ಕೊಡಗು ಜಿಲ್ಲೆಯಲ್ಲಿ ಕೊಡವ, ಅರೆಭಾಷಿಕರು ಸೇರಿದಂತೆ ಹಲವು ಸಣ್ಣ ಸಣ್ಣ ಭಾಷಿಕ ಸಮಾಜದವರು ಬದುಕಿನ ಬಂಡಿ ಸಾಗಿಸುತ್ತಿದ್ದು, ಎಲ್ಲಾ ಸಣ್ಣ ಸಣ್ಣ ಭಾಷಿಕರೂ ಕೊಡಗಿನ ಇತಿಹಾಸ ತಿಳಿದು, ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕರೆ ನೀಡಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ ಶುಕ್ರವಾರ ನಡೆದ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಜಾತಿ, ಭಾಷೆ ಮೇಲೆ ಸಂಘರ್ಷ ಮಾಡದೆ ಸಾಮರಸ್ಯದ ಬದುಕು ಕಾಣಬೇಕಿದೆ. ಎಲ್ಲರೂ ಒಂದಾಗಿ ಸಾಗಬೇಕಿದೆ. ಯಾವುದೇ ಸಣ್ಣ ಭಾಷೆಯಾದರೂ ಅದು ಉಳಿಯಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರತಿಪಾದಿಸಿದರು.’
ಮಕ್ಕಳಿಗೆ ಅರೆಭಾಷೆ ಜೊತೆಗೆ ನಾಡಿನ ಭಾಷೆ ಕನ್ನಡ ಹಾಗೆಯೇ ಸಂಪನ್ಮೂಲ ಭಾಷೆಯಾದ ಇಂಗ್ಲೀಷ್ ಭಾಷೆ ಕಲಿಸೋಣ. ಆದರೆ ಮನೆಯಲ್ಲಿ ಅರೆಭಾಷೆ ಕಲಿಸುವಂತಾಗಬೇಕು ಮತ್ತು ಮಾತನಾಡುವಂತಾಗಬೇಕು ಎಂದರು.
ಅರೆಭಾಷೆ ಕಲೆ, ಸಂಸ್ಕøತಿ, ಸಾಹಿತ್ಯ, ಆಚಾರ-ವಿಚಾರಗಳನ್ನು ಬೆಳೆಸಿಕೊಂಡು ಹೋಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ವಿಶ್ವದಲ್ಲಿ ಏಳು ಸಾವಿರಕ್ಕೂ ಹೆಚ್ಚು ಸಣ್ಣ ಭಾಷೆಗಳಿದ್ದು, ಹಾಗೆಯೇ ಭಾರತದಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಸಣ್ಣ ಸಣ್ಣ ಭಾಷೆಗಳಿವೆ ಎಂದು ಡಿ.ವಿ.ಸದಾನಂದಗೌಡ ಅವರು ವಿವರಿಸಿದರು.
ಅರೆಭಾಷೆ ಹಾಗೂ ಕೊಡವ ಭಾಷೆ ಸೇರಿದಂತೆ ಸಣ್ಣ ಸಣ್ಣ ಭಾಷೆಗಳಿಂದಲೇ ಆಚಾರ-ವಿಚಾರಗಳು ಸಂಸ್ಕøತಿ ಮತ್ತು ಸಂಪ್ರದಾಯಗಳು ಉಳಿದಿವೆ ಎಂಬುದನ್ನು ಮರೆಯಬಾರದು ಎಂದು ಸದಾನಂದ ಗೌಡ ಅವರು ಅಭಿಪ್ರಾಯಪಟ್ಟರು.
ರಾಷ್ಟ್ರವು ಅನೇಕತೆಯಲ್ಲಿ ಏಕತೆಯನ್ನು ಹೊಂದಿರುವುದು ವಿಶೇಷವಾಗಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಕøತಿ, ಆಚಾರ-ವಿಚಾರ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ಅರೆಭಾಷಿಕರಲ್ಲಿ ಹುಟ್ಟಿನಿಂದ ಸಾವಿನವರೆಗೆ ನೂರಾರು ಆಚಾರ-ವಿಚಾರ ಹಾಗೂ ಸಂಸ್ಕøತಿ ಇರುವುದು ಒಂದು ರೀತಿ ಅದ್ಭುತ ಎಂದರೆ ತಪ್ಪಾಗಲಾರದು. ಆದ್ದರಿಂದ ಎಷ್ಟೇ ಆಧುನಿಕತೆ, ವೈಜ್ಞಾನಿಕತೆ ಬೆಳೆದರೂ ಸಹ ಹಿಂದಿನ ಸಂಸ್ಕøತಿ, ಕಲೆಗಳು ಕಣ್ಮರೆಯಾಗಬಾರದು ಎಂದು ಅವರು ನುಡಿದರು.
ಯಾವುದೇ ಮಾತೃ ಭಾಷೆ ಕಡೆಗಣಿಸಿದರೆ ಸಂಸ್ಕøತಿ, ಸಂಪ್ರದಾಯಗಳು ಕ್ಷೀಣಿಸುತ್ತವೆ. ರಾಷ್ಟ್ರದಲ್ಲಿ 174 ಭಾಷೆಗಳು ಈಗಾಗಲೇ ಅಪಾಯದಲ್ಲಿದ್ದು, 101 ಭಾಷೆಗಳು ತೀರ ಅಪಾಯದಲ್ಲಿವೆ. 71 ಭಾಷೆಗಳು ನಶಿಸಿಹೋಗಿವೆ ಎಂದು ತಿಳಿಸಿದರು.
ಕೊರಗ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸಿವೆ. ಭಾಷೆಗಳು ಭಾವನಾತ್ಮಕ ಹಾಗೂ ಸಮಾಜದ ಭಾವನೆಯನ್ನು ಒಂದು ಮಾಡುತ್ತವೆ ಎಂದು ಡಿ.ವಿ.ಸದಾನಂದ ಗೌಡ ಅವರು ನುಡಿದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ನಾಡಿನಲ್ಲಿ ಕೊಡಗು ಜಿಲ್ಲೆ ತನ್ನದೇ ಆದ ವೈಶಿಷ್ಯತೆ ಹೊಂದಿದೆ ಎಂದು ಅವರು ತಿಳಿಸಿದರು.
‘ಕೊಡಗು ಜಿಲ್ಲೆಯಲ್ಲಿ ಕೊಡವ ಮತ್ತು ಅರೆಭಾಷೆ, ಸೇರಿದಂತೆ ಹಲವು ಸಣ್ಣ ಭಾಷಿಕರು ಇರುವುದು ಒಂದು ರೀತಿ ವೈಶಿಷ್ಟ್ಯವೇ ಸರಿ. ಅರೆಭಾಷಿಗ ಜನಾಂಗದಲ್ಲಿರುವ ಸಂಸ್ಕøತಿ, ಸಂಪ್ರದಾಯ, ಆಚಾರ-ವಿಚಾರಗಳು ಉಳಿಯಬೇಕು. ಸಂಸ್ಕøತಿ, ಕಲೆಗಳು, ಪರಂಪರೆ ಉಳಿದಲ್ಲಿ ಕೊಡಗು ಜಿಲ್ಲೆ ಉಳಿಯಲು ಸಾಧ್ಯ. ಕೊಡಗಿನ ಸಂಸ್ಕøತಿ, ಆಚಾರ-ವಿಚಾರಗಳು ಉಳಿಸುವಲ್ಲಿ ಅರೆಭಾಷಿಕರ ಶ್ರಮವಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.’
ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಅಕಾಡೆಮಿ ಒಂದು ಹೆಮ್ಮರವಾಗಿದೆ. ಅರೆಭಾಷೆ ಅಕಾಡೆಮಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಬೆಂಗಳೂರು ಶಿಕ್ಷಣ ತಜ್ಞರು ಮತ್ತು ಚಿಂತಕರಾದ ಪ್ರೊ.ಕೆ.ಇ.ರಾಧಾಕೃಷ್ಣ ಅವರು ಮಾತನಾಡಿ ನನ್ನ ಮನೆಯ ಭಾಷೆ ತುಳು ಆಗಿದ್ದು, ಕಲಿತದ್ದು ಅರೆಭಾಷೆಯಾಗಿದೆ. ಉಪ ಭಾಷೆ ಹಾಗೂ ಉಪ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕು ಎಂದರು.
ಅಕಾಡೆಮಿ ಚಟುವಟಿಕೆಗಳು ವಿಶಾಲವಾಗಿರಬೇಕು. ಎಲ್ಲರೂ ಒಂದಾಗಿ ನಡೆಯಬೇಕು. ಅಮರ ಸುಳ್ಯದ ಕುರಿತು ಸ್ಮಾರಕ ನಿರ್ಮಾಣವಾಗಬೇಕು ಎಂದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಹಿರಿಯರಿಗೆ ಸನ್ಮಾನಿಸಿದಲ್ಲಿ ಯುವ ಜನರಿಗೆ ಸ್ಫೂರ್ತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜನರು ಎಲ್ಲರೂ ಪಕ್ಷಾತೀತವಾಗಿ ಒಂದಾಗಬೇಕು. ಎಲ್ಲರಿಗೂ ಸ್ಫೂರ್ತಿಯಾಗಬೇಕು. ನಾಡಿನಲ್ಲಿ ಹಿಂದಿ ಭಾಷೆ ಹೇರಿಕೆ ಮಾಡುತ್ತಿದ್ದು, ಮಾತೃ ಭಾಷೆಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಬಡವರ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದರು.
ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಅಕಾಡೆಮಿ ಚಟುವಟಿಕೆಗೆ ಇನ್ನಷ್ಟು ಅಗತ್ಯ ಸಹಕಾರ ನೀಡುವಂತಾಗಬೇಕು ಎಂದರು.
ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರನ್ನು ಗುರುತಿಸುತ್ತಿರುವುದು ಶ್ಲಾಘನೀಯವಾಗಿದೆ. ಅರೆಭಾಷೆ ಅಕಾಡೆಮಿ ಸ್ಥಾಪನೆ ಉದ್ದೇಶ ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ಥಕವಾಗಿದೆ ಎಂದು ಕೆ.ಜಿ.ಬೋಪಯ್ಯ ಅವರು ಅಭಿಪ್ರಾಯಪಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ ಸಣ್ಣ ಸಣ್ಣ ಭಾಷೆಗಳನ್ನು ಸಹ ಉಳಿಸಿ, ಬೆಳೆಸಬೇಕು, ಭಾಷೆ ಉಳಿದಾಗ ಸಂಸ್ಕøತಿ ಉಳಿಯಲು ಸಾಧ್ಯ ಎಂದು ತಿಳಿಸಿದರು.
ಅಲ್ಟ್ರಾ ಬಯೋಕೆಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ತೇನನ ರಾಜೇಶ್ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯವನ್ನು, ಆಚಾರ-ವಿಚಾರಗಳು, ಸಂಪ್ರದಾಯಗಳ ಬಗ್ಗೆ ಎಲ್ಲೆಡೆ ಮಾಹಿತಿ ನೀಡುವಂತಾಗಬೇಕು ಎಂದು ಕರೆ ನೀಡಿದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ಅಕಾಡೆಮಿ ಅಧ್ಯಕ್ಷನಾದ ನಂತರ ಮೊದಲ ಸಭೆಯಲ್ಲಿ 12 ಸಂಶೋಧನಾ ಹೊತ್ತಿಗೆ ತರಲು ನಿರ್ಧರಿಸಲಾಯಿತು ಎಂದು ತಿಳಿಸಿದರು.
‘ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 8 ಸಂಶೋಧನಾ ಪ್ರಬಂಧಗಳು, 8 ಅರೆಭಾಷೆ ಕೃತಿಗಳನ್ನು ಲೋಕಾರ್ಪಣೆ ಮಾಡಿರುವುದು ವಿಶೇಷವಾಗಿದೆ. ಹಾಗೆಯೇ ಅರೆಭಾಷೆ ಕೃತಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗಿದೆ. ಹಾಗೆಯೇ ಅರೆಭಾಷೆ ಮಾತನಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇತರ ಫಲಾನುಭವಿಗಳಿಗೆ ಸಾಂಸ್ಕøತಿಕ ಮತ್ತು ವಾದ್ಯ ಪರಿಕರಗಳನ್ನು ವಿತರಿಸಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.’
ಶಿಕ್ಷಣ ಮತ್ತು ವೈದ್ಯಕೀಯ ಸೇವೆಗೆ 2022ನೇ ಗೌರವ ಪ್ರಶಸ್ತಿ ಪಡೆದ ಡಾ.ಕೆ.ವಿ.ಚಿದಾನಂದ ಅವರು ಮಾತನಾಡಿ ಅರೆಭಾಷಿಕ ಹೆಣ್ಣು ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಒಂದು ಲಕ್ಷ ವರೆಗೆ ಶಿಷ್ಯ ವೇತನ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
2022 ನೇ ಗೌರವ ಪ್ರಶಸ್ತಿ ಪಡೆದ ಡಾ.ಕಾವೇರಿಮನೆ ಬೋಜಪ್ಪ (ಸಂಶೋಧನೆ ಮತ್ತು ಅರೆಭಾಷೆ ಸಾಹಿತ್ಯ ಕ್ಷೇತ್ರ), ಡಾ.ಕೆ.ವಿ.ಚಿದಾನಂದ (ಶಿಕ್ಷಣ ಮತ್ತು ವೈದ್ಯಕೀಯ ಸೇವೆಗೆ), ತುಂತಜೆ ವೆಂಕಟೇಶ್ (ಗಣೇಶ್)(ಅರೆಭಾಷೆ ಮತ್ತು ಸಂಸ್ಕøತಿ ಸೇವೆ) ಇವರನ್ನು ಆತ್ಮೀಯವಾಗಿ ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.
2023ನೇ ಗೌರವ ಪ್ರಶಸ್ತಿ ಪಡೆದ ಕುಯಿಂತೋಡು ದಾಮೋದರ(ಅರೆಭಾಷೆ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆ), ಎ.ಕೆ.ಹಿಮಕರ(ಅರೆಭಾಷೆ ಅಧ್ಯಯನ ಮತ್ತು ಸಂಶೋಧನೆ) ಮತ್ತು ಕೂಡಕಂಡಿ ಕಾವೇರಮ್ಮ ಸೋಮಣ್ಣ(ಅರೆಭಾಷೆ ಸಾಧಕಿ ಮತ್ತು ಕಲಾ ಪೋಷಕರು) ಇವರನ್ನು ಆತ್ಮೀಯವಾಗಿ ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.
ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಪರಿಚಯವನ್ನು ಚಂದ್ರಾವತಿ ಬಡ್ಡಡ್ಕ ನಿರ್ವಹಿಸಿದರು. ಗೌರವ ಪ್ರಶಸ್ತಿ ಪುರಸ್ಕøತರ ಪರಿಚಯವನ್ನು ಅಕಾಡೆಮಿ ಸದಸ್ಯರಾದ ಲತಾ ಪ್ರಸಾದ್ ಕುದ್ಪಾಜೆ, ಡಾ.ಎನ್.ಎ.ಜ್ಞಾನೇಶ್, ಮೋಹನ ಪೊನ್ನಚನ, ತೇಜಕುಮಾರ್ ಕುಡೆಕಲ್ಲು, ಲೋಕೇಶ್ ಊರುಬೈಲು, ಸಂದೀಪ್ ಪುಳಕಂಡ ನಿರ್ವಹಿಸಿದರು.
ವಾದ್ಯ ಪರಿಕರಗಳ ವಿತರಣೆ ಪಟ್ಟಿಯನ್ನು ಅಕಾಡೆಮಿ ಸದಸ್ಯರಾದ ಗೋಪಾಲ್ ಪೆರಾಜೆ ನಿರ್ವಹಿಸಿದರು. ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ, ವಿನೋದ್ ಮೂಡಗದ್ದೆ, ಪಿ.ಎಸ್.ಕಾರ್ಯಪ್ಪ, ಕುದುಪಜೆ ಕೆ.ಪ್ರಕಾಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಇತರರು ಇದ್ದರು.
ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೆರಾಲು ಸ್ವಾಗತಿಸಿದರು. ಆರತಿ ಪುರುಷೋತ್ತಮ ಪ್ರಾರ್ಥಿಸಿದರು. ಬೇಬಿ ವಿದ್ಯಾ ಹಾಗೂ ಕೆ.ಟಿ.ವಿಶ್ವನಾಥ ನಿರೂಪಿಸಿದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು.
ಸುಳ್ಯದ ಆರತಿ ಪುರುಷೋತ್ತಮ ಮತ್ತು ಬಳಗದವರಿಂದ ಅರೆಭಾಷೆ ಹಾಡುಗಳ ರಸಮಂಜರಿ ಕಾರ್ಯಕ್ರಮ ನಡೆಯಿತು.