ಮೈಸೂರು: ಪೊಲೀಸರು ಮಾಡಿದ ತಪ್ಪಿನಿಂದಾಗಿ ತಪ್ಪೆ ಮಾಡದ ವ್ಯಕ್ತಿಯೊಬ್ಬರು ಪತ್ನಿಯ ಹತ್ಯೆ ಮಾಡಿದ ಆರೋಪಕೊಳಗಾಗಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ.
ಮೃತಪಟ್ಟಿದ್ದಾಳೆಂದು ಅಂದುಕೊಂಡಿದ್ದ ಮಹಿಳೆ ಮಡಿಕೇರಿಯಲ್ಲಿ ತನ್ನ ಪ್ರಿಯಕರನೊಂದಿಗೆ ಪ್ರತ್ಯಕ್ಷವಾಗಿದ್ದು, ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನಹಳ್ಳಿ ಗ್ರಾಮದ ಮಲ್ಲಿಗೆ ನಾಪತ್ತೆಯಾಗಿರುವ ಬಗ್ಗೆ ಪತಿ ಸುರೇಶ್ ಕುಶಾಲನಗರ ಠಾಣೆಗೆ 2020ರ ನವೆಂಬರ್‌ನಲ್ಲಿ ದೂರು ನೀಡಿದ್ದರು. ಇದೇ ವೇಳೆ ಮೈಸೂರು ಜಿಲ್ಲೆಯ ಬೆಟ್ಟದಪುರ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು.
ಬೆಟ್ಟದಪುರ ಪೊಲೀಸರು ಮಹಿಳೆ ಶವದ ವಾರಸುದಾರರ ಪತ್ತೆಗೆ ಮುಂದಾಗಿ, ಅದು ಮಲ್ಲಿಗೆಯ ಶವ ಎಂದು ನಿರ್ಧರಿಸಿ ಕೊಲೆ ಕೇಸಿನಲ್ಲಿ ಪತಿ ಸುರೇಶ್ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಲಯವು ಸುರೇಶ್‌ಗೆ ಶಿಕ್ಷೆ ವಿಧಿಸಿತ್ತು.
ಹತ್ಯೆಗೀಡಾಗಿದ್ದಾಳೆ ಎನ್ನಲಾಗಿದ್ದ ಮಲ್ಲಿಗೆ ಎ. 1ರಂದು ಮಡಿಕೇರಿಯ ಹೊಟೇಲ್ ಒಂದರಲ್ಲಿ ಪ್ರಿಯಕರನೊಂದಿಗೆ ಇರುವುದು ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಸುರೇಶ್, ಕೊಡಗು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಕುಶಾಲನಗರ ಠಾಣೆಗೆ ಕಳುಹಿಸಿದ್ದರು. ಸುರೇಶ್ ಪರ ವಕೀಲರು ಬೆಳವಣಿಗೆಗಳನ್ನು ನ್ಯಾಯಾಲಯದ ಗಮಕ್ಕೆ ತಂದಿದ್ದರು.
ಈ ಸಂಬಂಧ ಮೈಸೂರಿನ 5ನೇ ಜೆಎಂಎಸ್ಸಿ ನ್ಯಾಯಾಲಯ ಆದೇಶ ಮಾಡಿ ಎಸ್‌ಪಿ ಮತ್ತು ಕುಶಾಲನಗರ ಪೊಲೀಸರು ಹಾಗೂ ಅವರ ವಶದಲ್ಲಿದ್ದ ಮಲ್ಲಿಗೆಯೊಂದಿಗೆ ಕೋರ್ಟ್‌ಗೆ ಹಾಜರಾಗುವಂತೆ ತಿಳಿಸಿತ್ತು. ಗುರುವಾರ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದು, ಎ. 17ರ ಒಳಗೆ ಪ್ರಕರಣದ ಸಂಪೂರ್ಣ ಮಾಹಿತಿ ನೀಡುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ.
ಬೆಟ್ಟದಪುರದಲ್ಲಿ ಸಿಕ್ಕಿದ್ದ ಮಹಿಳೆಯ ಶವದ ಡಿಎನ್‌ಎಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ತನಿಖಾಧಿಕಾರಿಗಳು ವರದಿ ಬರುವ ಮುನ್ನವೇ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪತ್ನಿಯನ್ನು ಕೊಂದ ಆರೋಪದಡಿ ಪತ್ನಿಗೆ ಎರಡು ವರ್ಷ ಶಿಕ್ಷೆ,ಐದು ವರ್ಷದ ಬಳಿಕ ಲೌವರ್ ಜತೆ ಪತ್ನಿ ಪ್ರತ್ಯಕ್ಷ !
