ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿ ಭಾಗಗಳಲ್ಲಿ ಅರೆಭಾಷೆ ಗಡಿನಾಡ ಉತ್ಸವ 2024 ಮೊದಲ ಗಡಿನಾಡ ಉತ್ಸವ ಅ.27ರಂದು ಬಂದಡ್ಕದಲ್ಲಿ ನಡೆಯಲಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಸಭಾ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಆರ್ಟ್ ಆಫ್ ಲಿವಿಂಗ್ ಜ್ಞಾನ ಮಂದಿರ ಬಂದಡ್ಕ ಬಳಿಯಿಂದ ಅದ್ದೂರಿ ಮೆರವಣಿಗೆ ನಡೆಯಲಿದೆ. ಮುಂಜಾನೆಯಿಂದ ಸಂಜೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುವುದು. ಬೆ.9.30ರಿಂದ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆ.10ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ ಉದ್ಘಾಟನೆ ನೆರವೇರಿಸಲಿದ್ದಾರೆ.
ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸುವರು. ಹಲವು ಮಂದಿ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆ.11 ಗಂಟೆಗೆ ‘ಗಡಿಭಾಗಲಿ ಅರೆಭಾಷೆನ ಉಳ್ಳಿ ಬೆಳ್ಳುವ ಕಾರ್ಯ’ ಕುರಿತು ಕವಯತ್ರಿ ಸ್ಮಿತಾ ಅಮೃತರಾಜ್ ಉಪನ್ಯಾಸ ನೀಡುವರು. ಬಳಿಕ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. 12.30ರಿಂದ ಬಹುಭಾಷಾ ಕವಿ ಗೋಷ್ಠಿ ತೇಜಕುಮಾರ್ ಕುಡೆಕಲ್ಲು ಇವರ ಅಧ್ಯಕ್ಷತೆಯಲ್ಲಿ ನಡೆಯುವುದು. ಅ.2ರಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಅ.3.30ಕ್ಕೆ ಸಮಾರೋಪ ಸಮಾರಂಭ, ಸಮ್ಮಾನ, ಬಹುಮಾನ ವಿತರಣೆ ನಡೆಯುವುದು. ಉದುಮ ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸುವರು. ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸುವರು. ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಯೋಷಕರಾದ ಸುಬ್ರಾಯ ಸಂಪಾಜೆ ಸಮಾರೋಪ ಭಾಷಣ ಮಾಡುವರು. ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಸನ್ಮಾನ ನೆರವೇರಿಸುವರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎ.ವಿ. ತೀರ್ಥರಾಮ, ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮುತ್ತಣ್ಣ ಮಾಸ್ತರ್ (ಶಿಕ್ಷಣ, ಕ್ರೀಡಾ ಕ್ಷೇತ್ರ), ಮೋನಪ್ಪ ಗೌಡ ಇಳಂದಿಲ (ಸಹಕಾರ), ಬಾಲಕೃಷ್ಣ ಮಾಸ್ತರ್ (ಶಿಕ್ಷಣ), ಬೋಜಪ್ಪ ಗೌಡ ಪಾಲಾರುಮೂಲೆ (ಧಾರ್ಮಿಕ), ಪುರುಷೋತ್ತಮ ಬೊಡ್ಡನಕೊಚ್ಚಿ (ಸಮಾಜ ಸೇವೆ) ಧರ್ಮಾವತಿ ಪಾಲಾರುಮೂಲೆ (ಪ್ರಥಮ ಅರೆಭಾಷೆ ಮಹಿಳಾ ಜನಪ್ರತಿನಿಧಿ ಕುತ್ತಿಕೋಲು ಗ್ರಾ.ಪಂ), ಯಕ್ಷಿತ್ ಬಾಲೆಂಬಿ (ಕ್ರೀಡೆ) ಹಾಗೂ ದಿ.ಗೋವಿಂದೇ ಗೌಡ ಸ್ಮರಣಾರ್ಥ ರಾಜ್ಯ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಸ.ಉ.ಹಿ.ಪ್ರಾ.ಶಾಲೆ ಕೋಲ್ಟಾರು ಇವರಿಗೆ ಅತ್ಯುತ್ತಮ ಗಡಿನಾಡ ಶಾಲೆಗೆ ಗೌರವಾರ್ಪಣೆ ನಡೆಯುವುದು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ 6 ಕಡೆಗಳಲ್ಲಿ ಗಡಿನಾಡ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಾದ ಬಂದಡ್ಯ, ಮಂಡೆಕೋಲು ಹಾಗೂ ಕಲ್ಲಪ್ಪಳ್ಳಿ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶಗಳಾದ ಚೆಯ್ಯಂಡಾಣೆ, ಭಾಗಮಂಡಲ ಹಾಗೂ ಕುಶಾಲನಗರದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಗಡಿ ಉತ್ಸವ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು
ಸದಾನಂದ ಮಾವಜಿ ವಿವರಿಸಿದರು.
ಎರಡನೇ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಗಡಿಪ್ರದೇಶವಾಗಿರುವ ಚೆಯ್ಯಂಡಾಣೆಯಲ್ಲಿ ನವೆಂಬರ್ 10ರಂದು ಆಯೋಜಿಸಲಾಗುವುದು.
ಮೂರನೆಯ ಕಾರ್ಯಕ್ರಮವನ್ನು ಮಂಡೆಕೋಲಿನಲ್ಲಿ ಡಿಸೆಂಬರ್ 1ರಂದು ಹಮ್ಮಿಕೊಳ್ಳಲಾಗುವುದು.
ಉಳಿದ ಮೂರು ಕಡೆಗಳಲ್ಲಿ ಗಡಿನಾಡ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಉತ್ಸವವನ್ನು ನಡೆಸಲು ರೂಪು-ರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ.
ಗಡಿನಾಡಿನಲ್ಲಿ ಅರೆಭಾಷಿಕರ ಹಾಗೂ ಅರೆಭಾಷೆಯ ಹುಮ್ಮಸ್ಸನ್ನು ಹೆಚ್ಚಿಸುವ ನಿಟ್ಟಿನಿಂದ ಅದ್ದೂರಿಯ ಉತ್ಸವಕ್ಕೆ ಈಗಾಗಲೇ ತಯಾರಿ ನಡೆದಿದೆ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಾಗಿದೆ. ಎಲ್ಲ ಪ್ರದೇಶಗಳಲ್ಲಿ ಕಾರ್ಯಕ್ರಮಗಳು ಸ್ಥಳೀಯ ಅರೆಭಾಷಿಕರು ಮತ್ತು ಅರೆಭಾಷಾ ಅಭಿಮಾನಿಗಳು, ಮುಖಂಡರು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದ್ದು ಉತ್ಸವಗಳಲ್ಲಿ ಅರೆಭಾಷೆ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ಆಹ್ವಾನಿತ ಅರೆಭಾಷೆ ಸಾಂಸ್ಕೃತಿಕ ತಂಡಗಳಿಗೆ ಅವಕಾಶ ನೀಡಲಾಗುವುದು. ಎಲ್ಲಾ ಕಡೆಗಳಲ್ಲೂ ಉತ್ಸವದ ಅಂಗವಾಗಿ ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಗಡಿ ಪ್ರದೇಶಗಳಲ್ಲಿ ಅರೆಭಾಷೆಯನ್ನು ಉಳಿಸಿ ಬೆಳೆಸಿ ಹಬ್ಬಿಸುವ ಹಾಗೂ ಭಾಷೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸದಾನಂದ ಮಾವಜಿ ತಿಳಿಸಿದರು.