ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಸುಳ್ಯದ ಭವ್ಯ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತ್ಯೋತ್ಸವ ಕೆ.ವಿ.ಜಿ. ಸುಳ್ಯ ಹಬ್ಬ ಆಚರಣೆ ಕಾರ್ಯಕ್ರಮ
25 ಮತ್ತು 26 ರಂದು ನಡೆಯಲಿದೆ ಎಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಹಾಗೂ ಇತರ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆವಿಜಿ ಕಾನೂನು ಮಹಾ ವಿದ್ಯಾಲಯದ ವಠಾರದಲ್ಲಿ ನಡೆಯುವ ಎರಡು ದಿನಗಳ ಕಾರ್ಯಕ್ರಮದ ಅಂಗವಾಗಿ
ಡಿ.25ರಂದು ಪೂ.9ರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮತ್ತು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸದಸ್ಯರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ. ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಡಾ.ಹರಪ್ರಸಾದ್ ತುದಿಯಡ್ಕ ಉದ್ಘಾಟಿಸುವರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಗೌರವ ಉಪಸ್ಥಿತರಿರುವರು. ವೇಗದ ನಡಿಗೆಯ ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕಾಣಿಯೂರು ಕ್ರೀಡಾಕೂಟಕ್ಕೆ ಚಾಲನೆ ನೀಡುವರು ಎಂದು ಹೇಳಿದರು.
ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಕೆ.ವಿ.ಜಿ. ಅವರ ಭಾವಚಿತ್ರಕ್ಕೆ ಪುಷ್ಪ ನಮನ ನಡೆಯಲಿದೆ. ಈ ಸಂದರ್ಭದಲ್ಲಿ ಕೃಷಿ ಕಾರ್ಯದಲ್ಲಿ ಅಪಘಾತಗೊಂಡು ದೈಹಿಕ ಶಕ್ತಿ ಕಳೆದುಕೊಂಡ ಇಬ್ಬರು ಯುವಕರಿಗೆ ತಲಾ 25 ಸಾವಿರ ಸಹಾಯ ಧನ ವಿತರಣೆ ನಡೆಯಲಿದೆ. ತಹಶೀಲ್ದಾರ್ ಮಂಜುಳ ಎಂ. ಅವರು ಸಹಾಯಧನ ಹಸ್ತಾಂತರ ಮಾಡುವರು. ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ ಉಪಸ್ಥಿತರಿರುವರು.
ಸಂಜೆ 5.30ಕ್ಕೆ ನೆಹರೂ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಯಿಂದ ಕೆವಿಜಿ ಸಾಧನಾಶ್ರೀ ಮತ್ತು ಯುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸುವರು. ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸುವರು. ಖ್ಯಾತ ವಾಗಿ ಮೈಸೂರು ಸಂತ ಫಿಲೋಮಿನಾ ಕಾಲೇಜಿನ ನೀವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣ ಗೌಡ ಸಂಸ್ಮರಣಾ ಭಾಷಣ ಮಾಡುವರು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಹಾಗು ಹಿರಿಯ ವೈದ್ಯರಾದ ಡಾ.ಎಂ.ವಿ.ಶಂಕರ ಭಟ್ ಅವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು. ಡಾ. ರವಿಕಾಂತ್ ಜಿ.ಒ (ವೈದ್ಯಕೀಯ), ಕಸ್ತೂರಿ ಶಂಕರ್(ಸ್ವ ಉದ್ಯೋಗ), ಆಶ್ರಫ್ ಕಮ್ಮಾಡಿ (ಉದ್ಯಮ), ಆದರ್ಶ್ ಎಸ್.ಪಿ (ಕ್ರೀಡೆ), ಪ್ರಕಾಶ್ ಕುಮಾರ್ ಮುಳ್ಯ (ಕೃಷಿ ಮತ್ತು ಹೈನುಗಾರಿಕೆ) ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಲಾಗುವುದು.
ರಾತ್ರಿ 9.30ರಿಂದ ಜೀವನ್ ಟಿ.ಎನ್.ಬೆಳ್ಳಾರೆ ಸಾರಥ್ಯದ ಡ್ಯಾನ್ಸ್ & ಬೀಟ್ಸ್ ತಂಡದವರಿಂದ ನೃತ್ಯ ಸಂಭ್ರಮ ನಡೆಯಲಿದೆ.ಸಮಾರಂಭದ ಬಳಿಕ ಸಂಘದ ಸದಸ್ಯರಿಗೆ ಹಾಗೂ ಕುಟುಂಬದವರಿಗೆ ಸಹ ಭೋಜನ ವ್ಯವಸ್ಥೆ ಇದೆ ಎಂದು ಡಾ.ಎನ್.ಎ.ಜ್ಞಾನೇಶ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪ್ರಧಾನ ಕಾರ್ಯದರ್ಶಿ ಕೆ. ರಾಜು ಪಂಡಿತ್, ಕೋಶಾಧಿಕಾರಿ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಸದಸ್ಯತ್ವ ಅಭಿಯಾನದ ಸಂಚಾಲಕರಾದ ಹರೀಶ್ ಬಂಟ್ವಾಳ್ ಹಾಗೂ ಇತರರು ಉಪಸ್ಥಿತರಿದ್ದರು.