ಮಕ್ಕಳನ್ನು ಮಕ್ಕಳಂತೆ ನೋಡಿ; ಪ್ರತಿಷ್ಠೆಯ ಸರಕುಗಳಂತಲ್ಲ !

ಕೆಲ ದಿನಗಳ ಹಿಂದೆ ಬಾಲಕನೊಬ್ಬ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡದ್ದು ಸುದ್ದಿಯಾಯಿತು. 14 ವರ್ಷಗಳ ಕಾಲ ಚೆನ್ನಾಗಿದ್ದೆ, ಮುಂದೆ ಸ್ವರ್ಗದಲ್ಲಿ ಚೆನ್ನಾಗಿರುತ್ತೇನೆ ಎಂಬ ಆತನ ಡೆತ್‌ನೋಟ್ ಮತ್ತು ಆ ಮುಖ ನೋಡಿದಾಗ ಎಂತವರಿಗೂ ಒಂದು ಕ್ಷಣ ನೋವಾಗದೇ ಇರದು. ಇಷ್ಟು ಸಣ್ಣ ವಯಸ್ಸಿನಲ್ಲಿ ಇಂತಹ ದುಡುಕಿನ ನಿರ್ಧಾರಕ್ಕೆ ಕಾರಣವಾದರೂ ಏನಾಗಿರಬಹುದು ಎಂಬುದು ತಿಳಿಯದು. ಮಕ್ಕಳ ಮನಸ್ಸೇ ದುರ್ಬಲವೇ? ಅಥವಾ ತಡೆದುಕೊಳ್ಳಲಾಗದ ಒತ್ತಡಗಳೇ?
ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಕೆಳ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಕೊಲೆ ಮಾಡಿರುವ ವಿಚಾರ ಇಂದು ಬೆಳಗ್ಗೆಯಷ್ಟೇ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು, ಅಸ್ಪಷ್ಟವಾಗಿ ಕೇಳಿಸಿಕೊಂಡೆ. ಮಕ್ಕಳ ನಡುವೆ ಗಲಾಟೆ, ಕೊಲೆ, ಆತ್ಮಹತ್ಯೆ ಮಾಡಿಕೊಳ್ಳುವುದು..ಇದು ಇಂದು ನಿನ್ನೆಯದಲ್ಲ. ಆಗೊಮ್ಮೆ, ಈಗೊಮ್ಮೆ ಸುದ್ದಿಯಾಗುತ್ತಲೇ ಇರುತ್ತದೆ. ಬಾಲ್ಯವನ್ನು ಅನುಭವಿಸಬೇಕಾದ, ಯಾವುದೇ ಕಲ್ಮಷಗಳೇ ತುಂಬಿರದ ವಯಸ್ಸಿನಲ್ಲಿ ಮಕ್ಕಳು ಇಂತಹ ನಿರ್ಧಾರಗಳನ್ನು ಯಾಕೆ ತೆಗೆದುಕೊಳ್ಳುತ್ತಿದ್ದಾರೆ? ಜೀವನವನ್ನು ಎದುರಿಸಲಾಗದಷ್ಟು ದುರ್ಬಲತೆ ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಇರುತ್ತದೆಯೇ?
ಅತಿಯಾದ ಒತ್ತಡ
ಆತ್ಮಹತ್ಯೆಗೈದ ಬಾಲಕನ ಸಾವಿಗೆ ಕಾರಣ ಅಸ್ಪಷ್ಟ. ಆದರೆ ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುತ್ತಲೇ ಇರುವ ಇಂತಹ ಘಟನೆಗಳ ಹಿಂದೆ ಮಕ್ಕಳ ಮೇಲೆ ಹೇರಲ್ಪಡುವ ಅತಿಯಾದ ಒತ್ತಡದ ಕಾರಣಗಳು ಇವೆ ಎಂಬುದು ತಿಳಿದ ವಿಚಾರವೇ.
ಹೇಳಿಕೇಳಿ ಇದು ಸ್ಪರ್ಧಾತ್ಮಕ ಯುಗ. ಮಕ್ಕಳಿಗಿಂತ ಹೆಚ್ಚಾಗಿ ಪೋಷಕರು ಈ ಸ್ಪರ್ಧಾತ್ಮಕ ಯುಗದ ಕೇಂದ್ರ ಬಿಂದುಗಳು. ಪ್ರತಿಯೊಂದಕ್ಕೂ ಪ್ರತಿಷ್ಠೆ! ಅವರಿಗಿಂತ ನಾವು ಒಂದು ಹೆಜ್ಜೆ ಮುಂದಿರಬೇಕೆಂಬ ಹಪಾಹಪಿ. ಅದಕ್ಕಾಗಿ ಹುಟ್ಟಿನಿಂದಲೇ ಪ್ರತಿಷ್ಠೆಯ ಸರಕನ್ನಾಗಿ ಮಕ್ಕಳನ್ನು ತಯಾರು ಮಾಡುವ ಹೆತ್ತವರು. ಇನ್ನೂ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಾಲ್ಯದ ಸವಿಕ್ಷಣಗಳನ್ನು ಅನುಭವಿಸಬೇಕಾದ ಪುಟಾಣಿಗಳ ಬೆನ್ನು ಮೇಲೆ ಮಣಭಾರದ ಬ್ಯಾಗ್‌laà ಏರಿಸಿ ಕೇವಲ ಪ್ಲೇ ಹೋಂಗಷ್ಟೇ ಅಲ್ಲ, ಆ ಕ್ಲಾಸ್‌, ಈ ಕ್ಲಾಸ್‌ ಅಂತ ಇದ್ದಬದ್ದ ಕ್ಲಾಸ್‌ಗಳಿಗೆಲ್ಲಾ ಸೇರಿಸಿ ಹುಟ್ಟಿದ ಎರಡ್ಮೂರು ವರ್ಷಕ್ಕೇನೇ ಅದರ ತಲೆಯಲ್ಲಿ ಎಲ್ಲಾ ಒತ್ತಡಗಳನ್ನು ಒಮ್ಮೆಗೇ ತುಂಬಿಸಿಬಿಡುವ ಹೆತ್ತವರಿಗೆ ಇದು ಮುಂದೆ ತಮಗೇ ಅಪಾಯ ಎಂಬ ಸಣ್ಣ ಯೋಚನೆಯೂ ಬರುವುದಿಲ್ಲ. ಬಂದರೂ ಒಣ ಪ್ರತಿಷ್ಠೆಯ ಜಿದ್ದಿನಡಿ ಇಂತಹ ಯೋಚನೆಗಳು ಅರ್ಥ ಕಳೆದುಕೊಳ್ಳುತ್ತವೆ.
ಪ್ರತಿಷ್ಠೆಗಾಗಿ ಪೈಪೋಟಿ
ಇನ್ನೂ ಸರಿಯಾಗಿ ಮಾತು ಕಲಿಯದ, ಸರಿಯಾಗಿ ನಡೆಯಲು ಬಾರದ ಸಣ್ಣ ಸಣ್ಣ ಮಕ್ಕಳನ್ನು ಪ್ರತಿಷ್ಠಿತ ಶಾಲೆಯ ಪ್ರಿಕೆಜಿ, ಎಲ್‌ಕೆಜಿ, ಯುಕೆಜಿಗಳಿಗೆ ಸೇರಿಸಿ ಕಿಲೋ ಮೀಟರ್‌ಗಟ್ಟಲೆ ಸ್ಕೂಲ್‌ ವ್ಯಾನ್‌ನಲ್ಲಿ ಕಳುಹಿಸುತ್ತಿರುವ ಕೆಲವು ಪೋಷಕರ ಬಗ್ಗೆ ಅಯ್ಯೋ ಎನಿಸುತ್ತದೆ. ಲಕ್ಷ ಲಕ್ಷ ಫೀಸು ಕಟ್ಟಿ ಪ್ರತಿಷ್ಠಿತ ಶಾಲೆಗಳಲ್ಲಿ ಓದಿಸುವ ಅದೇ ಪೋಷಕರು ಶಾಲೆಯಿಂದ ಬಂದ ಕೂಡಲೇ ಟ್ಯೂಶನ್‌ ಕ್ಲಾಸ್‌ಗೆ ಕಳುಹಿಸುವುದು ಬೇರೆ. ಶಾಲೆ, ಟ್ಯೂಶನ್‌, ಮನೆಯಲ್ಲಿನ ಅತಿಯಾದ ಒತ್ತಡದಿಂದಾಗಿ ಮಕ್ಕಳ ಮನಸ್ಸಿನ ಮೇಲೆ ಹಲವು ಪರಿಣಾಮಗಳು ಬೀರುತ್ತಿರುವುದು ಸುಳ್ಳಲ್ಲ. ಪೋಷಕರ ಪ್ರತಿಷ್ಠೆ ಮಕ್ಕಳ ಜೀವನವನ್ನು ಬಲಿಪಶುಗಳನ್ನಾಗಿ ಮಾಡುತ್ತಿರುವುದು ಸತ್ಯ.
ಬೇರೆ ಮಕ್ಕಳ ಹೋಲಿಕೆ-ಹೀಯಾಳಿಕೆ
ಕೆಟ್ಟದೋ, ಒಳ್ಳೆಯದೋ ಮಕ್ಕಳೆದುರು ಮನೆಯಲ್ಲಿ ಏನೇ ಮಾತನಾಡಿದರೂ ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸದಾ ಧನಾತ್ಮಕವಾದುದನ್ನೇ ಮಾತನಾಡಿದರೆ ಮಕ್ಕಳ ಮಾನಸಿಕ ಆರೋಗ್ಯ ಸದೃಢವಾಗಿಯೇ ಇರುತ್ತದೆ. ಆದರೆ ಪ್ರತಿದಿನ ಅವರೊಂದಿಗೆ ಬೇರೆ ಮಕ್ಕಳನ್ನು ಹೋಲಿಕೆ ಮಾಡುವುದು, ಅವರನ್ನು ಹೊಗಳಿ, ಸ್ವಂತ ಮಕ್ಕಳನ್ನು ತೆಗಳುವುದು, ಇತರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಹೇಳಿಕೊಂಡು ಮಕ್ಕಳನ್ನು ಹೀಯಾಳಿಸುವುದು ಸಹಜವಾಗಿಯೇ ಮಕ್ಕಳನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಇಂತಹ ಹೀಯಾಳಿಕೆಗಳೂ ಕೆಲವೊಮ್ಮೆ ಸಿಟ್ಟು, ಆತಂಕ, ನಿರಾಸೆಯೆಡೆಗೆ ದೂಡಿ ಕೊನೆಗೆ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳಿಗೂ ಮಕ್ಕಳನ್ನು ಎಳೆದು ಬಿಡಬಹುದು.
ರಿಯಾಲಿಟಿ ಶೋಗಳ ಹುಚ್ಚು
ಇತ್ತೀಚೆಗೆ ಕೆಲವು ಮನರಂಜನಾವಾಹಿನಿಗಳು ತಮ್ಮ ಟಿಆರ್‌ಪಿ ಏರಿಕೆ ಮಾಡಿಕೊಳ್ಳುವುದಕ್ಕೋಸ್ಕರ ವೈವಿಧ್ಯ ರಿಯಾಲಿಟಿ ಶೋಗಳನ್ನು ಏರ್ಪಡಿಸುತ್ತಿವೆ. ಇಂತಹ ರಿಯಾಲಿಟಿ ಶೋಗಳ ಮೂಲಕ ಅವಕಾಶ ಪಡೆದುಕೊಂಡು ಜೀವನದಲ್ಲಿ ಯಶಸ್ವಿಯಾದ ಹಲವರಿದ್ದಾರೆ. ಮಕ್ಕಳಿಗಾಗಿಯೂ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು, ಕೆಲವರು ಇದಕ್ಕಾಗಿ ಮಕ್ಕಳನ್ನು ತಯಾರು ಮಾಡುವ ರೀತಿ ನೋಡಿದರೆ ಹೆತ್ತವರ ಬಗ್ಗೆಯೇ ಅಸಹ್ಯ ಹುಟ್ಟಿಸುವಂತಿರುತ್ತದೆ. ಮಗು ಇಂತಹ ರಿಯಾಲಿಟಿ ಶೋಗಳಿಗೆ ಆಯ್ಕೆಯಾಗಲೇ ಬೇಕೆಂಬ ಕೆಲವು ಹೆತ್ತವರ ಮಾನಸಿಕತೆ ಮಕ್ಕಳ ಬಾಲ್ಯವನ್ನು ಹಾಳು ಮಾಡುತ್ತಿದೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಉದ್ದೇಶದಿಂದಲೇ ಮಕ್ಕಳಿಗೆ ಅವರಿಷ್ಟದ ವಿರುದ್ದವಾಗಿ ವಿವಿಧ ತರಬೇತಿಗಳನ್ನು ನೀಡಿ ತಯಾರು ಮಾಡುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆಯಲ್ಲ.
ಮಕ್ಕಳೆಂದರೆ ದೇವರ ಸಮಾನ. ಯಾವುದೇ ಕಲ್ಮಷಗಳಿಲ್ಲದ ಮನಸ್ಸುಗಳವು. ಬಾಲ್ಯ ಅವರಿಗೊಂದು ಅಪೂರ್ವ ಅವಕಾಶ. ನಮ್ಮ ಬಾಲ್ಯದಲ್ಲಿ ನಾವೆಷ್ಟು ಸ್ವತಂತ್ರವಾಗಿದ್ದೆವೋ ಅದೇ ಸ್ವತಂತ್ರ ಬಾಲ್ಯ ಈಗಿನ ಮಕ್ಕಳಿಗೂ ಅಗತ್ಯ. ಒಮ್ಮೆ ಕಳೆದು ಹೋದ ಬಾಲ್ಯ ಜೀವನದಲ್ಲಿ ಮತ್ತೆಂದೂ ಸಿಗದು. ಅದನ್ನು ಅನುಭವಿಸುವುದಕ್ಕೆ ಹೆತ್ತವರು ಬಿಡಬೇಕೇ ಹೊರತು ಪ್ರತಿಷ್ಠೆಗಳ ಹಿಂದೆ ಬಿದ್ದು, ಮಕ್ಕಳಿಂದ ಅದನ್ನು ಕಸಿದುಕೊಳ್ಳುವ ಹಕ್ಕು ಹೆತ್ತವರಿಗಿಲ್ಲ. ಈಗಾಗಲೇ ತಂದೆ ತಾಯಿ ಇಬ್ಬರ ದುಡಿಮೆಯ ಅನಿವಾರ್ಯದಿಂದಾಗಿ ಅದೆಷ್ಟೋ ಮಕ್ಕಳಿಗೆ ಹೆತ್ತವರ ಪ್ರೀತಿಯೇ ಸರಿಯಾಗಿ ಸಿಗುತ್ತಿಲ್ಲ. ಇನ್ನು ಬಾಲ್ಯದ ಬಾಲಲೀಲೆಗಳನ್ನೂ ಅವರಿಗೆ ಸಿಗದಂತೆ ಮಾಡಿದರೆ ಅವರ ಬೆಳವಣಿಗೆಯ ಮೇಲೆಯೂ ಅದು ಪರಿಣಾಮ ಬೀರಬಹುದು. ಮಕ್ಕಳನ್ನು ಮಕ್ಕಳಾಗಿ ನೋಡಬೇಕೇ ಹೊರತು ನಮ್ಮ ಪ್ರತಿಷ್ಠೆಯ ಸರಕುಗಳನ್ನಾಗಲ್ಲ. ಗೆದ್ದಾಗ ಬೆನ್ನು ತಟ್ಟಿದಂತೆ ಸೋತಾಗ ಸಾಂತ್ವನಿಸಿಸಬೇಕು. ಅದು ಬಿಟ್ಟು ಸೋಲೆಂದರೆ ಜೀವನವೇ ಮುರಿದು ಬಿತ್ತು ಎಂಬಂತೆ ನಡೆದುಕೊಂಡರೆ ಆ ಮಗು ತನ್ನ ಜೀವನದ ಅರ್ಥವನ್ನೇ ಕಳೆದುಕೊಳ್ಳಲು ಶುರು ಮಾಡುತ್ತದೆ. ಇದರಿಂದ ನಷ್ಟವಾಗುವುದು ಪೋಷಕರಿಗೇ ಹೊರತು ಯಾರೊಂದಿಗೆ ಪ್ರತಿಷ್ಠೆಗಾಗಿ ಸೆಣಸಾಟ ನಡೆಸಿದಿರೋ ಅವರಿಗಲ್ಲ. ಮಕ್ಕಳ ಮಾನಸಿಕ ಸ್ಥಿತಿಯನ್ನು ಅರಿತುಕೊಳ್ಳುವುದು ಮತ್ತು ಅದರಂತೆ ನಡೆದುಕೊಳ್ಳುವುದು ಆಧುನಿಕ ಪೋಷಕರು ಕಲಿತುಕೊಳ್ಳಬೇಕಾದ ಪಾಠ.
✍️ಧನ್ಯಾ ಬಾಳೆಕಜೆ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top