ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾಧಾಕೃಷ್ಣ ಬೊಳ್ಳೂರುರವರಿಗೆ ಅಮರ ಪಡ್ನೂರು ಗ್ರಾಮದ ಅಭಿಮಾನಿಗಳಿಂದ ಹುಟ್ಟೂರ ಅಭಿನಂದನೆ ಕಾರ್ಯಕ್ರಮ ಇಂದು ಕುಕ್ಕುಜಡ್ಕ ಅಮರ ಸಭಾಭವನದಲ್ಲಿ ಇಂದು ನಡೆಯಿತು.
ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ಅಧ್ಯಕ್ಷ ಶ್ರೀನಾಥ್ ನೆಲ್ಲಿಕುಂಜರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಕ್ಕುಜಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಮೂಕಮಲೆ ಉದ್ಘಾಟಿಸಿ ಮಾತನಾಡಿ ಅಮರ ಪಡ್ನೂರು ಮುಡ್ನೂರು ಗ್ರಾಮದ ಪ್ರತಿಯೊಬ್ಬರೂ ಸಹ ರಾಧಾಕೃಷ್ಣ ಬೊಳ್ಳೂರುರವರಿಂದ ಸಹಾಯ ಹಸ್ತ ಪಡೆದವರು. ಯಾವುದೇ ಪಕ್ಷ ಬೇಧವಿಲ್ಲದೆ ಕೆಲಸ ನಿರ್ವಹಿಸುವ ಚತುರ ಸಂಘಟಕ, ಅಭಿವೃದ್ಧಿಯ ಹರಿಕಾರ ರಾಧಾಕೃಷ್ಣ ಬೊಳ್ಳೂರುರವರಿಗೆ ಅಭಿನಂದನೆ ಸಲ್ಲುತ್ತಿರುವುದು ಸಂತಸದ ವಿಷಯ ಎಂದು ಶುಭ ಹಾರೈಸಿದರು.
ಅಭಿನಂದನಾ ಮಾತು ಆಡಿದ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಶಶಿಧರ್ ಎಂ ಜೆ ಮೋಂಟಡ್ಕ ಮಾತನಾಡಿ ಬೊಳ್ಳೂರುರವರು ಧೀನರ, ನೊಂದವರ ಕಷ್ಟಕ್ಕೆ ಸ್ಪಂದಿಸುವ ಗುಣ ಇರುವ ನಡವಳಿಕೆಯಿಂದ ಜನರ ಪ್ರೀತಿ ಗಳಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಛಲ ಹೋರಾಟಗಳಿಂದ ಸುಧೀರ್ಘ ರಾಜಕಾರಣ ಜೀವನ ನಡೆಸಿಕೊಂಡು ಬಂದಿದ್ದಾರೆ. ತನ್ನ ಚಾನಾಕ್ಷತನ ಬುದ್ದಿವಂತಿಕೆಯಿಂದ ಅಹೋರಾತ್ರಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿರುವುದರಿಂದ ಜನ ಮೆಚ್ಚುಗೆ ಪಡೆದಿದ್ದಾರೆ. ಸಹಾಯ ಎಂದರೆ ಏನು ಎಂಬುದು ಬೊಳ್ಳೂರುರವರನ್ನು ನೋಡಿ ಕಲಿಯಬೇಕು. ಅಭಿಮಾನಿಗಳ, ಹುಟ್ಟೂರ ಅಭಿಮಾನಿಗಳ ಹಾರೈಕೆಯಿಂದ ಇವರ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೇಕಲ್ಲು ಮಾತನಾಡಿ ಬ್ಲಾಕ್ ಅಧ್ಯಕ್ಷರಾಗಿ ಎರಡೂ ಗ್ರಾಮದ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡು ಈ ಅಭಿನಂದನೆ ಕಾರ್ಯಕ್ರಮ ಆಯೋಜಿಸಿದ್ದಾರೆ. ತಮ್ಮ ಮೂಲಕ ಗ್ರಾಮದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ಬರುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ವೆಂಕಟ್ರಮಣ ಗೌಡ ಇಟ್ಟಿಗುಂಡಿ, ಅಣ್ಣಾಜಿ ಗೌಡ ಮಾತನಾಡಿ ಸಮರ್ಥ ಅನುಭವಿಯಾಗಿರುವ, ಅಸ್ತಿತ್ವ ಉಳಿಸಿಕೊಂಡಿರುವ ನಾಯಕರು ಮಾತ್ರ ಜನಪರ ಕಾರ್ಯ ಮಾಡಲು ಸಾಧ್ಯ. ಅಂತಹ ಅಪರೂಪದ ವ್ಯಕ್ತಿಯನ್ನು ನಮ್ಮ ಊರಿನ ಜನತೆ ಮರೆಯುವಂತಿಲ್ಲ ಎಂದು ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಈ ಊರಿನ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಶ್ರಮಿಸಿದ್ದೇನೆ. ಈ ಊರಿನ ಸಹೃದಯಿ ಹಿತೈಷಿಗಳ ಹಾರೈಕೆ ನನ್ನ ಮೇಲಿದೆ. ಚೊಕ್ಕಾಡಿ ಮಣ್ಣಿನ ಗುಣದಿಂದ ನನಗೆ ನಾಯಕತ್ವ ಗುಣ ಬಂದಿದೆ. ಪಕ್ಷ ಸಂಘಟನೆ ಜೊತೆಗೆ ಜನರ ಪ್ರೀತಿ ಗೆಲ್ಲುವ ಕೆಲಸ ಮಾಡುತ್ತೇನೆ. ರಾಜಕಾರಣದೊಂದಿಗೆ ಊರಿನ ಚಿಂತನೆ ಮಾಡುವ ಕೆಲಸವಾಗಬೇಕಿದೆ. ಈ ಊರಿನ ಜನತೆಯ ಪ್ರೀತಿಗೆ ಅಭಾರಿಯಾಗಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಮರ ಪಡ್ನೂರು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ರಾಮಯ್ಯ ರೈ, ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯೆ ಸರೋಜ ಯತೀಶ್ ಹಿರಿಯಡ್ಕ, ಅರೋಗ್ಯ ರಕ್ಷಾ ಸಮಿತಿ ಸದಸ್ಯ ಚಂದ್ರನ್ ಕೂಟೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಮರ ಮುಡ್ನೂರು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಹೂವಪ್ಪ ಗೌಡ ಅರ್ನೋಜಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಯತೀಶ್ ಹಿರಿಯಡ್ಕ ವಂದಿಸಿದರು. ವಿನಯ ಸಂಕೇಶ ಕಾರ್ಯಕ್ರಮ ನಿರೂಪಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಅಸಂಘಟಿತ ಕಾರ್ಮಿಕರ ಘಟಕ ಅಧ್ಯಕ್ಷ ಮಂಜುನಾಥ್ ಕಂದಡ್ಕ, ಪ್ರಮುಖ ರಾದ ಶಿವಕುಮಾರ್ ಕಂದಡ್ಕ, ರಕ್ಷಿತ್ ದೊಡ್ಡಡ್ಕ, ಪವನ್ ಮುಂಡ್ರಾಜೆ, ಸತ್ಯಪ್ರಸಾದ್ ಪುಳಿಮಾರಡ್ಕ, ಹರೀಶ್ ಕುಕ್ಕುಜಡ್ಕ, ಹರ್ಷವರ್ಧನ್ ಬೊಳ್ಳೂರು, ರವಿ ಪೂಜಾರಿ ಸೇರಿದಂತೆ ಅಮರ ಮುಡ್ನೂರು – ಪಡ್ನೂರು ಗ್ರಾಮದ ನೂರಾರು ಅಭಿಮಾನಿಗಳು ಹಿತೈಷಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಕುಕ್ಕುಜಡ್ಕ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರಿಗೆ ಹುಟ್ಟೂರ ಅಭಿನಂದನೆ

















