ಮನ ಬಯಸುತ್ತಿದೆ ಮತ್ತದೇ ಮಗುವಾಗಲು
ಎಲ್ಲ ನೋವುಗಳ ಮೀರಿ ಮನಬಿಚ್ಚಿ ನಗಲು
ಮತ್ತೊಮ್ಮೆ ನಾ ತೊದಲು ನುಡಿಯಲು
ಮಗದೊಮ್ಮೆ ನಾ ಬಿದ್ದು ಎದ್ದು ನಡೆಯಲು
ಮನ ಬಯಸಿದೆ ಮತ್ತದೇ ಮಡಿಲನಿಂದು
ಸಂಬಂಧ ಸುಳಿಗಳಿಂದ ದೂರ ಸರಿದು
ತನ್ನದೇ ಲೋಕದಲ್ಲಿ ಮುಳುಗಿ ಬಂದು
ನಗುವಿನ ಮೋಹಕತೆಯ ಮೇಲೆ ಮಿಂದೇಳಲು
ಮನ ಸಾರಿ ಸಾರಿ ಹೇಳುತ್ತಿದೆ ಕಂದಮ್ಮನಾಗಲು
ನೋವು ನಲಿವಿನ ವ್ಯತ್ಯಾಸ ತಿಳಿಯದೆ
ಹಾವ-ಭಾವಗಳ ನಡುವೆ ವಿಚಲಿತನಾಗದೆ
ಮೂಕ ಜೀವಿಗಳ ಹಾಗೆ ಮುಗ್ಧತೆಯಲಿ ಮುಳುಗಲು
ಮತ್ತೆ ಮನ ಬಯಸಿದೆ ಪುಟಾಣಿಯಾಗಲು
ಸ್ನೇಹ ಭಾವಗಳ ಅರಿವಿಲ್ಲದೆ ಬದುಕಲು
ಯಾವುದರ ಚಿಂತೆಯಿಲ್ಲದೆ ಸುಖವಾಗಿರಲು
ತೊಟ್ಟಿಲಿನ ನಡುವಲ್ಲಿ ಅಮ್ಮನ ಕಂಗಳ ನೋಡುತ ಹಾಯಾಗಿ ಮಲಗಲು….
–
ಹಿತಾಶ್ರೀ ಪಟ್ಟೆ
–