ಸಂಪಾಜೆ: ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್
ಮಟ್ಟದ ಒಕ್ಕೂಟದ ಸಂಜೀವಿನಿ ಕಚೇರಿಯಲ್ಲಿ ಆ.11ರಂದು ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ( ವಾಣಿಜ್ಯ ಮತ್ತು ಕೈಗಾರಿಕಾ ಸಚಿವಲಯ ಭಾರತ ಸರ್ಕಾರ) ಪ್ರಾದೇಶಿಕ ವಿಭಾಗ ಮಂಗಳೂರು ಇವರಿಂದ ಪರಿಶಿಷ್ಟ ಜಾತಿ ರೈತರಿಗೆ ಮೀನು ಸಾಕಾಣಿಕೆ ಹಾಗೂ ಮೀನಿನ ಮೌಲ್ಯವರ್ಧನೆ ಕುರಿತಾದ ತರಬೇತಿಯು ಒಕ್ಕೂಟದ ಅಧ್ಯಕ್ಷರಾದ ದೇವಕಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಸುಬ್ರಹ್ಮಣ್ಯನ್ ಸಹಾಯಕ ನಿರ್ದೇಶಕರು MPEDA ಮಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಅಡಿಕೆಗೆ ಹಳದಿ ರೋಗದ ಸಮಸ್ಯೆ ಇರುವುದರಿಂದ ಕೃಷಿಕರು ಪರ್ಯಾಯ ಬೆಳೆಗಳು ಹಾಗೂ ಇತರ ಮೂಲಗಳಿಂದ ಆದಾಯ ಗಳಿಸುವ ಕಡೆಗೆ ಗಮನ ಕೊಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮೀನಿನ ಮೌಲ್ಯವರ್ಧನೆ ತರಬೇತಿ ಪಡೆದುಕೊಂಡು ಆ ಮುಖಾಂತರ ಆದಾಯ ಗಳಿಸಲು ಪ್ರಯತ್ನಿಸಬಹುದು. ಇಲ್ಲಿನ ಕೃಷಿಕರಿಗೆ ಸಹಾಯ ಆಗಲಿ ಮತ್ತು ನಾವು ನೀಡುವ ತರಬೇತಿಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಆದಾಯ ಗಳಿಸುತ್ತೇವೆ ಎಂಬ ಆಸಕ್ತಿಯಿಂದ ಭಾಗವಹಿಸುತ್ತಾ ಇದ್ದಾರೆ. ನಮ್ಮ ವ್ಯಾಪ್ತಿಗೆ ಒಳಪಟ್ಟಂತೆ ಸಹಾಯ ನೀಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಮಂಜುಳಾಶ್ರಿ ಶೆಣೈ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪುತ್ತೂರು ಇವರು ಮಾತನಾಡಿ ಮೀನಿನ ಸಾಕಾಣಿಕೆಯ ವಿಧಾನ, ವಿವಿಧ ರೀತಿಯ ಮೀನುಗಳು, ಅದರಿಂದ ಮಾಡಬಹುದಾದ ಮೌಲ್ಯವರ್ಧಿತ ಉತ್ಪನ್ನಗಳು, ಇಲಾಖೆಯಿಂದ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕೆ. ಸುಧಾ ಜೂನಿಯರ್ ಟೆಕ್ನಿಕಲ್ ಆಫೀಸರ್ MPEDA ಮಂಗಳೂರು ಪ್ರಾತ್ಯಕ್ಷಕತೆ ಮೂಲಕ ವಿವರಣೆ ನೀಡಿದರು. ವೇದಿಕೆಯಲ್ಲಿ ಸುಮತಿ ಶಕ್ತಿವೇಲು ಗ್ರಾಮ ಪಂಚಾಯತ್ ಅಧ್ಯಕ್ಷರು, ಹನೀಫ್ ಎಸ್.ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಹಮೀದ್ ಜಿ ಕೆ ಪಂಚಾಯತ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು, ಯಮುನಾ ಬಿ ಎಸ್ ಮಾಜಿ ಅಧ್ಯಕ್ಷರು, ಲಲನಾ ಕೆ ಆರ್ ಒಕ್ಕೂಟ ಕಾರ್ಯದರ್ಶಿ ಇವರುಗಳು ಮಾತನಾಡಿ ಸಂಜೀವಿನಿ ಕೃಷಿ ಸಖಿಯ ಜೊತೆಗೂಡಿ ಎಂ. ಬಿ. ಕೆ, LCRP ಗಳು ಒಕ್ಕೂಟದ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ, ಸೌಲಭ್ಯಗಳನ್ನು ಇಲಾಖೆಗಳಿಂದ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಮುಂದೆಯೂ ಸಂಜೀವಿನಿಯ ಸಿಬ್ಬಂದಿಗಳು ಹೀಗೆಯೇ ಕೆಲಸ ಮಾಡಿ, ಪಂಚಾಯತ್ ಕಡೆಯಿಂದ ಸದಾ ಸಹಕಾರ ನೀಡುತ್ತೇವೆ. ನಮ್ಮ ಗ್ರಾಮದ ಅಭಿವೃದ್ಧಿಗೆ ಉತ್ತಮ ರೀತಿಯಲ್ಲಿ ಸಹಕರಿಸಿ ಎಂದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಮೋಹನಾಂಗಿ ಬೆಳಕು ಸಂಜೀವಿನಿ ಸ್ವ ಸಹಾಯ ಸಂಘದ ಸದಸ್ಯೆ ಆರಂಭಿಸಿದರು. ಎಂ. ಬಿ. ಕೆ ಕಾಂತಿ ಬಿ ಎಸ್ ಸ್ವಾಗತಿಸಿ, ಕೃಷಿ ಮೋಹಿನಿ ವಿಶ್ವನಾಥ್ ( ನಿಶಾ) ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಕೃಷಿಕರು, ವೆಂಕಟಲಕ್ಷ್ಮ ಪಿ ಹೆಚ್ ಸಿ ಓ ಕಲ್ಲುಗುಂಡಿ, ಸೌಮ್ಯ ಎ ಬಿ ಆಶಾ ಕಾರ್ಯಕರ್ತೆ ಉಪಸ್ಥಿತರಿದ್ದರು. ಎಲ್ ಸಿ ಆರ್ ಪಿ ಸೌಮ್ಯಾ, ಎಲ್ ಸಿ ಆರ್ ಪಿ ಭಾರತಿ ಸಹಕರಿಸಿದರು.
ಸಂಪಾಜೆ : ಪರಿಶಿಷ್ಟ ಜಾತಿ ರೈತರಿಗೆ ಮೀನು ಸಾಕಾಣಿಕೆ ಹಾಗೂ ಮೀನಿನ ಮೌಲ್ಯವರ್ಧನೆ ತರಬೇತಿ ಉದ್ಘಾಟನೆ














































