗಡಿ, ನೆಲೆ, ನುಡಿ, ಕಲೆಗಳ ರಕ್ಷಣೆಗೆ ಕರ್ನಾಟಕ ತನ್ನದೇಯಾದ ಹಕ್ಕುಗಳನ್ನು ಸ್ಥಾಪಿಸಿಕೊಂಡಿದೆ. ಕೆಂಪು, ಹಳದಿ ಬಣ್ಣದ ಬಾವುಟ ರಚಿಸಿದೆ. ಕೆಂಪು ಬಣ್ಣ ಧೈರ್ಯ, ಹಳದಿ ಶಾಂತಿಯ ಸಂಕೇತ ಸಾರಿದೆ.
ರಾಜ್ಯ ಲಾಂಚನವಾಗಿ ಗಂಡಬೇರುಂಡ, ಆನೆ ರಾಜ್ಯ ಪ್ರಾಣಿಯಾಗಿ, ಕೃಷ್ಣಾ ಕಾವೇರಿ, ತುಂಗಭದ್ರಾ, ಭೀಮಾ, ಹೇಮಾವತಿ, ವರದ, ಮಲಪ್ರಭಾ, ವೇದಾವತಿ, ಕಪಿಲ.. ಹೀಗೆ ನಾಡಿನ ಜೀವ ನದಿಯ ಗೌರವ ನೀಡಲಾಗಿದೆ.
19 ಜಿಲ್ಲೆಯಾಗಿದ್ದ ನಮ್ಮ ಕರ್ನಾಟಕ ಈಗ 226 ತಾಲೂಕುಗಳನ್ನು ಒಳಗೊಂಡ 31 ಜಿಲ್ಲೆಗಳಾಗಿವೆ.224 ವಿಧಾನಸಭಾ ಸದಸ್ಯತ್ವದ ಸಾಮರ್ಥ್ಯ ಹೊಂದಿದೆ. ವಿವಿಧ ಕ್ಷೇತ್ರದಿಂದ ಕೇಂದ್ರಕ್ಕೆ 28 ಲೋಕಸಭಾ ಸದಸ್ಯರ ಬಲ 12 ರಾಜ್ಯಸಭಾ ಸದಸ್ಯರನ್ನು ನೀಡಿ ತನ್ನ ಆಡಳಿತ ಶಕ್ತಿಯನ್ನು ಕಾಲ ಕಾಲಕ್ಕೆ ಇಮ್ಮಡಿ ಗೊಳಿಸಿದೆ.
ಕುವೆಂಪು ಅವರು ರಚಿಸಿದ ಜಯ ಭಾರತ ಜನನಿಯ ತನುಜಾತೆ ಎನ್ನುವ ನಾಡಗೀತೆ ಕನ್ನಡಿಗರಲ್ಲಿ ಪುಳಕ ಉಂಟು ಮಾಡುತ್ತಿದೆ.
ಆಂದ್ರಪ್ರದೇಶದ ಮಡಕಶಿರ ಕನ್ನಡ ನಾಡಿಗೆ ಶಿರವಾಗದೇ ತಪ್ಪಿಹೋಗಿದ್ದು ದುಃಖವಿದೆ.
ಪ್ರಸ್ತುತ ವಿದ್ಯಾವಂತರಿಂದಲೇ ಕನ್ನಡ ನುಡಿಗೆ ಅಪಮಾನವಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆ ಮರೆಯಾಗುವ ಅಪಾಯದಲ್ಲಿದೆ. ಇಂಗ್ಲಿಷ್, ಹಿಂದಿ, ಅನ್ಯ ರಾಜ್ಯಗಳ ಮಾತೃ ಭಾಷೆಗಳು ಕನ್ನಡ ಭಾಷೆಯ ಸ್ಥಾನವನ್ನು ಆಕ್ರಮಿಸಿದೆ. ಸಾರ್ವಜನಿಕರ ಅನುಕೂಲದ ಕಚೇರಿ, ವಿಧಾನಸೌಧ ಇಂಗ್ಲಿಷ್ ಭಾಷೆಗೆ ಪ್ರಧಾನ್ಯತೆ ಬಯಸಿದೆ, ಕನ್ನಡವೆನ್ನುವುದು ಹಳ್ಳಿಗರ ಭಾಷೆ ಎನ್ನುವ ಅಪವಾದ ಪಡೆದಿದೆ. ದಿನದಿಂದ ದಿನಕ್ಕೆ ಕನ್ನಡ ಭಾಷೆ ಕನ್ನಡ ನಾಡಿನಲ್ಲಿ ಬಳಕೆಯಾಗುವುದು ಹಿಮಾಲಯದ ಹಿಮದಂತೆ ಕರಗುತ್ತಿದೆ. ಭವಿಷ್ಯದಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ನಶಿಸಿ ಹೋಗದಂತೆ ಕಾಪಾಡುವ ಜವಾಬ್ದಾರಿ ಸಮಸ್ತ ಕನ್ನಡಿಗರಲ್ಲಿರಲಿ.ಹರೀಶ್ ಕೆ.ಸಿ ಪೆರಾಜೆ



































