ಕಟ್ಟಡ ಕುಸಿದು ಬಿದ್ದು ವಿದ್ಯಾರ್ಥಿಗಳು ಗಾಯಗೊಂಡು ಭಾರೀ ಸುದ್ದಿಯಾಗಿದ್ದ ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರು ಸರಕಾರಿ ಉನ್ನತ ಹಿ.ಪ್ರಾ.ಶಾಲೆಗೆ ನೂತನ ಕೊಠಡಿ ನಿರ್ಮಾಣಕ್ಕಾಗಿ 29 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.
ಆ.27 ರಂದು ಶಿಥಿಲಗೊಂಡಿದ್ದ ಶಾಲಾ ಕಟ್ಟಡದ ಪಂಚಾಂಗ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕುಂತೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಘಟನೆಯ ಹಿನ್ನೆಲೆಯಲ್ಲಿ ಜಿ.ಪಂ. ಇಂಜಿನಿಯರ್ ಹಾಗೂ ಶಾಲಾ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಶೀಘ್ರ ಅನುದಾನ ಒದಗಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. ವಿವಿಧ ಶಾಲೆಗಳಿಗೆ ಒಟ್ಟು 72.50 ಲಕ್ಷ ರೂ.ಅನುದಾನ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಕುಂತೂರುಶಾಲೆಗೆ29 ಲಕ್ಷರೂ. ಅನುದಾನಸೇರಿದಂತೆ, ದೇರಾಜೆ ಸರಕಾರಿ ಹಿ.ಪ್ರಾ.ಶಾಲೆಗೆ 14.50 ಲಕ್ಷ ರೂ., ಸುಳ್ಯ ತಾಲೂಕಿನ ಕಲ್ಮಡ್ಕ ಸರಕಾರಿ ಹಿ.ಪ್ರಾ.ಶಾಲೆಗೆ 14.50 ಲಕ್ಷ ರೂ., ಮುರುಳ್ಯ ಸರಕಾರಿ ಹಿ.ಪ್ರಾ. ಶಾಲೆಗೆ 14.50 ಲಕ್ಷ ರೂ. ಸೇರಿ ಒಟ್ಟು 72.50 ಲಕ್ಷ ರೂ. ಅನುದಾನ ತರಗತಿ ಕೊಠಡಿ ನಿರ್ಮಾಣಕ್ಕೆ ಮಂಜೂರಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.