ಸುಳ್ಯ: ಎಲಿಮಲೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಶತಮಾನದ ಸಂಭ್ರಮದಲ್ಲಿದ್ದು ಡಿಸೆಂಬರ್ ತಿಂಗಳಲ್ಲಿ 3 ದಿನದ ಅದ್ದೂರಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ತಿಳಿಸಿದ್ದಾರೆ. ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು 18-12-1920 ರಂದು
ಆಗಿನ ಡಿಸ್ಟಿಕ್ಟ್ ಬೋರ್ಡ್ ಎಲಿಮೆಂಟರಿ ಶಾಲೆಯಾಗಿ ಪ್ರಾರಂಭಗೊಂಡ ಈ ಶಾಲೆಯು 1960ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು.
ಈ ಶಾಲೆಯಲ್ಲಿ ಸುಮಾರು 4.500 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ಭವಿಷ್ಯ ಕಂಡುಕೊಂಡು ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಪ್ರಸ್ತುತ 167 ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಎಲಿಮಲೆಯನ್ನು ಕೇಂದ್ರವಾಗಿಸಿಕೊಂಡು ಮರ್ಕಂಜ, ನೆಲ್ಲೂರು ಕೆಮ್ರಾಜೆ. ದೇವಚಳ್ಳ ಮತ್ತು ಅಮರ ಮುಡ್ನೂರು ಗ್ರಾಮಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಿದ್ದಾರೆ. ಕಳೆದ ವರ್ಷದಿಂದ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳು ಪ್ರಾರಂಭವಾಗಿ ಪ್ರಸ್ತುತ ವರ್ಷದಲ್ಲಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಒಂದನೇ ತರಗತಿ ಪ್ರಾರಂಭಗೊಂಡಿದೆ. ಶಾಲೆಯ ಹಿರಿಯ ವಿದ್ಯಾರ್ಥಿಗಳು, ಊರಿನ ವಿದ್ಯಾಭಿಮಾನಿಗಳು ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಕರೆದು ಶತಮಾನೋತ್ಸವ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷರಾಗಿ ತೀರ್ಥರಾಮ ಎ.ವಿ.. ಪ್ರಧಾನ ಕಾರ್ಯದರ್ಶಿಯಾಗಿ ಗೋಪಿನಾಥ ಮೆತ್ತಡ್ಕ ಮತ್ತು ಮುಖ್ಯೋಪಾಧ್ಯಾಯ ಶ್ರೀಧರ ಗೌಡ ಕೆ, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಕೆ.ಆರ್ ಮಾವಿನಕಟ್ಟೆ, ಆರ್ಥಿಕ ಸಮಿತಿಯ ಸಂಚಾಲಕರಾಗಿ ಡಿ.ಟಿ. ದಯಾನಂದ, ಎಸ್.ಡಿ.ಎಂ.ಸಿ.ಅಧ್ಯಕ್ಷರಾಗಿ ಜಯಾನಂದ ಪಟ್ಟೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರಿಪ್ರಸಾದ್ ಬಿ.ವಿ. ಇದ್ದಾರೆ.
ಪ್ರಸ್ತುತ ಶಾಲೆಯಲ್ಲಿ ನೂತನವಾಗಿ 2 ಕೊಠಡಿಗಳು, ರಂಗಮಂದಿರ ಸಹಿತ ಸುಮಾರು 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇನ್ನು ಮುಂದೆ 2 ತರಗತಿ ಕೊಠಡಿಗಳು ನಿರ್ಮಾಣ ಹಂತದಲ್ಲಿದ್ದು. ಸುಸಜ್ಜಿತ ಸಭಾಭವನ, ಹೂವಿನ ತೋಟ, ಪ್ರಸ್ತುತ ಇರುವ ಕೊಠಡಿಗಳ ನವೀಕರಣ ಸೇರಿದಂತೆ ಸುಮಾರು 60 ಲಕ್ಷಕ್ಕೂ ಹೆಚ್ಚು ಮೊತ್ತದ ಕೆಲಸಗಳು ಬಾಕಿ ಇವೆ.
ಡಿಸೆಂಬರ್ 13, 14 ಹಾಗೂ 15ನೇ ತಾರೀಕಿಗೆ ಶತಮಾನೋತ್ಸವವನ್ನು ಅದ್ದೂರಿಯಾಗಿ ಜನಪ್ರತಿನಿಧಿಗಳ, ಅಧಿಕಾರಿಗಳ, ಗಣ್ಯರ ಉಪಸ್ಥಿತಿಯಲ್ಲಿ ಆಯೋಜಿಸಲು ತೀರ್ಮಾನಿಸಿದ್ದು, 3 ದಿನಗಳಲ್ಲಿ ಸ್ಥಳೀಯ ಮತ್ತು ಹೊರಗಿನ ಪ್ರಖ್ಯಾತ ತಂಡಗಳಿಂದ ವಿವಿಧ ಸಾಂಸ್ಕೃತಿಕ ವೈಭವವನ್ನು ಏರ್ಪಡಿಸಲಾಗುವುದು
ನೂರು ವರ್ಷ ತುಂಬಿರುವ ಈ ಶಾಲೆಯನ್ನು ಭವಿಷ್ಯದಲ್ಲೂ ಉತ್ತಮ ವಿದ್ಯಾ ಸಂಸ್ಥೆಯಾಗಿ ಬೆಳೆಸುವುದು ಹಾಗೂ ಈ ಶತಮಾನೋತ್ಸವದ ಸುಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನವನ್ನು ನಡೆಸಿ ಗರಿಷ್ಠ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಬರಮಾಡಿಕೊಳ್ಳುವುದೂ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಶತಮಾನೋತ್ಸವದ ಈ ಸಂದರ್ಭದಲ್ಲಿ ಶಾಲೆ ನಡೆದು ಬಂದ ನೂರು ವರ್ಷಗಳ ಪಯಣದ ವಿಶೇಷ ಸಾಕ್ಷ್ಯಚಿತ್ರವನ್ನು ತಯಾರಿಸಿ ಶತಮಾನೋತ್ಸವದ ಅಂತಿಮ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.ಶಾಲೆಯ ಅಭಿವೃದ್ಧಿಗೆ ಮತ್ತು ಶತಮಾನೋತ್ಸವ ಕಾರ್ಯಕ್ರಮಕ್ಕೆ ಹಳೆ ವಿದ್ಯಾರ್ಥಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಎ.ವಿ. ತೀರ್ಥರಾಮ ಮನವಿ ಮಾಡಿದರು.
ಪತ್ತಿಕಾಗೋಷ್ಢಿಯಲ್ಲಿ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಮೆತ್ತಡ್ಕ, ಕೋಶಾಧಿಕಾರಿ ರಾಧಾಕೃಷ್ಣ ಕೆ.ಆರ್.ಮಾವಿನಕಟ್ಟೆ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಾನಂದ ಪಟ್ಟೆ, ಶಾಲಾ ಮುಖ್ಯ ಶಿಕ್ಷಕ ಶ್ರೀಧರ ಗೌಡ ಕೆರೆಮೂಲೆ, ಕಾರ್ಯದರ್ಶಿಗಳಾದ ಕಿರಣ್ ಗುಡ್ಡಮನೆ, ಜಯಂತ ತಳೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ.ವಿ. ಉಪಸ್ಥಿತರಿದ್ದರು