ಅಮ್ಮ ತನ್ಹೊಟ್ಟೆಯ ಮೇಲೆ ಕೈಯಾಡಿಸಿದ ಆ ಮೊದಲ ಸ್ಪರ್ಶ ಅಪ್ಪ ಹೊರಜಗತ್ತಿಂದ ನನ್ನೊಡನಾಡಿದ ಆ ಮೊದಲ ಮಾತು ಜನಜಂಗುಳಿಯಲು ನಾ ಮಲಗಿದ್ದ ಆ ಮೊದಲ ಬೆಚ್ಚಗಿನ ಗೂಡು ಮರೆಯಲಾರದ ಅನುಭವಗಳಿವು ಈ ಮನಗಳಲಿ ನೋಡು…
ಕಣ್ತೆರೆದ ತಕ್ಷಣ ನಾವ್ ಕಂಡ ಆ ಮೊದಲ ಮುಗುಳ್ನಗು
ನೇಸರನು ಮೈ ಸೋಕಿಸಿದ ಆ ಮೊದಲ ತಂಗಾಳಿ
ಉದಯಾಸ್ತದೊಳು ಭಾಸ್ಕರ ದಾಟಿದ ಆ ಮೊದಲ ಸೇತುವೆ
ಕತ್ತಲಲ್ಲಿ ಬೆಳಕ ಚೆಲ್ಲಿ ಸ್ಪೂರ್ತಿ ಕೊಟ್ಟ ಆ ಚಂದ್ರಮ
ಏಳು ಬಣ್ಣಗಳು ಕೊಟ್ಟ ಸಮಾನತೆಯ ಮೊದಲ ನೀತಿ
ಚಿಲಿಪಿಲಿ ಸ್ವರಗಳು ನೀಡಿದ ಆ ಮೊದಲ ಗೀತೆ
ಬೇರೂರಿದ ವೃಕ್ಷ ಧಾರೆಯೆರೆದ ಆ ಸ್ತಂಭ ಆಧಾರ
ಎಲ್ಲವೂ ನಮ್ಮ ಬದುಕಿಗೆ ಬೆನ್ತಟ್ಟುವ ಮೃದು ಕರ
ಮೊದಲೆಂಬ ಮೊದಲಲ್ಲಿ ಜೀವನ ಕಲಿಸಿದ ಪಾಠ
ನಡು ಬೀದಿಯ ಕೊನೆಯಲ್ಲಿ ಜೀವನ ಕೊಟ್ಟ ಹಠ
ನಮ್ಮ ಪ್ರತೀ ಕ್ಷಣದ ನಡಿಗೆಯಲು ಹೂವಾದ ಕಲ್ಲುಗಳು
ಹುಮ್ಮಸ್ಸಿಗೆ ಜೀವ ತುಂಬುವವು ನಮ್ಮೆಲ್ಲ ಗೆಲುವುಗಳು
-ಹಿತಾಶ್ರೀ ಪಟ್ಟೆ