ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವ ರಥೋತ್ಸವ ಪೂರ್ವಭಾವಿ ಸಭೆ ಬುಧವಾರ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದರ್ಶನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಚಂಪಾಷಷ್ಠಿ ಮಹೋತ್ಸವದ ಬಗ್ಗೆ ಚರ್ಚೆ ನಡೆಯಿತು. ಜಿಲ್ಲಾಧಿಕಾರಿ ದರ್ಶನ್ ಮಾತನಾಡಿ, ಬ್ರಹ್ಮರಥೋತ್ಸವ ಎಳೆಯುವ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ರಥ ಎಳೆಯಲು ಪಾಸ್ ವಿತರಿಸಲು ಮಾನದಂಡ ಮಾಡಿಕೊಂಡು ಅದರ ಪ್ರಕಾರವೇ ಪಾಸ್ ವಿತರಿಸಿ, ಎಷ್ಟು ಮಂದಿಗೆ ಪಾಸ್ ವಿತರಿಸುತ್ತೀರಿ ಎಂದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು, ಅದರಂತೆ ಪೂರ್ವ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.
ಎಸ್ಪಿ ಡಾ.ಅರುಣ್ ಮಾತನಾಡಿ, ಚಂಪಾಷಷ್ಠಿ ಮಹೋತ್ಸವ ಹಿನ್ನಲೆಯಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಬೇಕು. ಈಗಾಗಲೇ ಸಿಸಿ ಕೆಮರಾಗಳು ಇದ್ದರೂ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಹೆಚ್ಚುವರಿ ಸಿಸಿ ಕೆಮರಾ ಅಳವಡಿಸಬೇಕು. ಇದು ಶಾಶ್ವತವಾಗಿ ಇರುವಂತೆ ಕ್ರಮಕೈಗೊಳ್ಳಬೇಕು. ಸಿಸಿ ಕೆಮರಾ ಅಳವಡಿಕೆಯಿಂದ ಭದ್ರತೆ, ಸುರಕ್ಷತೆಗೆ ಪೂರಕವಾಗಲಿದೆ ಎಂದರು. ಪಾರ್ಕಿಂಗ್ ಸಂಬಂಧಿಸಿದಂತೆ ಜಾಗಗಳನ್ನು ಗುರುತಿಸಿ ಅಲ್ಲೇ ವಾಹನ ನಿಲುಗಡೆಗೆ ಸಿಬ್ಬಂದಿ ನಿಯೋಜಿಸಬೇಕು, ಸ್ವಯಂ ಸೇವಕರ ಸಹಕಾರ ಮಾಡಬೇಕು ಎಂದು ತಿಳಿಸಿದರು
ಬೀದಿ ಉರುಳು ಸೇವೆ ಸಂದರ್ಭದಲ್ಲಿ ಭಕ್ತರಿಗೆ ಪೂರಕ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಎಡೆಸ್ನಾನ ಸೇವೆ ಬಗ್ಗೆಯೂ ಮಾಹಿತಿ ನೀಡಲಾಯಿತು. ಈ ವೇಳೆ ಎಸ್ಪಿ ಡಾ.ಅರುಣ್ ಅವರು ಹೈಕೋರ್ಟ್ ನಿರ್ದೇಶನದಂತೆ ಸೇವೆ ನಡೆಸಬೇಕು ಎಂದು ತಿಳಿಸಿದರು.
ಸ್ವಚ್ಚತೆ, ಸ್ವಯಂ ಸೇವಕರು, ಭೋಜನ ಪ್ರಸಾದ ವಿತರಣೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಪ್ರಮುಖರು ಸಲಹೆ ಸೂಚನೆಗಳನ್ನು ನೀಡಿದರು.
ಶಾಸಕಿ ಭಾಗೀರಥಿ ಮುರುಳ್ಯ, ಎಸ್ಪಿ ಡಾ.ಅರುಣ್, ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ , ಡಿವೈಎಸ್ಪಿ ಅರುಣ್ ನಾಗೇಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ, ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ವ್ಯಪಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಶ್ರೀಮತಿ ಲೀಲಾ ಮನಮೋಹನ್, ಅನಿಲ್ ಕುಮಾರ್, ಸೌಮ್ಯ ಭರತ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಚುತ ಆಲ್ಕಬೆ, ಪವನ್ ಎಂ.ಡಿ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿ, ಹರೀಶ್ ಇಂಜಾಡಿ ವಂದಿಸಿದರು.
ಸಭೆಯ ಅಧ್ಯಕ್ಷತೆ ಯಾರಾಗಬೇಕು ಎಂದು ಸಭೆ ಅಂತ್ಯಕ್ಕೆ ಚರ್ಚೆ ನಡೆಯಿತು. ಸಭೆ ನೋಟೀಸ್ ನಲ್ಲಿ ಸುಳ್ಯ ವಿಧಾನ ಸಭಾ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿರುವುದಾಗಿ ನೊಟೀಸು ನೀಡಲಾಗಿತ್ತು. ಆದರೆ ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಅವರ ನೇತೃತ್ವದಲ್ಲಿ ಸಭೆಯಲ್ಲಿ ನಡೆಯಲಿರುವುದಾಗಿ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸಭೆಗೆ ತಿಳಿಸಿದರು. ಸಭೆಯ ಅಂತ್ಯದಲ್ಲಿ ಶಾಸಕರು ಮಾತನಾಡುವ ಸಮಯ ಬಂದಾಗ ಎಲ್ಲರೂ ತಮ್ಮ ಹಕ್ಕು ಮಾತನಾಡುತ್ತೀರಿ. ಈ ಸಭೆಗೆಯಲ್ಲಿ ಸಭೆ ಅಧ್ಯಕ್ಷತೆ ಯಾರಿಗೆ ಎಂದು ಪ್ರಶ್ನಿಸಿದರು. ಈ ವೇಳೆ ಇದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಪೂರ್ವಭಾವಿ ಸಭೆಗೆ ಪ್ರೋಟೋಕಾಲ್ ಇಲ್ಲ. ಇಲ್ಲಿನ ಆಡಳಿತ ನಿರ್ಧಾರವೇ ಅಂತಿಮ ಎಂದರು.



































