ಸುಳ್ಯ ತಾಲೂಕು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಂಪಾಜೆ ವತಿಯಿಂದ, ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರ ಕಾರ್ಯಾದೇಶದನ್ವಯ ಶ್ರೀ ಅನ್ನಪೂರ್ಣೇಶ್ವರಿ ಚಾರಿಟಿ ಫೌಂಡೇಷನ್, ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಇಂದು ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮೀಣ ಮಹಿಳೆಯರಿಗಾಗಿ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಶ್ರೀ ವಿನಾಯಕ ಅವರು ಘನತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ, ತ್ಯಾಜ್ಯದ ಸಮರ್ಪಕ ವಿಲೇವಾರಿ ಹಾಗೂ ಮಳೆ ನೀರು ಕೊಯ್ಲು ಕುರಿತು ಮಾಹಿತಿ ನೀಡಿದರು. ಶ್ರೀಮತಿ ಸೌಮ್ಯ ಅವರು ನವೀಕರಿಸಬಹುದಾದ ಇಂಧನದ ಮಹತ್ವ ಹಾಗೂ ಸೌರಶಕ್ತಿಯ ಬಳಕೆಯ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ಮಾದಕ ವಸ್ತು ಮುಕ್ತ ಅಭಿಯಾನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಜೊತೆಗೆ ಲಿಂಗತ್ವ ಸಮಾನತೆ ರಾಷ್ಟ್ರಮಟ್ಟದ ಅಭಿಯಾನದಡಿಯಲ್ಲಿ ಲಿಂಗ ತಾರತಮ್ಯ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕೃಷಿಕರಿಗೆ ಜೈವಿಕ ಗೊಬ್ಬರ (AMC) ಅನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು, ಫಾರ್ಮ್ ಮ್ಯಾನೇಜರ್, ಸ್ವಸಹಾಯ ಸಂಘಗಳ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿ, ಒಕ್ಕೂಟ ಸಿಬ್ಬಂದಿ ಹಾಗೂ ಕೃಷಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಎಂ.ಬಿ.ಕೆ. ಶ್ರೀಮತಿ ಕಾಂತಿ ಅವರು ವಹಿಸಿದ್ದು, ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಅವರು ಸ್ವಾಗತಿಸಿದರು. ಸಂಜೀವಿನಿ ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ ಅವರು ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿ ನೀಡಿ ಧನ್ಯವಾದ ಸಲ್ಲಿಸಿದರು.



































