ಸುಳ್ಯ : ಇಂದು ಗ್ರಾಮ ಪಂಚಾಯತಿಗಳು ವಿವಿಧ ಸಮಸ್ಯೆಗಳಳನ್ನು ಎದುರಿಸುತ್ತಿದೆ. ಗ್ರಾ.ಪಂ.ನ ಸಮಸ್ಯೆಗಳ ಬಗ್ಗೆ ನಾನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಸಾಧ್ಯವಾಗುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭರವಸೆ ನೀಡಿದರು.
ಅವರು ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಪಂಚಾಯತ್ ರಾಜ್ ಸಮಾವೇಶವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ನಿಮ್ಮೆಲ್ಲ ಬೇಡಿಕೆಗಳನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ, ಎಲ್ಲಾ ಬೇಡಿಕೆಗಳನ್ನು ಆಗದಿದ್ದರೂ ಅರ್ಧದಷ್ಟು ಬೇಡಿಕೆಗಳನ್ನಾದರೂ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಆಡಳಿತದಲ್ಲಿ ಗ್ರಾಮ ಪಂಚಾಯತ್ ಪ್ರಮುಖ ಸ್ಥಾನದಲ್ಲಿದೆ. ಗ್ರಾ.ಪಂ.ಗೆ ಚುನಾಯಿತರಾಗಿ ಗ್ರಾಮಸ್ಥರಿಗೆ ಸೇವೆ ಸಲ್ಲಿಸುವ ಅವಕಾಶ ಗ್ರಾ.ಪಂ. ಸದಸ್ಯರಿಗೆ ಇದೆ. ಗ್ರಾ.ಪಂ. ಸದಸ್ಯರು ಗ್ರಾ.ಪಂ. ಪಿಡಿಒ, ಕರ‍್ಯದರ್ಶಿ, ಸಿಬ್ಬಂದಿಗಳ ಸಹಕಾರ ಪಡೆದು ಗ್ರಾಮದ ಅಭಿವೃದ್ಧಿ ಪರ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪಂಚಾಯತ್ ರಾಜ್ ಸಮಾವೇಶದಲ್ಲಿ ವಿವಿಧ ಅಹವಾಲುಗಳನ್ನು ಆಲಿಸಿ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ನಿಮ್ಮೆಲ್ಲ ಬೇಡಿಕೆಗಳನ್ನು ನಾನು ೨೦ ವರ್ಷದ ಹಿಂದೆಯೇ ಸರಕಾರಕ್ಕೆ ಸಲ್ಲಿಸಿದ್ದೇನೆ. ನಿಮ್ಮೆ ಬೇಡಿಕೆಗಳಲ್ಲೇ ಪರಿಹಾರಗಳು ಇದೆ. ಯಾವ ರೀತಿ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ನಾವು ಅರಿಯಬೇಕು ಎಂದರು. ಗ್ರಾ.ಪಂ. ಸದಸ್ಯರ ಗೌರವ ಧನ ಹೆಚ್ಚು ಮಾಡಬೇಕೆಂದು ನಾನು ಸರಕಾರವನ್ನು ಒತ್ತಾಯಿಸುತ್ತೇನೆ, ಮುಂದಿನ ೧-೨ ವರ್ಷಗಳ ಬಳಿಕ ಈ ಬಗ್ಗೆ ಸರಕಾರ ಕ್ರಮ ವಹಿಸಬಹುದು ಎಂಬ ನಿರೀಕ್ಷೆ ನನ್ನದು ಎಂದರು.
ಮೆಸ್ಕಾಂ ಬಿಲ್ ಗ್ರಾ.ಪಂ.ಗೆ ಹೊರೆ ಆಗುತ್ತಿದ್ದು, ಅದಕ್ಕಾಗಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲು ಮುಂದಾಗಬೇಕು ಎಂದರು. ಜೆಜೆಎಂ ಯೋಜನೆಯ ಅವ್ಯವಸ್ಥೆಗಳ ಬಗ್ಗೆ ನಾನು ಈ ಮೊದಲೇ ಪ್ರಶ್ನೆ ಮಾಡಿದ್ದೇನೆ, ಆದರೂ ಈ ಬಗ್ಗೆ ಯಾವುದೇ ಪೂರಕ ಕ್ರಮ ವಹಿಸಲಾಗಿಲ್ಲ ಎಂದರು. ನಾವು ಪ್ರಸ್ತಾಪಿಸುವ ಸಮಸ್ಯೆಗಳು ಒಂದು ಗ್ರಾಮದ ಸಮಸ್ಯೆ ಆಗಿರದೆ ರಾಜ್ಯದ ಎಲ್ಲಾ ಗ್ರಾ.ಪಂ.ಗಳ ಸಮಸ್ಯೆಗಳು ಪರಿಹಾರ ಆಗುವಂತಾಗಬೇಕು ಎಂದರು. ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಗ್ರಾ.ಪಂ.ನ ಬೇಡಿಕೆ ಈಡೇರಿಸಲು ಇಲ್ಲಿ ಕಷ್ಟ ಸಾಧ್ಯ. ಅಲ್ಲಿನ ಗ್ರಾ.ಪಂ.ಗಳ ವ್ಯಾಪ್ತಿ ದೊಡ್ಡದಾಗಿದ್ದು, ಇಲ್ಲಿಗೆ ಅಳವಡಿಕೆ ಕಷ್ಟವಾಗಬಹುದು ಎಂದರು. ನಿಮ್ಮೆ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.
ವಿವಿಧ ಬೇಡಿಕೆ ಮಂಡನೆ:
ಕಸ್ತೂರಿ ರಂಗನ್ ಅನುಷ್ಠಾನ ಮಾಡದಂತೆ, ಸಂಜೀವಿನಿ ಒಕ್ಕೂಟದ ಬಗ್ಗೆ ಗ್ರಾ.ಪಂ.ಗೆ ಸರಿಯಾಗಿ ಮಾಹಿತಿ ನೀಡುವಂತೆ, ಕಸ ಸಾಗಾಟ ವಾಹನಕ್ಕೆ ಮಹಿಳಾ ಚಾಲಕರನ್ನೇ ನೇಮಿಸುವುದು ಸವಾಲಾಗಿದೆ, ಜೆಜೆಎಂ ಪೈಪ್‌ಲೈನ್ ನಿರ್ವಹಣೆ ಮಹಿಳೆಯರಿಗೆ ಕಷ್ಟವಾಗಲಿದೆ, ಜೆಜೆಎಂ ಕಾಮಗಾರಿಯನ್ನು ಗ್ರಾ.ಪಂ. ಮೂಲಕವೇ ಕಾಮಗಾರಿ ನಿರ್ವಹಿಸಬೇಕು. ಜೆಜೆಎಂ ಕಾಮಗಾರಿಯನ್ನು ಕ್ರಮಬದ್ಧವಾಗಿ ನಡೆಸಬೇಕು, ಕುಡಿಯುವ ನೀರಿನ ಬಿಲ್ ಹೊರೆ ಗ್ರಾ.ಪಂ.ಗೆ ನೀಡದಂತೆ, ಪಿಡಿಒ ಕೊರತೆ ಇದ್ದು ಅದರಲ್ಲೂ ಪಿಡಿಒ ಗಳನ್ನು ದೂರದ ಗ್ರಾ.ಪಂ.ಗಳಿಗೆ ಪ್ರಭಾರ ನಿಯೋಜನೆ ಮಾಡುವುದಕ್ಕೆ ವಿರೋಧ, ಉದ್ಯೋಗ ಖಾತರಿ ಯೋಜನೆಗೆ ವರ್ಷಕ್ಕೆ ಕನಿಷ್ಠ ಮೂರು ಬಾರಿ ಬೇಡಿಕೆ ಸಲ್ಲಿಸಲು ಅವಕಾಶ ನೀಡಬೇಕು, ಗ್ರಾ.ಪಂ.ಗಳಿಗೆ ಅನುದಾನಗಳನ್ನು ನೇರವಾಗಿ ನೀಡಬೇಕು, ಗರಿಷ್ಠ ಅನುದಾನ ನೀಡಬೇಕು, ಗ್ರಾ.ಪಂ. ಸದಸ್ಯರಿಗೆ ಪಿಂಚಣಿ, ಭತ್ಯೆ ಹೆಚ್ಚಳ ಮಾಡುವಂತೆ, ಉದ್ಯೋಗ ಖಾತರಿ ವ್ಯವಹಾರ ಪೇಪರ್‌ಲೆಸ್ ಮಾಡುವಂತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಗ್ರಾಮ ಪಂಚಾಯತ್ ಸದಸ್ಯರು ಸಮಾವೇಶದಲ್ಲಿ ಮಂಡಿಸಿದರು.
ಸುಳ್ಯ ತಾಲೂಕು ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಶೈಲೇಶ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಽಕಾರಿ ರಾಜಣ್ಣ, ದ.ಕ.ರಾಜೀವ್ ಗಾಂಽ ಪಂಚಾಯತ್ ಸಂಘಟನೆ ಅಧ್ಯಕ್ಷ ಶುಭಾಶ್ಚಂದ್ರ ಕೊಳ್ನಾಡು, ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹರೀಶ್ ರೈ ಉಬರಡ್ಕ, ತಾಲೂಕು ಒಕ್ಕೂಟದ ಪ್ರಧಾನ ಕರ‍್ಯದರ್ಶಿ ಕೇಶವ ಅಡ್ತಲೆ, ಸಂಚಾಲಕ ಮಹೇಶ್ ಕುಮಾರ್ ಕರಿಕ್ಕಳ ಮತ್ತಿತರರು ಉಪಸ್ಥಿತರಿದ್ದರು. ಶೈಲೇಶ್ ಅಂಬೆಕಲ್ಲು ಸ್ವಾಗತಿಸಿದರು. ಮಡಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಜಯರಾಮ ವಂದಿಸಿದರು. ರವೀಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.