ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ನೂತನ ರಾಜಗೋಪುರವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಮಾಜಿ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರು ದಾನಿಗಳ ನಾಮಫಲಕವನ್ನು ಅನಾವರಣಗೊಳಿಸಿದರು
ಆಡಳಿತ ಕಛೇರಿಯನ್ನು ಶಾಸಕ ಪೊನ್ನಣ್ಣ, ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಕೆ.ಜಿ. ಬೋಪಯ್ಯ ಅವರು ಉದ್ಘಾಟಿಸಿದರು.
ಬಳಿಕ ಸಭಾ ಕಾರ್ಯಕ್ರಮವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.
ಶಾಸಕ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ
ಪುಣ್ಯಕ್ಷೇತ್ರದ ಕಟ್ಟಡದ ನಿರ್ಮಾಣದ ಮೂಲಕ ದೇವರ ಮೇಲಿನ ಭಕ್ತಿ ಹೆಚ್ಚುತ್ತದೆ. ಕೊಡಗು ಜಿಲ್ಲೆಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಲಯಗಳ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲು ಬದ್ಧನಾಗಿರುವುದಾಗಿ ತಿಳಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಭಜನೆ ಇರುವಲ್ಲಿ ವಿಭಜನೆ ಇಲ್ಲ. ದೇವಾಲಯ ಹಾಗೂ ಶಾಲೆ ಊರಿನ ಎರಡು ಕಣ್ಣುಗಳು. ದೇವಾಲಯ ಅಭಿವೃದ್ಧಿ ಆದರೆ ಊರಿನ ಅಭಿವೃದ್ಧಿ. ಕೊಡಗಿನೊಂದಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅನುದಾನ ಒದಗಿಸಿಕೊಡುವಂತೆ ಶಾಸಕ ಪೊನ್ನಣ್ಣ ಅವರಲ್ಲಿ ವಿನಂತಿಸಿಕೊಂಡರು.
ಶಿಕ್ಷಣತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ ಅವರು ಮಾತನಾಡಿ ಪೆರಾಜೆ ಅತ್ಯಂತ ಐತಿಹಾಸಿಕ ಕ್ಷೇತ್ರ. ಇಲ್ಲಿ ಕನ್ನಡ, ಮಲಯಾಳಿ, ತುಳು ದೈವಗಳಿವೆ. ಜಾತ್ರೋತ್ಸವ ಸಂದರ್ಭದಲ್ಲಿ ಎಲ್ಲಾ ದೈವಗಳ ಸಂಗಮ ಈ ಕ್ಷೇತ್ರದಲ್ಲಿ ಆಗುತ್ತದೆ. ಇಲ್ಲಿ ಮ್ಯೂಸಿಯಂ ಮಾಡಿ ಎಲ್ಲಾ ಮನೆತನಗಳ ಇತಿಹಾಸವನ್ನು ಒದಗಿಸುವಂತೆ ಮಾಡಿದರೆ ಈ ಕ್ಷೇತ್ರ ಮುಂದೊಂದು ದಿನ ಐತಿಹಾಸಿಕವಾಗಲು ಸಾಧ್ಯವಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ ದೇಗುಲದ ಒಳ ಪ್ರವೇಶಿಸಿದಾಗ ನಮ್ಮ ಕಲ್ಮಶಗಳು ದೂರವಾಗಿ ಭಕ್ತಿ ಹೆಚ್ಚುತ್ತದೆ. ತಲಕಾವೇರಿ ಕ್ಷೇತ್ರಕ್ಕೂ ಶಾಸ್ತಾವು ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ದೇವಾಲಯದ ಅಭಿವೃದ್ಧಿ ಮುಖಾಂತರ ಊರು ಒಗ್ಗಟ್ಟಾಗಲು ಸಾಧ್ಯವಿದೆ ಎಂದು ಹೇಳಿದರು.
ಅಧ್ಯಕ್ಷ ಜಿತೇಂದ್ರ ನಿಡ್ಯಮಲೆ ಅವರು ಮಾತನಾಡಿ ಕಳೆದ ಜೂನ್ ತಿಂಗಳಲ್ಲಿ ನೂತನ ರಾಜಗೋಪುರ ಪಡ್ರಿರೆಗೆ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಶಂಕುಸ್ಥಾಪನೆ ಮಾಡಿದ್ದೆವು. ಈ ಬಾರಿಯ ಜಾತ್ರೋತ್ಸವದ ಮುಂಚೆ ಕಟ್ಟಡದ ಉದ್ಘಾಟನೆ ಮಾಡಬೇಕು ಎಂಬುದು ನಮ್ಮ ಗುರಿಯಾಗಿತ್ತು. ಶಾಸಕ ಎ.ಎಸ್. ಪೊನ್ನಣ್ಣ ಅವರು
ಈ ಕಟ್ಟಡಕ್ಕೆ ಹತ್ತು ಲಕ್ಷ ಅನುದಾನ ಒದಗಿಸಿಕೊಟ್ಟಿದ್ದರು. ಶಿಲ್ಪಶಾಸ್ತ್ರಜ್ಞರು ಸೇರಿ ಸುಮಾರು ಐವತ್ತು ಲಕ್ಷ ವೆಚ್ಚದ ಸುಂದರ ಕಟ್ಟಡವನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದಕ್ಕೆ ಕೈಜೋಡಿಸಿದ ಗ್ರಾಮಸ್ಥರು ಹಾಗೂ ಪರವೂರ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಮಾತನಾಡಿ ದೇವರ ದೇಹದೊಳಗೆ ಪ್ರವೇಶ ಮಾಡುವ ಅವಕಾಶ ರಾಜಗೋಪುರದ ಮೂಲಕ ನಮಗೆ ಬಂದಿದೆ. ಪುರಾತನ ದೇವಲಾಯಗಳಿಗೆ ಹೋಗುವಾಗ ಭಕ್ತರ ಮನೆ ಒಗ್ಗಟ್ಟಾಗುತ್ತದೆ. ಆ ಮೂಲಕ ಆ ಗ್ರಾಮ ಒಗ್ಗಟ್ಟಾಗಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಮೂಲಕ ಸರ್ಕಾರದ ವತಿಯಿಂದ. ಹತ್ತು ಲಕ್ಷ ಅನುದಾನ ಒದಗಿಸಲು ಕಾರಣಕರ್ತರಾದ ಪ್ರೊ. ಕೆ.ಇ. ರಾಧಾಕೃಷ್ಣ ಅವರನ್ನು ಹಾಗೂ ತಲಕಾವೇರಿ ಕ್ಷೇತ್ರದ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಶಾಸ್ತಾವು ದೇವರ ಸುಪ್ರಭಾತ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪೆರಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ, ತಲಕಾವೇರಿ ಕ್ಷೇತ್ರದ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ, ದೇವತಕ್ಕ ರಾಜಗೋಪಾಲ ರಾಮಕಜೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ ಉಪಸ್ಥಿತರಿದ್ದರು.
ದೇವಾಲಯದ ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು ವಂದಿಸಿದರು. ಮನೋಜ್ ನಿಡ್ಯಮಲೆ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕೇಸರ ಜಿತೇಂದ್ರ ನಿಡ್ಯಮಲೆ ಅವರು ಸ್ವಾಗತಿಸಿ
ಪೆರಾಜೆ : ಶ್ರೀ ಶಾಸ್ತಾವು ದೇವಸ್ಥಾನದ ನೂತನ ರಾಜಗೋಪುರ ಉದ್ಘಾಟನೆ
