ಮಾವ ತನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಸೊಸೆ ದೂರು ನೀಡಿದ ಹಿನ್ನಲೆಯಲ್ಲಿ ಮಾವನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
ದಿನಾಂಕ 02.02.2026 ರಂದು ರಾತ್ರಿ ಸುಮಾರು 7.30 ಗಂಟೆಗೆ ತಾನು ಸಂಪಾಜೆ ಕಲ್ಲುಗುಂಡಿಯಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ಇರುವ ಸಂದರ್ಭದಲ್ಲಿ, ತನ್ನ ಮಾವ ಅಕ್ರಮವಾಗಿ ಕೊಠಡಿ ಪ್ರವೇಶಿಸಿ ತನ್ನ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಪರಚಿ ಕಚ್ಚಿ ಗಾಯಗೊಳಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಸಾಹಿತ್ಯ ರೈ ಎಂಬವರು ಬಂಟ್ವಾಳ ಪೋಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೋಲೀಸರು ಕೇಸನ್ನು ಸುಳ್ಯ ಪೋಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾವ ನಿತ್ಯಾನಂದ ರೈ(58)ಯವರು ತನ್ನ ಮೇಲೆ ಹಲ್ಲೆ ನಡೆಸುವಾಗ ತಪ್ಪಿಸಿಕೊಂಡು ಹೊರಗೆ ಬಂದಾಗ, ಗಂಡ ಯಶಸ್ವಿ ರೈ (30) ಸಹ ತಂದೆಯ ಪರವಾಗಿ ವರ್ತಿಸಿ ನನಗೆ ಚಿಕಿತ್ಸೆ ಕೊಡಿಸಲು ನಿರಾಕರಿಸಿದ್ದಾರೆ ಎಂದು ಸಾಹಿತ್ಯ ರೈ (27)ಆರೋಪಿಸಿದ್ದಾರೆ.
ಘಟನೆ ನಡೆದ ಬಗ್ಗೆ ಸಾಹಿತ್ಯ ರೈಯವರು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದಲ್ಲಿರುವ ತನ್ನ ಮನೆಗೆ ಫೋನ್ ಮಾಡಿದ ಬಳಿಕ ಅವರ ತಂದೆ-ತಾಯಿ ಕಲ್ಲುಗುಂಡಿಗೆ ಬಂದು ಅವರನ್ನು ಸಂಪಾಜೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆಂದು ತಿಳಿದುಬಂದಿದ್ದು, ಈ ಸಂಬಂಧ ಸಾಹಿತ್ಯ ರೈಯವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ದಂಡ ಸಂಹಿತೆ (BNS) ಕಲಂ 85, 74, 115(2), 117(2), 351(2) 3(5) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯಾಗಿರುವ ಮಾವ ನಿತ್ಯಾನಂದ ರೈಯವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.
ಸಂಪಾಜೆ : ಮಾವನಿಂದ ಸೊಸೆಯ ಮೇಲೆ ಹಲ್ಲೆ



































