ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಇಡೀ ವಿಶ್ವಕ್ಕೆ ನಾಯಕರಾಗಿ ಶಕ್ತಿಯಾಗಿ ಮೆರೆದು ಶ್ರೇಷ್ಢ ಸಮಾಜ ಸುಧಾರಕರಾದರು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ರಾಷ್ಟಿಯ ಹಬ್ಬಗಳ ಆಚರಣಾ ಸಮಿತಿ ಸುಳ್ಯ ತಾಲೂಕು ಆಶ್ರಯದಲ್ಲಿ ಸುಳ್ಯದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ಮೆಟ್ಟಿನಿಂತು ಸುಧಾರಣೆ ತರಲು ಪ್ರಯತ್ನಿಸಿದರು.
ಅವರ ಆದರ್ಶಗಳನ್ನು ಹಲವು ನಾಯಕರು ಮೈಗೂಡಿಸಿಕೊಂಡಿದ್ದು, ನಮಗೂ ಪ್ರೇರಣೆಯಾಗಿದೆ ಎಂದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫಾ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಸುಧಾರಕರು, ದೇಶದಲ್ಲಿ ಸಾಮಾಜಿಕ ಕ್ರಾಂತಿಯನ್ನು ಹುಟ್ಟು ಹಾಕಿದವರು. ಆ ಮೂಲಕ ವಿಶ್ವದಲ್ಲೇ ಗುರುತಿಸುವಂತೆ ಆಗಿದ್ದಾರೆ ಎಂದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಸುಳ್ಯ ತಹಶೀಲ್ದಾರ್ ಮಂಜುಳಾ ಎಂ., ಸುಳ್ಯ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಅಲೆಕ್ಕಾಡಿ ಸೇರಿದಂತೆ ನಗರ ಪಂಚಾಯತ್ ಸದಸ್ಯರು, ಸಾರ್ವಜನಿಕರು, ಸಮುದಾಯದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಚಂದ್ರಶೇಖರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಕರ‍್ಯದರ್ಶಿ ನವೀನ್ ಕುಮಾರ್ ಎನ್. ವಂದಿಸಿದರು
.



































