ಜಮ್ಮುವಿನಲ್ಲಿ ದೇಶದ ಭದ್ರತಾ ಸೇವೆಯಲ್ಲಿದ್ದ ಕಡಬ ತಾಲೂಕಿನ ಯೋಧನೊಬ್ಬ ರಜೆಯಲ್ಲಿ ಊರಿಗೆ ಬಂದಿದ್ದ ಸಂದರ್ಭದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆ ನಿವಾಸಿಯಾದ, ಸಿಐಎಸ್ಎಫ್ ಯೋಧ ಸೀತಾರಾಮ ಗೌಡರು ಮಂಗಳೂರಿನ ಕೆಪಿಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದ ಯೋಧರಾಗಿದ್ದಾರೆ.
ಮಂಗಳೂರು ನಗರದ ಟ್ರಾಫಿಕ್ ಈಸ್ಟ್ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CISF ನಲ್ಲಿ ಸೇವೆ ಸಲ್ಲಿಸುತ್ತಿರುವ ಸೀತಾರಾಮ ಗೌಡರವರು ಪ್ರಸ್ತುತ ಜಮ್ಮುವಿನ ಸೆಂಟ್ರಲ್ ಜೈಲ್‌ನಲ್ಲಿ ಕರ್ತವ್ಯ ನಿರತರಾಗಿದ್ದರು. ಇತ್ತೀಚೆಗಷ್ಟೇ ಅಂದರೆ ಜುಲೈ 3ರಂದು ಅವರು ರಜೆಯ ನಿಮಿತ್ತ ಊರಿಗೆ ಬಂದಿದ್ದರು. ಜುಲೈ 7ರಂದು ಕೆಲವು ಅಧಿಕೃತ ಎಸ್.ಐ.ಆರ್ (S.I.R) ದಾಖಲಾತಿಗಳನ್ನು ನೀಡುವ ಸಲುವಾಗಿ ಅವರು ಕಡಬ ತಾಲೂಕಿನ ಕೊಯಿಲದ ಊರು ಮನೆಗೆ ಹೋಗಿದ್ದರು.
ಜುಲೈ 8ರ ಬುಧವಾರದಂದು ಸೀತಾರಾಮ ಗೌಡರವರು ತಮ್ಮ ಮೋಟಾರು ಸೈಕಲ್ (ಬೈಕ್) ಚಲಾಯಿಸಿಕೊಂಡು ಕೊಯಿಲದ ಮನೆಯಿಂದ ಹೊರಟು ಮಂಗಳೂರಿಗೆ ಬಂದಿದ್ದರು. ಸಂಜೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66 ರ ಕೆಪಿಟಿ (KPT) ಬಳಿಯಲ್ಲಿ ಸಂಭವಿಸಿದ ಅಪಘಾತಕ್ಕೆ ಬಲಿಯಾದರು.
















