ಏಷ್ಯಾ ಕಪ್ ಕ್ರಿಕೇಟ್ ನ ಬದ್ದ ಎದುರಾಳಿ ಪಾಕಿಸ್ಥಾನದ ವಿರುದ್ದ ಸೆಣಸಾಟದಲ್ಲಿ ಭಾರತ ತಂಡ ಭಾನುವಾರ ಪಾಕಿಸ್ಥಾನಕ್ಕೆ ಸೋಲು ಉಣ್ಣಿಸಿ ಭಾರತದ ತಂಡದ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ಥಾನ ತಂಡ ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ ನಲುಗಿತು. 9 ವಿಕೆಟಿಗೆ 127 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿತು. ಒಂದು ಹಂತದಲ್ಲಿ ನೂರರ ಗಡಿ ತಲುಪುವುದೂ ಅನುಮಾನವಿತ್ತು. ಗುರಿ ಬೆನ್ನಟ್ಟಿದ ಭಾರತ 15.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ 7 ವಿಕೆಟ್ ಗಳ ಅಮೋಘ ಜಯ ತನ್ನದಾಗಿಸಿಕೊಂಡಿತು. ಪಂದ್ಯದ ನಂತರ ಎರಡೂ ತಂಡಗಳ ನಡುವೆ ಯಾವುದೇ ಹಸ್ತಲಾಘವ ನಡೆಸಲಿಲ್ಲ, ಈ ಮೂಲಕ ಭಾರತ ಆಕ್ರೋಶ ಹೊರ ಹಾಕಿದೆ.
ಆರಂಭದಲ್ಲಿ ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ ಅವರ ಪೇಸ್ ದಾಳಿ, ಬಳಿಕ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರ ಸ್ಪಿನ್ ಎಸೆತಗಳನ್ನು ನಿಭಾಯಿಸಲು ಪಾಕಿಸ್ಥಾನ ಸಂಪೂರ್ಣ ವಿಫಲವಾಯಿತು. ವರುಣ್ ಚಕ್ರವರ್ತಿ ಕೂಡ ಕಡಿವಾಣ ಹಾಕಿದರು.
ಆರಂಭದ ದಾಂಡಿಗ ಸಾಹಿಬ್ಬಾದ ಫರ್ಹಾನ್ ಮತ್ತು ಕೊನೆಯಲ್ಲಿ ಶಾಹೀನ್ ಅಫ್ರಿದಿ ಅವರ ಹೋರಾಟದ ಫಲದಿಂದ ಪಾಕ್ ಸ್ಕೋರ್ ನೂರರ ಗಡಿ ದಾಟಿತು. 17ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಫರ್ಹಾನ್ ಸರ್ವಾಧಿಕ 40 ರನ್ ಹೊಡೆದರು (44 ಎಸೆತ, 1 ಬೌಂಡರಿ, 3 ಸಿಕ್ಸರ್). ಅಫ್ರಿದಿ 16 ಎಸೆತಗಳಿಂದ 33 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದು 4 ಸಿಕ್ಸರ್‌ಗಳನ್ನು ಒಳಗೊಂಡಿತ್ತು.
ಪಾಂಡ್ಯ ವೈಡ್ ಎಸೆತದ ಮೂಲಕ ಬೌಲಿಂಗ್ ಆಕ್ರಮಣ ಆರಂಭಿಸಿದರೂ ಮುಂದಿನ ಎಸೆತದಲ್ಲೇ ಸೈಮ್ ಅಯೂಬ್ ಅವರ
ವಿಕೆಟ್ ಹಾರಿಸಿ ಪಾಕಿಗೆ ಆರಂಭಿಕ ಆಘಾತವಿಕ್ಕಿದರು. ಅಯೂಬ್ ಸತತ 2 ಪಂದ್ಯದಲ್ಲೂ ಸೊನ್ನೆ ಸುತ್ತಿದಂತಾಯಿತು. ಮುಂದಿನ ಓವರ್‌ನಲ್ಲೇ ಬುಮ್ರಾ ವಿಕೆಟ್ ಬೇಟೆಯಾಡಿದರು. ಕೇವಲ 3 ರನ್ ಮಾಡಿದ ಮೊಹಮ್ಮದ್ ಹ್ಯಾರಿಸ್ ಪೆವಿಲಿಯನ್ ಸೇರಿಕೊಂಡರು.
ಮಧ್ಯಮ ಕ್ರಮಾಂಕದ ಆಟಗಾರರಲ್ಲಿ ಎರಡಂಕೆಯ ಸ್ಕೋರ್ ದಾಖಲಿಸಿದ್ದು ಫಖರ್ ಜಮಾನ್ ಮಾತ್ರ (17). ನಾಯಕ ಸಲ್ಮಾನ್ ಆಘಾ ಮೂರರ ಗಡಿ ದಾಟಲಿಲ್ಲ. ಇವರಿಬ್ಬರನ್ನು ಅಕ್ಷರ್ ಪಟೇಲ್ ಪೆವಿಲಿಯನ್ನಿಗೆ ರವಾನಿಸಿದರು. ಹಸನ್ ನವಾಜ್ (5), ಮೊಹಮ್ಮದ್ ನವಾಜ್ (0) ಅವರಿಗೂ ಭಾರತದ ಸ್ಪಿನ್ ಮರ್ಮವನ್ನು ಅರಿಯಲಾಗಲಿಲ್ಲ. 18ನೇ ಓವರ್‌ನಲ್ಲಿ 98 ರನ್ನಿಗೆ 8 ವಿಕೆಟ್ ಬಿತ್ತು. ಆದರೆ ಅಫ್ರಿದಿ ಸಿಡಿದು ನಿಂತ ಪರಿಣಾಮ ಕೊನೆಯ 2.2 ಓವರ್‌ಗಳಲ್ಲಿ 30 ರನ್ ಹರಿದು ಬಂತು. ಇದರಲ್ಲಿ ಪಾಂಡ್ಯ ಪಾಲಾದ ಅಂತಿಮ ಓವರ್‌ನಲ್ಲಿ 16 ರನ್ ಸೋರಿ ಹೋಯಿತು.
18ಕ್ಕೆ 3 ವಿಕೆಟ್ ಉಡಾಯಿಸಿದ ಕುಲದೀಪ್ ಯಾದವ್ ಭಾರತದ ಯಶಸ್ವಿ ಬೌಲರ್, ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ 2, ಪಾಂಡ್ಯ ಮತ್ತು ಚಕ್ರವರ್ತಿ ಒಂದೊಂದು ವಿಕೆಟ್ ಉರುಳಿಸಿದರು.
ಭಾರತದ ಇನ್ನಿಂಗ್ಸ್ ನಲ್ಲಿ ಅಬ್ಬರಿಸಿದ ಅಭಿಷೇಕ್ ಶರ್ಮ 31 ರನ್ ಗಳಿಸಿ(13 ಎಸೆತ)ಔಟಾದರು. ಶುಭಮನ್ ಗಿಲ್10, ತಾಳ್ಮೆಯ ಆಟವಾಡಿದ ತಿಲಕ್ ವರ್ಮ ಅವರನ್ನು 31 ರನ್ ಗಳಿಸಿದ್ದ ವೇಳೆ ಸೈಮ್ ಅಯೂಬ್ ಬೌಲ್ಡ್ ಮಾಡಿದರು. ನಾಯಕ ಸೂರ್ಯಕುಮಾರ್ ಯಾದವ್ 47 ರನ್ (37 ಎಸೆತ) ಗಳಿಸಿ ಅಜೇಯರಾಗಿ ಉಳಿದರು. ಶಿವಂ ದುಬೆ 10 ರನ್ ಪೇರಿಸಿ ಅಜೇಯರಾಗಿ ಉಳಿದರು.
ಭಾರತದ ದಾಳಿಗೆ ತತ್ತರಿಸಿದ ಪಾಕಿಸ್ಥಾನ,ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ














































