ಸುಳ್ಯ : ತಾವು ಪಡೆದ ಶಿಕ್ಷಣ ಬದುಕಿಗೆ ಸಾರ್ಥಕತೆಯನ್ನು ನೀಡವಂತಿರಬೇಕು. ಆ ಶಿಕ್ಷಣದ ಮೂಲಕ ಸಮಾಜಕ್ಕೆ ಕೊಡುಗೆ ಇದ್ದರೆ ಅದು ಶ್ರೇಷ್ಠತೆಯನ್ನು ಪಡೆಯುತ್ತದೆ ಎಂದು ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಅಂಹಾರ ಹೇಳಿದರು.
ಅವರು ಕುಕ್ಕುಜಡ್ಕದ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಚೊಕ್ಕಾಡಿ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮದ ಎರಡನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜವನ್ನು ಮುನ್ನಡೆಸಲು ಶಿಕ್ಷಣವೇ ಆಧಾರ. ಹಿರಿಯರು ಸ್ಥಾಪಿಸಿದ ಆ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವ ಹಿಸಿ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಮಾತನಾಡಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಲು ಉತ್ತಮ ರಾಷ್ಟ್ರ ಭಕ್ತರನ್ನು ಹೊಂದುವುದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದು ಶ್ರೇಷ್ಠ ಯುವ ಸಮೂಹವನ್ನು ಸೃಷ್ಟಿಸಿ ಉತ್ತಮ ರಾಷ್ಟ್ರದ ನಿರ್ಮಾಣ ಮಾಡುವುದು ಪ್ರಧಾನಿ ಮೋದಿಯವರ ಕಲ್ಪನೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಶಿಕ್ಷಣ ವ್ಯಾಪಾರೀಕರಣ ಆಗಬಾರದು ವ್ಯಾಪಾರೀಕರಣ ಇಲ್ಲದ ಕಡೆ ಉತ್ತಮ ಹಾಗೂ ಮೌಲ್ಯಯುತ ಶಿಕ್ಷಣ ಸಿಗಲು ಸಾಧ್ಯ. ಸರಕಾರಿ ಶಾಲೆಗಳಲ್ಲಿ ಕಲಿತವರು ಉನ್ನತ ಸ್ಥಾನವನ್ನು ಪಡೆದ ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್ ಕೆ. ಮಾತನಾಡಿ ‘ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವುದೇ ಶಿಕ್ಷಣದ ಮುಖ್ಯ ಉದ್ದೇಶ. ಉತ್ತಮ ಶಾಲೆ ಒಂದು ಆರೋಗ್ಯಕರ ಊರಿನ ಲಕ್ಷಣ ಎಂದ ಅವರು ಹಲವಾರು ಶ್ರೇಷ್ಠ ಸಾಧಕರನ್ನು ನೀಡಿದ ಹಿರಿಮೆ ಚೊಕ್ಕಾಡಿ ಶಾಲೆಗಿದೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಎಲೆಕ್ನಿಕ್ ವಿ.ಲ್ಯಾಬ್ ಕಾಂ ಸ್ಥಾಪಕರಾದ ಎ.ಜಿ. ವೆಂಕಟ್ರಮಣ, ಕಲ್ಮಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಅಮರಮುಡೂರು ಗ್ರಾ.ಪಂ. ಸದಸ್ಯ ವೆಂಕಟ್ರಮಣ ಇಟ್ಟಿಗುಂಡಿ ಉಪಸ್ಥಿತರಿದ್ದರು. ಎಲೆಕ್ಟಿಕ್ ವಿ.ಲ್ಯಾಬ್ ಕಾಂ ಸ್ಥಾಪಕರಾದ ಎ.ಜಿ. ವೆಂಕಟ್ರಮಣ ಅವರನ್ನು ಸನ್ಮಾನಿಸಲಾಯಿತು
ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಉಪಾಧ್ಯಕ್ಷ ಅಣ್ಣಾಜಿ ಗೌಡ ಪೈಲೂರು, ಕಾರ್ಯದರ್ಶಿ ತೇಜಸ್ವಿ ಕಡಪಳ, ಖಜಾಂಜಿ ಹರ್ಷವರ್ಧನ ಬೊಳ್ಳೂರು, ಜೊತೆ ಕಾರ್ಯದರ್ಶಿ ತಿಮ್ಮಪ್ಪ ಗೌಡ ಕೊಂಡೆಬಾಯಿ, ಚೊಕ್ಕಾಡಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಸಂಕೀರ್ಣ ಚೊಕ್ಕಾಡಿ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಚೈತ್ರ ಯು. ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ, ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಮಾಯಿಪಡ್ಕ, ಶಾಲಾ ವಿದ್ಯಾರ್ಥಿ ನಾಯಕ ಅಭಿಜಿತ್ ಕೆ, ವಿದ್ಯಾರ್ಥಿ ನಾಯಕಿ ಹಸ್ತಾ ಕೆ. ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ತಿಮ್ಮಪ್ಪ ಗೌಡ ಕೊಂಡೆಬಾಯಿ ಸ್ವಾಗತಿಸಿ, ಚೊಕ್ಕಾಡಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಸಂಕೀರ್ಣ ಚೊಕ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕರಾದ ಎಂ.ಎ.ಸುಪ್ರೀತ್ ಮೋಂಟಡ್ಕ ವಂದಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.