ಸುಳ್ಯ : ಸುಳ್ಯ ನಗರದ ಕಸವನ್ನು ಕಲ್ಚರ್ಪೆಯ ವಿಲೇವಾರಿ ಘಟಕದಲ್ಲಿ ಹಾಕುತ್ತಿರುವುದರಿಂದ ಅಲ್ಲಿನ ಸ್ಥಳೀಯರು ನಿತ್ಯ ಸಮಸ್ಯೆ ಎದುರಿಸುತ್ತಿದ್ದು, ತ್ಯಾಜ್ಯ ನೀರಿನೊಂದಿಗೆ ನದಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಇದರ ವಿರುದ್ಧ ಹೋರಾಟದ ಅಂಗವಾಗಿ ಸೆ.೧೫ರಂದು ಅಂತರಾಷ್ಡ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿಯಲ್ಲಿ ಕಲ್ಚರ್ಪೆಯ ಸ್ಥಳೀಯರು ಕಪ್ಪುಪಟ್ಟಿ ಧರಿಸಿ ಭಾಗವಹಿಸಲು ನಿರ್ಧರಿಸಿದ್ದೇವೆ ಎಂದು ಹೋರಾಟ ಸಮಿತಿಯವರು ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಸರದ ನಿವಾಸಿ ಗೋಕುಲದಾಸ್ ಅವರು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಪರಿಸರ ಮಲಿನವಾಗುವ ಜೊತೆಗೆ ಅಲ್ಲಿಂದ ನೀರು ಹರಿದು ಸೇರುವ ನದಿಯೂಮಲಿನಗೊಳ್ಳುತ್ತಿದೆ. ನಮ್ಮ ಬೇಡಿಕೆಗೆ ಈವರೆಗೂ ಸ್ಪಂಧನೆ ಸಿಕ್ಕಿಲ್ಲ. ಸೆ.೧೫ರಂದು ಮಾನವ ಸರಪಳಿಯಲ್ಲಿ ಅಲ್ಲಿ ೨೦-೩೦ ಮನೆಯವರು ಮಕ್ಕಳು ಸೇರಿದಂತೆ ಎಲ್ಲರೂ ಕಪ್ಪು ಪಟ್ಟಿ ಧರಿಸಿ ಮಾನವ ಸರಪಳಿಯಲ್ಲಿ ಭಾಗವಹಿಸುತ್ತೇವೆ. ಆ ಮೂಲಕ ಸಂಬಂಧಿಸಿದವರ ಗಮನಕ್ಕೆ ಅಲ್ಲಿನ ಗಂಭೀರತೆ ತಿಳಿಸಲು ಪ್ರಯತ್ನಿಸುತ್ತೇವೆ ಎಂದರು.
ಹೋರಾಟ ಸಮಿತಿ ಉಪಾಧ್ಯಕ್ಷ ಅಶೋಕ್ ಪೀಚೆ ಮಾತನಾಡಿ, ಕಲ್ಚರ್ಪೆಯಲ್ಲಿ ಕಸ ಹಾಕದಂತೆ ಶಾಸಕರು ಸೂಚಿಸಿದ್ದರೂ ಮತ್ತೆ ಅಲ್ಲೇ ಕಸ ಹಾಕುವ ಬಗ್ಗೆ ನ.ಪಂ.ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ ಅಲ್ಲಿನವರಿಗೆ ಮತ್ತೆ ಆತಂಕ ಶುರುವಾಗಿದ್ದು, ನಗರದ ಕಸ ವಿಲೇವಾರಿಗೆ ನಗರ ವ್ಯಾಪ್ತಿಯಲ್ಲೇ ಜಾಗ ಹುಡುಕುವ ವ್ಯವಸ್ಥೆ ಮಾಡುವ ಬದಲು ವಿರೋಧ ಇರುವದಲ್ಲಿ ಕಸ ಹಾಕುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಚರ್ಪೆಯ ಸಮಸ್ಯೆಯ ತೀವ್ರತೆ ಬಗ್ಗೆ ನಗರ ಪಂಚಾಯತ್ ಸದಸ್ಯರಿಗೆ ತಿಳಿಸಲು ನ.ಪಂ. ಸದಸ್ಯರನ್ನು ಕಲ್ಚರ್ಪೆಯಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಆಹ್ವಾನಿಸುತ್ತೇವೆ. ಅಲ್ಲಿಯೇ ಬೆಳಗ್ಗೆಯಿಂಧ ಮಧ್ಯಾಹ್ನದ ವರೆಗೆ ಇದ್ದು, ಅಲ್ಲೇ ಆಹಾರ ಸೇವಿಸಲು ವ್ಯವಸ್ಥೆ ಮಾಡುತ್ತೇವೆ. ಆ ಮೂಲಕ ಅವರಿಗೂ ಅಲ್ಲಿನ ಸಮಸ್ಯೆ ತಿಳಿಸಲು ಪ್ರಯತ್ನಿಸಲಾಗುವುದು ಎಂದರು. ಕಲ್ಚರ್ಪೆಯಲ್ಲಿ ಕಸ ಹಾಕುತ್ತಿರುವುದರಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಗೊತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಇನ್ನೂ ಪೂರಕ ಕ್ರಮ ವಹಿಸಿದ ನಗರ ಪಂಚಾಯತ್ ಹಾಗೂ ಅಽಕಾರಿಗಳ ವಿರುದ್ಧ ಹೋರಾಟ ಸಮಿತಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದಿನ ಜಿಲ್ಲಾಧಿಕಾರಿಯೊಬ್ಬರು ಕಲ್ಚರ್ಪೆಗೆ ಭೇಟಿ ನೀಡಿ ಸಮಸ್ಯೆಗೆ ನೀವೆ ಪರಿಹಾರ ತಿಳಿಸಿ ಎಂದಿದ್ದರು, ಹಾಗಾದರೆ ಅಧಿಕಾರಿಗಳು ಯಾಕೆ ಇರುವುದು ಎಂದು ಹೋರಾಟಗಾರರು ಪ್ರಶ್ನಿಸಿದರು.
ಕಲ್ಚರ್ಪೆ ಹೋರಾಟ ಸಮಿತಿ ಅಧ್ಯಕ್ಷ ಸುಧೇಶ್, ಸಮಿತಿ ಪ್ರಧಾನ ಕಾರ‍್ಯದರ್ಶಿ ಬಾಲಚಂದ್ರ ಕಲ್ಚರ್ಪೆ, ಗೌರವಾಧ್ಯಕ್ಷ ಯುಸುಫ್ ಅಂಜಿಕಾರು, ಉಪಾಧ್ಯಕ್ಷ ನಾರಾಯಣ ಜಬಳೆ, ಜನಾರ್ದನ, ವೆಂಕಟೇಶ್, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.