(ಲೇಖನ) ಫೋಟೋಶೂಟ್‌ಗಾಗಿ ನಾನಾ ವೇಷ..!

ನಾವೆಲ್ಲಾ ಸಣ್ಣವರಿದ್ದಾಗಿನ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ದೃಷ್ಟಿ ಬೀಳುತ್ತದೆ ಎಂದು ಇಡೀ ಮುಖದಲ್ಲಿ ಜಾಗವಿದ್ದ ಕಡೆಯಲೆಲ್ಲಾ ಕಪ್ಪು ಬೊಟ್ಟುಗಳಿಂದ ತುಂಬಿಸುತ್ತಿದ್ದರು. ಬಾಲ್ಯದ ದಿನಗಳ ಯಾವುದಾದರೂ ಬ್ಲ್ಯಾಕ್‌ ಆಂಡ್‌ ವೈಟ್‌ ಫೋಟೋ ಸಿಕ್ಕಿದರೆ ನಮ್ಮ ಮುಖವನ್ನು ನೋಡಿ ನಮಗೇ ನಗು ಬರುವಷ್ಟು..
ಆದರೀಗ ಕಾಲ ಸಂಪೂರ್ಣ ಬದಲಾಗಿದೆ. ಈಗೇನಿದ್ದರೂ ಫೋಟೋಶೂಟ್‌ ಕಾಲ. ಹುಟ್ಟಿದ ಕೂಡಲೇ ಆರಂಭವಾಗುವ ಫೋಟೋಶೂಟ್‌, ನಾಮಕರಣ, ಒಂದನೇ ವರ್ಷ, ಎರಡನೇ ವರ್ಷ..ಹೀಗೆ ಸಾಗುತ್ತದೆ. ಇನ್ನು ಮೆಟರ್ನಿಟಿ ಫೋಟೋಶೂಟ್‌, ಪ್ರಿ ವೆಡ್ಡಿಂಗ್‌‌, ಪೋಸ್ಟ್‌ ವೆಡ್ಡಿಂಗ್ ಫೋಟೋಶೂಟ್‌, ಅಷ್ಟೇ ಏಕೆ? ವಿಚ್ಚೇದನಕ್ಕೂ ಫೋಟೋಶೂಟ್!‌
ಮಗುವಿನ ಜನನ ಖುಷಿಯ ವಿಚಾರ. ಹಣವಂತರು ಅದನ್ನು ಫೋಟೋಶೂಟ್‌ ಮಾಡಿ ಸಂಭ್ರಮಿಸಿ ಆ ನೆನಪುಗಳನ್ನು ಕಾಪಿಟ್ಟುಕೊಳ್ಳುತ್ತಾರೆ. ಮೆಟರ್ನಿಟಿ ಫೋಟೋಶೂಟ್‌, ಪ್ರಿ ವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್‌ ಫೋಟೋಶೂಟ್‌ ಮಾಡುವುದೂ ಅವರವರ ಖುಷಿ ಮತ್ತು ತಮ್ಮ ಜೀವನದ ಘಳಿಗೆಗಳನ್ನು ಸಂಭ್ರಮಿಸುವುದಕ್ಕಾಗಿ. ಕೆಲವರು ಇಂತಹ ಖುಷಿಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸಿದರೆ, ಇನ್ನು ಕೆಲವರು ವಿಚಿತ್ರವಾಗಿ ಪ್ರಸ್ತುತ ಪಡಿಸಲು ಹೋಗಿ ಟ್ರೋಲ್‌ ಆಗುವುದಿದೆ.
ತಮ್ಮ ವೃತ್ತಿಗೆ ಹೊಂದಿಕೆಯಾಗುವ ಕಾನ್ಸೆಪ್ಟ್‌ಗಳನ್ನಿಟ್ಟುಕೊಂಡೋ, ದಾರ್ಶನಿಕರ ಬದುಕು, ಹಳ್ಳಿ ಮಂದಿಯ, ಜನಪದೀಯ ಸಂಸ್ಕೃತಿಯನ್ನು ಬಿಂಬಿಸುವ ಕಾನ್ಸೆಪ್ಟ್‌ಗಳನ್ನಿಟ್ಟುಕೊಂಡು ಪ್ರಿ ವೆಡ್ಡಿಂಗ್‌, ಮೆಟರ್ನಿಟಿ ಫೋಟೋಶೂಟ್‌ ಮಾಡಿಸಿಕೊಂಡು ಕೆಲವರು ಸಮಾಜದಿಂದ ಶ್ಲಾಘನೆಗೊಳಗಾಗಿದ್ದಾರೆ. ಇಂತಹ ಫೋಟೋಶೂಟ್‌ನ ಒಳಾರ್ಥವೂ ಸೊಗಸು ಮತ್ತು ನೋಡಲೂ ಬಲು ಸುಂದರ. ಆದರೆ ವಿಚಿತ್ರವಾಗಿ ಫೋಟೋಶೂಟ್‌ ಮಾಡಿಸಿಕೊಂಡು ನಗೆಪಾಟಲಿಗೀಡಾಗುವ ವರ್ಗ ಮಾತ್ರ ಈ ಫೋಟೋಶೂಟ್‌ಗಳೆಲ್ಲ ಅಗತ್ಯವೇ ಎಂಬ ಟೀಕಾತ್ಮಕ ಚರ್ಚೆಯನ್ನು ಹುಟ್ಟು ಹಾಕುತ್ತಾರೆ.
ವಿಚ್ಚೇದನಕ್ಕೂ ಫೋಟೋಶೂಟ್!‌
ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನವೋ ಅಥವಾ ನಂತರವೋ ಫೋಟೋಶೂಟ್‌ ಮಾಡಿಸಿಕೊಳ್ಳುವುದು ಇತ್ತೀಚೆಗೆ ಸರ್ವೇ ಸಾಮಾನ್ಯ. ಆದರೆ ಸಮಾಜ ಎಷ್ಟು ಗಬ್ಬೆದ್ದು ಹೋಗಿದೆ ಎಂಬುದಕ್ಕೆ ಉದಾಹರಣೆ ಎಂದರೆ ವೈವಾಹಿಕ ಜೀವನವನ್ನು ಅಂತ್ಯಗೊಳಿಸುವುದನ್ನೂ ಫೋಟೋಶೂಟ್‌ ಮಾಡಿ ಸಂಭ್ರಮಿಸುವುದು. ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಇಂತಹ ಕೆಲವು ಫೋಟೋಶೂಟ್‌ಗಳು ವೈರಲ್‌ ಆಗಿದ್ದ ಬಗ್ಗೆ ನೀವೆಲ್ಲ ಓದಿರಬಹುದು. ಆದರೆ ಇಂತಹ ಫೋಟೋಶೂಟ್‌ಗಳು ಸಮಾಜಕ್ಕೆ, ಅದರಲ್ಲೂ ಹರೆಯದ ಮಕ್ಕಳಿಗೆ ಉತ್ತಮ ಸಂದೇಶವನ್ನಂತೂ ನೀಡದು.
‌ಇಂದು ಮನುಷ್ಯನ ಬದುಕನ್ನು ಸೋಶಿಯಲ್‌ ಮೀಡಿಯಾಗಳೇ ಆಳುತ್ತಿವೆ. ನಾಲ್ಕು ದಿನ ಊಟ ಇಲ್ಲದೆಯೂ ಬದುಕಬಹುದು, ಕೈಯಲ್ಲೊಂದು ಸ್ಮಾರ್ಟ್‌ ಫೋನ್‌ ಇಲ್ಲದೆ ಒಂದು ಕ್ಷಣ ಬದುಕಲಾಗದು ಎಂಬಲ್ಲಿಯವರೆಗೆ ನಮ್ಮ ಜೀವನ ಸ್ಮಾರ್ಟ್‌ ಫೋನ್‌ ಮತ್ತು ಸೋಶಿಯಲ್‌ ಮೀಡಿಯಾವೆಂಬ ಚಟಕ್ಕೆ ಅಂಟಿಕೊಂಡು ಬಿಟ್ಟಿದೆ. ಬೇಗ ಪ್ರಸಿದ್ದಿ ಪಡೆಯಬೇಕು, ನಾಲ್ಕು ಜನರು ನೋಡಬೇಕು, ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಬೇಕು…ಹೀಗೆ ಭ್ರಮೆಗಳ ಲೋಕದೊಳಗೆ ಬಿದ್ದು ಚಿತ್ರವಿಚಿತ್ರವಾಗಿ ವೀಡಿಯೋ ಮಾಡಿಕೊಂಡು ಫೋಟೋಶೂಟ್‌ ಮಾಡಿಸಿಕೊಂಡು ಬಿಡುತ್ತೇವೆ. ಕೆಲವರು ಪ್ರಸಿದ್ದಿಯಾಗುತ್ತಾರೆ, ಇನ್ನು ಕೆಲವರು ನಗೆ ಪಾಟಲಿಗೀಡಾಗುತ್ತಿದ್ದಾರೆ ಎಂಬುದು ವಾಸ್ತವ.
ಇನ್‌ಸ್ಟಾಗ್ರಾಂನಲ್ಲಿ ʼಭಕ್ತಿʼ
ಇತ್ತೀಚೆಗೆ ಹಬ್ಬಗಳಿಗೆ ಫೋಟೋಶೂಟ್‌ ಮಾಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ದೇವರಿಗೆ ಕೈ ಮುಗಿಯುತ್ತಿರುವ, ದೇವರ ವಿಗ್ರಹದ ಪಕ್ಕದಲ್ಲಿ ನಿಂತಿರುವ ಚಿತ್ರ ಇನ್‌ಸ್ಟಾಗ್ರಾಂಗೆ ಹಾಕುವುದೂ ಈಗಿನ ಟ್ರೆಂಡ್. ಅಲ್ಲಿ ಭಕ್ತಿ ಇರುತ್ತದೋ, ಫೋಟೋ ಹೇಗೆ ಬರುತ್ತದೆಯೋ ಏನೋ ಎಂಬ ಗೊಂದಲವಿರುತ್ತದೆಯೋ ಗೊತ್ತಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಫೋಟೋಕ್ಕೆ ಬರುವ ಲೈಕ್ಸ್‌, ಕಾಮೆಂಟ್ಸ್‌ಗಳ ಮೇಲೆ ನಮ್ಮ ಭಕ್ತಿ ನಿಂತಿದೆ ಎಂಬುವಲ್ಲಿವರೆಗೆ ನಮ್ಮ ಭಕ್ತಿಯ ತೋರ್ಪಡಿಕೆ ಸಾಗಿದೆ.
ಇನ್ನೇನೋ ನವರಾತ್ರಿ ಸಮೀಪಿಸುತ್ತಿದೆ. ನವರಾತ್ರಿ ಸಂದರ್ಭದಲ್ಲಿ ಶಾರದಾ ಮಾತೆಯಂತೆ ಅಲಂಕಾರ ಮಾಡಿಕೊಂಡು ಫೋಟೋಶೂಟ್‌ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಶಾರದಾ ಮಾತೆಯಂತೆ ಕಾಣಬೇಕೆಂಬ ಸಂಭ್ರಮ, ಆಸೆ ಇರಬಹುದು. ಇದಕ್ಕಾಗಿ ಶಾರದಾ ಮಾತೆಯಂತೆ ಅಲಂಕರಿಸಿಕೊಳ್ಳುವುದು ತಪ್ಪೋ, ಸರಿಯೋ ಗೊತ್ತಿಲ್ಲ. ಆದರೆ ಶಾರದಾ ಮಾತೆಯಂತೆ ಅಲಂಕಾರ ಮಾಡುವವರು ಒಂದಷ್ಟು ದಿನ ಮಾಂಸಾಹಾರ ಸೇವಿಸುವುದಾಗಲೀ ಮಾಡಬಾರದು, ವೃತಾಚರಣೆಯಲ್ಲಿರಬೇಕು ಎಂದು ಬಲ್ಲವರು ಹೇಳುತ್ತಾರೆ. ಹೀಗಾಗಿ ಇಂತಹ ಫೋಟೋಶೂಟ್‌ಗಳಲ್ಲಿ ತೊಡಗಿಸಿಕೊಳ್ಳುವವರು ಅವುಗಳನ್ನು ಪಾಲಿಸಿದರೆ ಉತ್ತಮ ಎಂಬುದು ಕಳಕಳಿ.

Ad Widget . Ad Widget . Ad Widget . . Ad Widget . . Ad Widget .

ಫೋಟೋಶೂಟ್‌ ಮಾಡುವ ಮುನ್ನ..
ಫೋಟೋಶೂಟ್‌ ಮಾಡಿಸುವುದು ಖಂಡಿತಾ ತಪ್ಪಲ್ಲ. ಜೀವನದ ಸಂಭ್ರಮಗಳನ್ನು ಸುರಕ್ಷಿತವಾಗಿಡಲು ಇದೊಂದು ಮಾಧ್ಯಮ. ಆದರೆ ಆ ಸಂಭ್ರಮಗಳನ್ನು ಸಂಭ್ರಮಿಸಲು ಹೋಗಿ ಅನಾಹುತಗಳನ್ನು ಮಾಡಿಕೊಳ್ಳಬಾರದು. ನದಿಯಂತಹ ಅಪಾಯಕಾರಿ ಸ್ಥಳಗಳಲ್ಲಿ ಫೋಟೋಶೂಟ್‌ ಮಾಡುವ ಮುನ್ನ ಎಚ್ಚರಿಕೆ ಅಗತ್ಯ. ಸಾಮಾಜಿಕ ಜಾಲತಾಣ ಸಾರ್ವಜನಿಕ. ಕೇವಲ ಲೈಕ್ಸ್‌, ಕಾಮೆಂಟ್ಸ್‌ಗಾಗಿ ಚಿತ್ರವಿಚಿತ್ರ ಫೋಟೋಶೂಟ್‌ ಮಾಡಿಸಿಕೊಂಡರೆ ಅದರಿಂದ ತಾವೂ ನಗೆಪಾಟಲಿಗೀಡಾಗುವುದರೊಂದಿಗೆ ಎಳೆಯ ಮಕ್ಕಳಿಗೂ ಕೆಟ್ಟ ಸಂದೇಶವನ್ನುGBJ ರವಾನಿಸಿದಂತಾಗುತ್ತದೆ. ಅಂತಹವುಗಳಿಗೆ ಅವಕಾಶ ಮಾಡಿಕೊಡದೆ ಸಂಭ್ರಮಗಳು ಸದಾ ಸ್ಮರಣೀಯವಾಗಿರುವಂತಿರಲಿ ಫೋಟೋಶೂಟ್.

. Ad Widget . Ad Widget . Ad Widget

-ಧನ್ಯಾ ಬಾಳೆಕಜೆ

.

Leave a Comment

Your email address will not be published. Required fields are marked *

error: Content is protected !!
Scroll to Top