ಮಂಗಳೂರು ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮುಳಿಹಿತ್ಲು ಜಂಕ್ಷನ್‌ನಲ್ಲಿ ಶನಿವಾರ ನಡೆದ ಭೀಕರ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆರೋಪಿಯಾಗಿರುವ ಅಂಗಡಿ ಮಾಲಕ ತೌಸಿಫ್ ಹುಸೇನ್ ಕಾರ್ಮಿಕ ಗಜ್ವಾನ್ ಆಲಿಯಾಸ್ ಜಗ್ಗುವಿನ ತಲೆಗೆ ಭೀಕರವಾಗಿ ದೊಣ್ಣೆಯಿಂದ ಹೊಡೆದು ಅನಂತರ ಪೆಟ್ರೋಲ್ ಹಾಕಿ ಸುಟ್ಟಿದ್ದ ಎಂಬ ಸುಳಿವು ದೊರೆತ್ತಿದೆ.ಗಜ್ವಾನ್ ಸುಮಾರು ಮೂರು ವರ್ಷಗಳಿಂದ ತೌಸಿಫ್ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಂಗಡಿ ಪಕ್ಕದಲ್ಲೇ ಇರುವ ಶೆಡ್‌ನಂತಹ ಜಾಗದಲ್ಲಿ ಮಲಗುತ್ತಿದ್ದ. ತೌಸಿಫ್ ಆಗಾಗ್ಗೆ ಗಜ್ವಾನ್‌ನನ್ನು ಹಿಂಸಿಸುತ್ತಿದ್ದ. ಶನಿವಾರ ಬೆಳಗ್ಗೆ ಕೂಡ ತೌಸಿಫ್, ಗಜ್ವಾನ್‌ನ ಮೇಲೆ ಹಲ್ಲೆ ನಡೆಸಿದ್ದ. ದೊಣ್ಣೆಯ ಪೆಟ್ಟಿನಿಂದ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಗಜ್ವಾನ್‌ನನ್ನು ಶೆಡ್‌ಗೆ ಸಾಗಿಸಿ ಅಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎನ್ನಲಾಗಿದೆ. ಅನಂತರ ವೆನ್‌ಲಾಕ್ ಆಸ್ಪತ್ರೆಗೆ ಸಾಗಿಸಿ ಅಲ್ಲಿ ವಿದ್ಯುತ್ ಶಾಕ್ ಹೊಡೆಯಿತು ಎಂದು ಸುಳ್ಳು ಹೇಳಿದ್ದ. ಪೊಲೀಸರು ಕೂಡಲೇ ತನಿಖೆ ಆರಂಭಿಸಿ ತೌಸಿಫ್ನನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಆರೋಪಿ ಬಾಯಿ ಬಿಟ್ಟಿರಲಿಲ್ಲ. ಅನಂತರ ತನಿಖೆ ಚುರುಕುಗೊಳಿಸಿ ಹಲವರನ್ನು ವಿಚಾರಿಸಿದಾಗ ನಿಜ ವಿಚಾರ ಗೊತ್ತಾಯಿತು. ಅಷ್ಟೊತ್ತಿಗೆ ತೌಸಿಫ್ ಕೂಡ ತನ್ನ ತಪ್ಪು ಒಪ್ಪಿಕೊಂಡಿದ್ದ ಎಂದು ತಿಳಿದುಬಂದಿದೆ. ದೇಹ ಬಹುತೇಕ ಸುಟ್ಟು ಹೋಗಿತ್ತು. ಮರಣೋತ್ತರ ಪರೀಕ್ಷಾ ವರದಿಯ ಬಳಿಕವಷ್ಟೇ ಸ್ಪಷ್ಟ ಕಾರಣ ಗೊತ್ತಾಗಬಹುದು ಎಂದು ಮೂಲಗಳು ತಿಳಿಸಿವೆ. ಭಾನುವಾರ ಸ್ಥಳ ಮಹಜರು ನಡೆಸಲಾಗಿದೆ.ಪತ್ತೆಯಾಗದ ವಿಳಾಸಗಜ್ವಾನ್ ಎಲ್ಲಿಯವನೆಂಬುದು ಅಂಗಡಿ ಮಾಲಕನಿಗಾಗಲಿ, ಪೊಲೀಸರಿಗಾಗಲಿ ಸ್ಪಷ್ಟವಾಗಿಲ್ಲ. ಗಜ್ವಾನ್‌ಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ. ರಾಜಸ್ಥಾನ ಮೂಲವೆಂದು ಅಂಗಡಿ ಮಾಲಕನಲ್ಲಿ ಹೇಳಿಕೊಂಡಿದ್ದ. ಈತನನ್ನು ಗಜ್ವಾನ್ ಆಲಿಯಾಸ್ ಜಗ್ಗು ಎಂದು ಸ್ಥಳೀಯರೇ ಕರೆಯುತ್ತಿದ್ದರು. ಹಾಗಾಗಿ ಹೆಸರು ಕೂಡ ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ. ಇದೀಗ ಪೊಲೀಸರು ಕೊಲೆಯಾದ ವ್ಯಕ್ತಿಯ ಮನೆ ವಿಳಾಸ, ವಾರಸುದಾರರ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.