ಸುಳ್ಯ ತಾಲೂಕಿನ ಉಬರಡ್ಕಮಿತ್ತೂರು ಗ್ರಾಮದ ಹುಳಿಯಡ್ಕದಲ್ಲಿ ನಿರ್ಮಾಣಗೊಂಡಿರುವ ವೀರಭದ್ರ ದೇವರ ನೂತನ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.2ರಂದು ಆರಂಭಗೊಂಡು ಫೆ.4 ರವರೆಗೆ ನಡೆಯಲಿದೆ.
ಫೆ.2 ರಂದು ಬೆಳಗ್ಗೆ ಉಬರಡ್ಕ ಹೂಪಾರೆ (ಕುತ್ತಮೊಟ್ಟೆ) ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆ ಆರಂಭಗೊಳ್ಳುವುದು, ಮೆರವಣಿಗೆ ಕ್ಷೇತ್ರಕ್ಕೆ ತಲುಪಿದ ಬಳಿಕ ಉಗ್ರಾಣ ತುಂಬಿಸಲಾಗುವುದು. ಸಂಜೆ ತಂತ್ರಿಗಳ ಆಗಮಣದ ಬಳಿಕ ದೇವತಾ ಪ್ರಾರ್ಥನೆ, ಬಳಿಕ ವಿವಿಧ ವೈದಿಕ ಕಾರ್ಯಗಳು ನಡೆಯುವುದು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು, ಫೆ.3ರಂದು ಬೆಳಗ್ಗೆ ಗಣಪತಿ ಹವನ, ಬಳಿಕ 10-50ರಿಂದ 11.40ರ ಮೇಷ ಲಗ್ನದ ಸುಮೂಹೂರ್ತದಲ್ಲಿ ಬ್ರಹ್ಮಕಲಶಪೂಜೆ, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ ಮತ್ತು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯುವುದು.
ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮೂಡಬಿದ್ರೆ ಶ್ರೀ ಕ್ಷೇತ್ರ ಕರಿಂಜೆ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಪ್ರತಿಷ್ಟಾ ಸಮಿತಿ ಅಧ್ಯಕ್ಷ ಮುರಳೀಧರ ಅರಂತೋಡು ಅಧ್ಯಕ್ಷತೆ ವಹಿಸುವರು. ಕುಂಟಾರು ರವೀಶ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದು, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ವಿಠಲ್ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಮೂಡಿಬರುವುದು.
ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಮಾಚಿದೇವ ಜಯಂತಿ ನಡೆಯುವುದು. ಉಬರಡ್ಕ ಮಿತ್ತೂರು ನರಸಿಂಹ ಶಾಸ್ತಾವು ದೇವಸ್ಥಾನದ ನಿಕಟ ಪೂರ್ವಾಧ್ಯಕ್ಷ ಬಿ.ರತ್ನಾಕರ ಗೌಡ ಬಳ್ಳಡ್ಕ ದೀಪ ಪ್ರಜ್ವಲನೆ ಮಾಡುವರು. ಮಡಿವಾಳ ಸಂಘದ ಅಧ್ಯಕ್ಷ ಲೋಕೇಶ್ ಮಡಿವಾಳ ಏನೆಕಲ್ಲು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಊರಿನ ಹಲವು ಮಂದಿ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಫೆ.4ಕ್ಕೆ ಶ್ರೀ ವೀರಭದ್ರ ದೇವರ ವಾರ್ಷಿಕ ಪೂಜೆ, ಮಧ್ಯಾಹ್ನ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಉಬರಡ್ಕ : ಫೆ.2ರಿಂದ ವೀರಭದ್ರ ದೇವರ ನೂತನ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
