ಭಾರತದ ಸಂಸ್ಕೃತಿ, ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಆಳವಾಗಿ ಅರಿಯಲು ಪ್ರಯತ್ನಿಸಿದಾಗ, ಅಯೋಧ್ಯೆಯ ಶ್ರೀರಾಮನ ಆದರ್ಶ ವ್ಯಕ್ತಿತ್ವವು ದೇಶದ ಹಿರಿಮೆಯನ್ನು ಹೆಚ್ಚಿಸುತ್ತದೆ. ಭಾರತೀಯರು ಆರಾಧಿಸುವ ದಶಾವತಾರಗಳಲ್ಲಿ ಶ್ರೀರಾಮನು ವಿಶಿಷ್ಟ ಸ್ಥಾನ ಹೊಂದಿದ್ದು, ಮಾನವನಾಗಿ ಜನಿಸಿ ತನ್ನ ಜೀವನದ ಮೂಲಕ ಇಡೀ ಮಾನವಕುಲಕ್ಕೆ ಧರ್ಮ ಮತ್ತು ಸತ್ಯದ ಮಾರ್ಗವನ್ನು ತೋರಿಸಿದ ಆದರ್ಶ ಪುರುಷನಾಗಿದ್ದಾರೆ.
ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥವು ಶ್ರೀರಾಮನ ಆದರ್ಶ ಜೀವನದ ಪ್ರತಿಬಿಂಬವಾಗಿದ್ದು, ಇಡೀ ಲೋಕಕ್ಕೆ ನೈತಿಕತೆ ಮತ್ತು ಧರ್ಮದ ಪಾಠಗಳನ್ನು ಸಾರುತ್ತದೆ. ರಾಮಾಯಣದ ಕಥೆಯ ಮೂಲಕ ಶ್ರೀರಾಮನ ಧೈರ್ಯ, ಸಹನೆ, ಸತ್ಯನಿಷ್ಠೆ ಮತ್ತು ಕರ್ತವ್ಯನಿಷ್ಠೆ ನಮ್ಮ ಜೀವನಕ್ಕೆ ಮಾದರಿಯಾಗಿದೆ.
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು (ಮಾರ್ಚ್ 27 ,2026)ಆಚರಿಸಲ್ಪಡುವ ಶ್ರೀ ರಾಮನವಮಿ ಹಬ್ಬವು ಭಾರತದಲ್ಲಿ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ. ಈ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ; ಅದು ಭಾರತೀಯರ ಬದುಕಿನಲ್ಲಿ ಸತ್ಯ, ಧರ್ಮ ಮತ್ತು ನೀತಿಯ ಮಹತ್ವವನ್ನು ನೆನಪಿಸುವ ಪವಿತ್ರ ದಿನವಾಗಿದೆ.
ಈ ದಿನ ಭಕ್ತರು ಶ್ರೀರಾಮನ ಆರಾಧನೆ ಮಾಡಿ, ಭಜನೆ, ಪೂಜೆ ಮತ್ತು ಪಾರಾಯಣಗಳಲ್ಲಿ ತೊಡಗುತ್ತಾರೆ. ವಿಶೇಷವಾಗಿ ರಾಮಾಯಣ ಪಠಣ ಮಾಡುವ ಮೂಲಕ ರಾಮನ ಜೀವನದ ಆದರ್ಶಗಳನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ. ಅವರ ಜೀವನ ಕಥೆಯನ್ನು ಕೇಳುವುದು ಮತ್ತು ಓದುವುದು ಪುಣ್ಯಕರವೆಂದು ನಂಬಿಕೆ ಇದೆ.
ದೇಶದ ವಿವಿಧ ಭಾಗಗಳಲ್ಲಿ ರಾಮನವಮಿ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತದೆ. ಮೆರವಣಿಗೆಗಳು, ರಾಮಲೀಲೆ ನಾಟಕಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ ಮತ್ತು ಸಂಭ್ರಮವನ್ನು ಮೂಡಿಸುತ್ತವೆ. ಭಕ್ತರು ಉಪವಾಸ ವ್ರತ ಕೈಗೊಂಡು, ಪೂಜೆ ಸಲ್ಲಿಸಿ, ಸಿಹಿ ಭಕ್ಷ್ಯಗಳನ್ನು ಹಂಚಿಕೊಂಡು ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ.
ಶ್ರೀರಾಮನ ಜೀವನವು ನಮಗೆ ಅನೇಕ ಅಮೂಲ್ಯ ಮೌಲ್ಯಗಳನ್ನು ಕಲಿಸುತ್ತದೆ. ಪೋಷಕರಿಗೆ ಗೌರವ ನೀಡುವುದು, ಸತ್ಯವನ್ನು ಅನುಸರಿಸುವುದು, ಸಂಕಷ್ಟಗಳಲ್ಲಿ ಧೈರ್ಯ ಕಳೆದುಕೊಳ್ಳದಿರುವುದು ಮತ್ತು ಧರ್ಮದ ಮಾರ್ಗದಲ್ಲಿ ನಡೆಯುವುದು ನಾವು ಅವರ ಜೀವನದಿಂದ ಕಲಿಯಬಹುದು. ಕುಟುಂಬ ಜೀವನದಲ್ಲಿ ಆದರ್ಶ ಸತಿಪತಿಗಳಾಗಿ, ಸಮಾಜದಲ್ಲಿ ಸತ್ಯನಿಷ್ಠ ವ್ಯಕ್ತಿಗಳಾಗಿ ಬದುಕುವ ಮಾರ್ಗವನ್ನು ಶ್ರೀರಾಮನು ನಮಗೆ ತೋರಿಸಿದ್ದಾರೆ.
ಒಟ್ಟಿನಲ್ಲಿ, ಶ್ರೀರಾಮನವಮಿ ಹಬ್ಬವು ಕೇವಲ ಆಚರಣೆಗಾಗಿ ಮಾತ್ರವಲ್ಲ; ಅದು ನಮ್ಮ ಜೀವನವನ್ನು ಸತ್ಯ, ಧರ್ಮ ಮತ್ತು ಸನ್ಮಾರ್ಗದತ್ತ ಕೊಂಡೊಯ್ಯುವ ಆಧ್ಯಾತ್ಮಿಕ ಮಾರ್ಗವಾಗಿದೆ. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ, ಪ್ರೀತಿ, ವಿಶ್ವಾಸ ಮತ್ತು ಸತ್ಕಾರ್ಯಗಳ ಬೆಳಕನ್ನು ಹರಡಲಿ.ಜೇಸಿ ಮೋಹನ್ ಚಂದ್ರ, ಉಪನ್ಯಾಸಕರು, ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಸುಳ್ಯ.
ಭಕ್ತಿ, ಸಂಸ್ಕೃತಿ ಮತ್ತು ಮೌಲ್ಯಗಳ ಪ್ರತೀಕ – ಶ್ರೀ ರಾಮನವಮಿ ಹಬ್ಬ














































