ಸಂಪಾಜೆ:ತ್ಯಾಗ, ಬಲಿದಾನ ಹಾಗೂ ಸಮರ್ಪಣಾ ಮನೋಭಾವದ ಮಹತ್ವವನ್ನು ಸಾರುವ ಪವಿತ್ರ ‘ಈದುಲ್ ಅಝ್‌ಹಾ’ (ಬಕ್ರೀದ್) ಹಬ್ಬವನ್ನು ಪೇರಡ್ಕ ಗೂನಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು. ಮಸೀದಿಯ ಗೌರವಾನ್ವಿತ ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಅವರ ನೇತೃತ್ವದಲ್ಲಿ ವಿಶೇಷ ಈದ್ ನಮಾಝ್ ನೆರವೇರಿತು. ಬಳಿಕ ಈದ್ ಸಂದೇಶ ಭಾಷಣ ನೀಡಿದ ಅವರು, ಪ್ರವಾದಿ ಇಬ್ರಾಹೀಂ (ಅ) ಅವರ ನಿಷ್ಕಲ್ಮಶ ತ್ಯಾಗ ಮತ್ತು ದೇವರ ಮೇಲಿನ ದೃಢವಾದ ನಂಬಿಕೆಯನ್ನು ಸ್ಮರಿಸುತ್ತಾ, ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ, ಸಹನೆ ಮತ್ತು ಪರಸ್ಪರ ಸೌಹಾರ್ದತೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ನೈಜ ಮಾನವೀಯತೆಯನ್ನು ಮೆರೆಯಬೇಕು ಎಂದು ಕರೆ ನೀಡಿದರು. ಈ ಭಕ್ತಿಪೂರ್ವಕ ಸಮಾರಂಭದಲ್ಲಿ ಮಸೀದಿ ಜಮಾಅತ್ ಕಮಿಟಿಯ ಅಧ್ಯಕ್ಷರೂ, ಕರ್ನಾಟಕ ಸರ್ಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಸಮಿತಿಯ ಅಧ್ಯಕ್ಷರೂ ಆದ ಜನಾಬ್ ಟಿ.ಎಂ. ಶಾಹೀದ್ ತೆಕ್ಕಿಲ್ ಅವರು ಉಪಸ್ಥಿತರಿದ್ದು, ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರಿದರು. ನಮಾಝ್ ಮುಕ್ತಾಯಗೊಂಡ ಬಳಿಕ ನೆರೆದಿದ್ದ ನೂರಾರು ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಸ್ತಲಾಘವ ಮಾಡುವ ಮೂಲಕ ‘ಈದ್ ಮುಬಾರಕ್’ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ, ಖಬರಸ್ಥಾನ ಮತ್ತು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಹಿರಿಯರಿಗೆ ಮತ್ತು ನಾಡಿನ ಒಳಿತಿಗಾಗಿ, ಸಮೃದ್ಧಿಗಾಗಿ ಹಾಗೂ ವಿಶ್ವ ಶಾಂತಿಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ಹಬ್ಬದ ಸಾರ್ಥಕತೆಯನ್ನು ಮೆರೆದರು.ಅಲ್ಬಿರ್ ಶಾಲೆಯ ಅಧ್ಯಕ್ಷರಾದ ಪಿ ಕೆ ಉಮ್ಮರ್ ಗೂನಡ್ಕ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ಆರ್ ಡಿ ಎ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಮುನೀರ್ ದಾರಿಮಿ ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿದರು.
ಪೇರಡ್ಕ ಗೂನಡ್ಕಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಝ್‌ಹಾ ಆಚರಣೆ
























































