ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ತನಗೆ ಪರಿಶಿಷ್ಟ ಜಾತಿಯ (SC) ಮೀಸಲಾತಿ ಮತ್ತು ರಕ್ಷಣೆಗಳು ಸಿಗಬೇಕು ಎಂದು ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಾತಿ ಎನ್ನುವುದು ಧರ್ಮದೊಂದಿಗೆ ಬೆಸೆದುಕೊಂಡಿದ್ದು, ಮತಾಂತರವಾದ ತಕ್ಷಣ ಹಳೆಯ ಜಾತಿ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆಂಧ್ರಪ್ರದೇಶದ ಚಿಂತಾಡ ಆನಂದ್ ಪಾಲ್ ಎಂಬುವವರು ದಶಕಗಳಿಂದ ಕ್ರೈಸ್ತ ಧರ್ಮದ ಪಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ತಮ್ಮ ಬಳಿ ಇದ್ದ ‘ಹಿಂದೂ–ಮಾದಿಗ’ ಎಂಬ ಜಾತಿ ಪ್ರಮಾಣಪತ್ರವನ್ನು ಬಳಸಿಕೊಂಡು, ತಮ್ಮ ಮೇಲೆ ನಡೆದ ಹಲ್ಲೆಯ ವಿರುದ್ಧ ಎಸ್ ಸಿ/ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಎದುರಾಳಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
1950ರ ಸಾಂವಿಧಾನಿಕ ಆದೇಶದ ಪ್ರಕಾರ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಅನುಸರಿಸುವ ವ್ಯಕ್ತಿಯನ್ನು ‘ಪರಿಶಿಷ್ಟ ಜಾತಿ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ವೈಯಕ್ತಿಕ ಮತ್ತು ಆಧ್ಯಾತ್ಮಿಕ ಕಾರಣಗಳಿಗಾಗಿ ಬೇರೆ ಧರ್ಮವನ್ನು ಅಪ್ಪಿಕೊಂಡಾಗ, ಕಾನೂನಿನ ದೃಷ್ಟಿಯಲ್ಲಿ ಅವರ ಹಳೆಯ ಜಾತಿ ಗುರುತು ‘ಗ್ರಹಣ’ ಹಿಡಿದಂತಾಗುತ್ತದೆ (Eclipsed). ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕೇವಲ ಜಾತಿ ಪ್ರಮಾಣಪತ್ರ ಹೊಂದಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ವ್ಯಕ್ತಿಯು ಪ್ರಾಯೋಗಿಕವಾಗಿ ಯಾವ ಧರ್ಮವನ್ನು ಪಾಲಿಸುತ್ತಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಪರಿಶಿಷ್ಟ ಪಂಗಡಗಳಿಗೆ (ST) ಧರ್ಮವು ಅಡ್ಡಿಯಾಗುವುದಿಲ್ಲ. ಆದರೆ ಎಸ್‌ಸಿ (SC) ಪಟ್ಟಿಗೆ ಧರ್ಮವೇ ಪ್ರಮುಖ ಮಾನದಂಡವಾಗಿದೆ ಎಂದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರ ಪೀಠ ಹೇಳಿದೆ.
ಮತಾಂತರಗೊಂಡ ನಂತರವೂ ಎಸ್‌ಸಿ ಸೌಲಭ್ಯಗಳನ್ನು ಪಡೆಯುವುದು ಸಾಂವಿಧಾನಿಕ ಆಶಯಕ್ಕೆ ವಿರುದ್ಧವಾಗಿದೆ. ಕ್ರೈಸ್ತ ಧರ್ಮವನ್ನು ಬಹಿರಂಗವಾಗಿ ಪಾಲಿಸುವ ಮತ್ತು ಪ್ರಚಾರ ಮಾಡುವ ವ್ಯಕ್ತಿ ತಾನು ಪರಿಶಿಷ್ಟ ಜಾತಿಯವನು ಎಂದು ಹೇಳಿಕೊಳ್ಳುವುದು ಕಾನೂನುಬದ್ಧವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಕ್ಕೆ ಮತಾಂತರಗೊಂಡವರು ಪರಿಶಿಷ್ಟ ಜಾತಿ ಸವಲತ್ತು ಪಡೆಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು














































