ರೈತರ ಖಾತೆಗಳಿಗೆ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಕಡಿಮೆ ಮೊತ್ತ ಜಮೆಯಾಗಿರುವುದನ್ನು ಖಂಡಿಸಿ ‘ಮಲೆನಾಡು ಹಿತರಕ್ಷಣಾ ವೇದಿಕೆ’ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗ ಡಿ.24ರಂದು ಪ್ರತಿಭಟನಾ ಸಭೆ ನಡೆಯಿತು.
ಮನವಿ ಸ್ವೀಕರಿಸಲು ತಹಶೀಲ್ದಾರರ ಬದಲಿಗೆ ಉಪತಹಶೀಲ್ದಾರರು ಆಗಮಿಸಿದ್ದಾಗ ನೊಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ
ಅಧಿಕಾರಿಗಳ ಗೈರುಹಾಜರಿ ಮತ್ತು ನಿರ್ಲಕ್ಷ್ಯದ ಧೋರಣೆಯನ್ನು ಖಂಡಿಸಿ ನೂರಾರು ರೈತರು ಕಚೇರಿ ಮುಂಭಾಗದಲ್ಲೇ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಬೆಳೆವಿಮೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎಂಬ ಒತ್ತಾಯದೊಂದಿಗೆ ಮಲೆನಾಡು ಹಿತರಕ್ಷಣಾ ವೇದಿಕೆ ಶಾಂತಿಯುತ ಪ್ರತಿಭಟನಾ ಸಭೆ ಆಯೋಜಿಸಿತ್ತು. ಸಭೆಯ ಬಳಿಕ ಮನವಿ ಸಲ್ಲಿಸಲು ರೈತರು ಮುಂದಾದಾಗ, ತಹಶೀಲ್ದಾರರು ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ಉಪ ತಹಶೀಲ್ದಾರರು, “ತಹಶೀಲ್ದಾರರು ಮಂಗಳೂರಿಗೆ ತೆರಳಿದ್ದಾರೆ” ಎಂಬ ಉತ್ತರ ನೀಡಿದರು. ಇದರಿಂದ ಆಕ್ರೋಶಗೊಂಡ ರೈತರು, “ನಮ್ಮ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ, ಇದು ರೈತರಿಗೆ ಮಾಡುತ್ತಿರುವ ಅಸಹಕಾರ ಎಂದು ಕಿಡಿಕಾರಿದರು.
ತಹಶೀಲ್ದಾರ್ ಹಾಗೂ ಪುತ್ತೂರು ಸಹಾಯಕ ಆಯುಕ್ತರು ಸ್ಥಳಕ್ಕೆ ಖುದ್ದು ಆಗಮಿಸಿ ಮನವಿ ಸ್ವೀಕರಿಸಬೇಕು ಮತ್ತು ಸಮಸ್ಯೆಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿ ರೈತರು ಘೋಷಣೆಗಳನ್ನು ಕೂಗುತ್ತಾ ಧರಣಿ ಆರಂಭಿಸಿದರು. ರೈತರಿಗೆ ಸರಿಯಾದ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರಾದ ಕಿಶೋರ್ ಶಿರಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಎಂ. ವೆಂಕಪ್ಪ ಗೌಡ, ವಿಕ್ರಂ ಎ.ವಿ. ಅಡ್ಪಂಗಾಯ, ಸಂತೋಷ್ ಕುತ್ತಮೊಟ್ಟೆ, ಕೆ.ಆರ್ ಗಂಗಾಧರ,ಅವಿನಾಶ್ ಡಿ.ಕೆ., ನಾರಾಯಣ ಎಸ್.ಎಂ. ಶಾಂತಿನಗರ, ವಿನಯ ಕುಮಾರ್ ಕಂದಡ್ಕ, ಶಶಿಕಲಾ ನೀರಬಿದರೆ, ಪುಷ್ಪ ಮೇದಪ್ಪ, ಗುಣವತಿ ಕೊಲ್ಲಂತಡ್ಕ, ,ಕೇಶವ ಅಡ್ತಲೆ ಕುಸುಮಾಧರ ಎ.ಟಿ, ಡಾ.ಲಕ್ಷ್ಮೀಶ ಶಿವಾನಂದ ಕುಕ್ಕುಂಬಳ, ವೆಂಕಟ್ರಮಣ ಪೆತ್ತಾಜೆ,ಗೌರಿಶಂಕರ ತೊಡಿಕಾನ,ಜಗನ್ನಾಥ,ದಯಾನಂದಕುರುಂಜಿ,ಎ.ಜಿ ಎ.ಜಿ ಕರುಣಾಕರ ಉಮಾಶಂಕರ,ಎ.ಜಿ ಸುಧಾಕರ ಸೇರಿದಂತೆ ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಸುಳ್ಯ : ಬೆಳೆ ಮಿಮೆ ಪರಿಹಾರ ಮೊತ್ತ ರೈತರ ಖಾತೆಗಳಿಗೆ ಕಡಿಮೆ ಮೊತ್ತ ಜಮೆ,ರೈತರಿಂದ ತಾಲೂಕು ಕಚೇರಿ ಎದರು ದರಣಿ

















