ಮುಲ್ಕಿ: ವಿದ್ಯಾರ್ಥಿನಿ ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ರೈಲ್ವೆ ಗೇಟ್ ಬಳಿಯ ಕ್ವಾಟರ್ಸ್‌ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕೊಂಕಣ ರೈಲ್ವೆ ಗೇಟ್ ಸಿಬ್ಬಂದಿ ಮಹೇಶ್ ನಾಯಕ್ ಎಂಬವರ ಪುತ್ರಿ ಉಜ್ವಲ (17) ಎಂದು ಗುರುತಿಸಲಾಗಿದೆ.
ರೈಲ್ವೇ ಕ್ವಾಟರ್ಸ್‌ನ ಮನೆಯ ಎದುರು ಬದಿಯ ಕೋಣೆಯಲ್ಲಿ ಡೆತ್ ನೋಟ್ ಬರೆದಿಟ್ಟು ಪ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಉಜ್ವಲ ಮುಲ್ಕಿ ಖಾಸಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ನಡೆದ ಮೀಟಿಂಗ್ ಮುಗಿದ ಬಳಿಕ ಮನೆ ಕಡೆ ಬಂದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಏಕಾ ಏಕಿ ಈ ಕೃತ್ಯ ಎಸಗಿದ್ದಾಳೆ. ಆತ್ಮಹತ್ಯೆ ಸಂದರ್ಭ ತಂದೆ ಮಹೇಶ್ ನಾಯಕ್ ಮೈಲೊಟ್ಟು ರೈಲ್ವೇ ಗೇಟ್ ಬಳಿ ಕರ್ತವ್ಯಕ್ಕೆ ಹೋಗಿದ್ದರು. ತಾಯಿ ತನ್ನ ಊರಾದ ಭಟ್ಕಳಕ್ಕೆ ತೆರಳಿದ್ದರು. ಮೃತಳ ಸಹೋದರ ಕಾಲೇಜು ಒಂದರಲ್ಲಿ ಕಲಿಯುತ್ತಿದ್ದು ಕಾಲೇಜು ಮುಗಿಸಿ ಸಂಜೆ 6:30 ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.