ಪುತ್ತೂರು ಬೊಳುವಾರು ಎಂಬಲ್ಲಿ ಸೋಮವಾರ ರಾತ್ರಿ ಸಾರ್ವಜನಿಕ ಸ್ಥಳದಲ್ಲಿ ತಲವಾರು ಹಿಡಿದುಕೊಂಡು ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವರದಿಯಾಗಿದೆ. ಸಕಲೇಶಪುರ ಮೂಲದ ರಾಜೇಶ್ ಅಲಿಯಾಸ್ ರಾಜು (45) ತಲ್ವಾರು ಹಿಡಿದುಕೊಂಡಿದ್ದ ವ್ಯಕ್ತಿ ಎಂದು ತಿಳಿದು ಬಂದಿದೆ.
ರಾಜೇಶ್ ಶೆಟ್ಟಿ ತನ್ನಲ್ಲಿದ್ದ ತಲವಾರನ್ನು ಬೆನ್ನ ಹಿಂದೆ ಇಟ್ಟುಕೊಂಡು ಹೋಗುತ್ತಿದ್ದಾಗ ಕೈಯಲ್ಲಿದ್ದ ಬೀಡಿ ಬಿದ್ದ ಕಾರಣ ಎತ್ತಲು ಬಗ್ಗಿದಾಗ ತಲವಾರು ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.ತಲವಾರು ಕಂಡ ಸಾರ್ವಜನಿಕರು ಭಯಭೀತರಾಗಿ, ತಕ್ಷಣ ಆತನನ್ನು ಸುತ್ತುವರಿದು ಹಿಡಿದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವ್ಯಕ್ತಿಯೋರ್ವ ತನ್ನ ಕೈಯಲ್ಲಿ ತಲವಾರನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ತೋರಿಸುತ್ತಾ ಬೆದರಿಕೆ ಒಡ್ಡುತ್ತಿರುವುದಾಗಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ಬಂದಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ, ರಾಜೇಶ್ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. “ತಲವಾರನ್ನು ಹರಿತಗೊಳಿಸುವ ಉದ್ದೇಶದಿಂದ ಅಕ್ಕಸಾಲಿಗರ ಬಳಿ ತೆಗೆದುಕೊಂಡು ಹೋಗುತ್ತಿದ್ದೆ” ಎಂದು ಆತ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ಶಸ್ತ್ರಾಸ್ತ್ರವನ್ನು ಹೊಂದಿದ್ದ ಕಾರಣ, ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ತಲವಾರು ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

















