ನವದೆಹಲಿ : ತಿರುಪತಿ ದೇವಸ್ಥಾನದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪದ
ಕೇಳಿ ಬಂದ ಹಿನ್ನಲೆಯಲ್ಲಿ ಬಗ್ಗೆ ಸಮಗ್ರ ತನಿಖೆಗೆ ಸಿಬಿಐ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ನೇಮಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಈ ವಿಷಯದ ಬಗ್ಗೆ ರಾಜಕೀಯ ನಾಟಕವನ್ನು ಬಯಸುವುದಿಲ್ಲ, ಏಕೆಂದರೆ ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಭಕ್ತರ ನಂಬಿಕೆಯ ವಿಷಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಎಸ್‌ಐಟಿ ತಂಡವು ಇಬ್ಬರು ಸಿಬಿಐ ಅಧಿಕಾರಿಗಳು, ಇಬ್ಬರು ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಆಹಾರ ನಿಯಂತ್ರಕ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಆರೋಪ ಮತ್ತು ಪ್ರತ್ಯಾರೋಪಗಳ ವಿಚಾರಕ್ಕೆ ಹೋಗುವುದಿಲ್ಲ. ನ್ಯಾಯಾಲಯವನ್ನು ರಾಜಕೀಯಕ್ಕೆ ಬಳಸಲು ನಾವು ಅನುಮತಿಸುವುದೂ ಇಲ್ಲ ಎಂದು ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ಕೆ.ವಿ ವಿಶ್ವನಾಥನ್ ಅವರ ಪೀಠವು ಹೇಳಿದೆ.