ಇಂದು ಬಡ್ಡಡ್ಕದಲ್ಲಿ ಅರೆಭಾಷೆ ಗ್ರಾಮೋತ್ಸವಕ್ಕೆ ಚಾಲನೆ ನೀಡಲಾಗಿದೆ.ಅರೆಭಾಷೆ ಗ್ರಾಮೋತ್ಸವ ಮೂಲಕ ಅರೆಭಾಷಿಕರ ಸಂಸ್ಕ್ರತಿ, ಸಂಪ್ರದಾಯ,ಆಚರಣೆಗಳ ಉಳಿವಿಗೆ ಪ್ರಯತ್ನಿಸಲಾಗುವುದೆಂದು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಆಲೆಟ್ಟಿಯ ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಅ. 26 ರಂದು ನಡೆದ ಅರೆಭಾಷೆ ಗ್ರಾಮೋತ್ಸವ 2025ರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಕೋಲ್ಟಾರು ರವರು ದೀಪ ಪ್ರಜ್ವಲಿಸಿ,ಕಳಸಕ್ಕೆ ಭತ್ತ ತುಂಬುವ ಮೂಲಕ ಸಂಪ್ರದಾಯದ ಪ್ರಕಾರ ಗ್ರಾಮೋತ್ಸವಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ
ಅವರು ಅರೆಭಾಷೆ ಇಂದು ಪ್ರಾದೇಶಿಕತೆ ಮತ್ತು ಎಲ್ಲಾ ಜಾತಿ ಧರ್ಮವನ್ನು ಮೀರಿ ಬೆಳೆಯುತ್ತಿದ್ದು ಇದು ಅರೆಭಾಷೆಯ ವಿಶೇಷತೆ.ತರವಾಡು ಮನೆಗಳು ನಮ್ಮ ಸಂಸ್ಕೃತಿಗಳ ಪ್ರತೀಕ. ತರವಾಡು ಮನೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ.ನಮ್ಮ ತಾಲೂಕಿನಲ್ಲಿ ಅರೆಭಾಷಿಕರು ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಆಲೆಟ್ಟಿ ಗ್ರಾಮದಲ್ಲಿ ಎಲ್ಲಾ ಸಮುದಾಯದವರು ವಾಸವಾಗಿದ್ದು ವಿವಿಧತೆಯಲ್ಲಿ ಏಕತೆ ಹೊಂದಿದೆ. ಎಲ್ಲಾ ವರ್ಗದವರು ಅರೆಭಾಷೆಯನ್ನು ಪ್ರೀತಿಸುವವರಾಗಿದ್ದಾರೆ. ಇಲ್ಲಿ ಸಾಕಷ್ಟು ತರವಾಡು ಮನೆಗಳಿದ್ದು ಸಂಸ್ಕೃತಿ ಆಚಾರವನ್ನು ಉಳಿಸಿಕೊಂಡು ಬಂದಿದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಮೇಲೆ ಪ್ರೀತಿ ಅಭಿಮಾನ ಬೆಳೆಯಬೇಕಾದರೆ ತರವಾಡು ಮನೆಗಳ ಮೂಲಕ ಸಂಸ್ಕಾರ ಶಿಬಿರದ ಆಯೋಜನೆ ಮಾಡುವಂತಾಗಬೇಕು ಎಂದು ತಿಳಿಸಿದರು.ಆಲೆಟ್ಟಿ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಟಾರು, ಗ್ರಾಮ ಪಂಚಾಯತ್ ಸದಸ್ಯೆ ಭಾಗೀರಥಿ ಪತ್ತುಕುಂಜ, ಕಲ್ಲಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಆಲುಗುಂಜ,ಆಲೆಟ್ಟಿ ಗೌಡ ಘಟಕದ ಅಧ್ಯಕ್ಷ ಸತೀಶ್ ಕೊಯಿಂಗಾಜೆ, ಅಕಾಡೆಮಿ ಸದಸ್ಯರಾದ ಎನ್. ಎ ಜ್ಞಾನೇಶ್, ತೇಜಕುಮಾರ್ ಬಡ್ಡಡ್ಕ, ಕಾರ್ಯಪ್ಪ ಪಿ. ಎಸ್, ಗೋಪಾಲ ಪೆರಾಜೆ, ಚಂದ್ರಾವತಿ ಬಡ್ಡಡ್ಕ, ಸಮಿತಿ ಕಾರ್ಯದರ್ಶಿ ಅಶೋಕ್ ಪೀಚೆ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಪಿ. ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘಟನಾ ಸಂಚಾಲಕ ಜಯಪ್ರಕಾಶ್ ಪೆರುಮುಂಡ ಪ್ರಾರ್ಥಿಸಿದರು. ಅಧ್ಯಕ್ಷ ಬಾಲಚಂದ್ರ ಪಿ. ಕೆ ಸ್ವಾಗತಿಸಿದರು. ತೇಜಕುಮಾರ್ ಬಡ್ಡಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ಅಶೋಕ್ ಪೀಚೆ ವಂದಿಸಿದರು. ಅಕಾಡೆಮಿ ಸದಸ್ಯೆ ಲತಾ ಪ್ರಸಾದ್ ಕುದ್ಘಾಜೆ ಕಾರ್ಯಕ್ರಮ ನಿರೂಪಿಸಿದರು.
ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯ ಹೇಮನಾಥ ಬಡ್ಡಡ್ಕ ಪ್ರಾಚೀನ ವಸ್ತುಗಳ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಶೇಷವಾಗಿ ಗ್ರಾಮೀಣ ಆಟೋಟ ಸ್ಪರ್ಧೆಗಳಾದ ತೆಂಗಿನ ಕಾಯಿಗೆ ಕಲ್ಲು ಹೊಡಿಯುವುದು. ಕುಟ್ಟಿ ದೊಣ್ಣೆ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಅದೃಷ್ಟದ ಆಟ, ಬಲೂನ್ ಊದಿ ಒಡೆಯುವುದು, ಪಲ್ಲಿ ಕಟ್ಟಿ ಆಟ, ಕುಂಟಾ ಬಿಲ್ಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಅರೆಭಾಷೆ ಗ್ರಾಮೋತ್ಸವ ಮೂಲಕ ಅರೆಭಾಷಿಕರ ಸಂಸ್ಕ್ರತಿ, ಸಂಪ್ರದಾಯ ಉಳಿವಿಗೆ ಪ್ರಯತ್ನ : ಸದಾನಂದ ಮಾವಜಿ

















