ಕಡಬ: ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ತೀವ್ರ ವಿರೋಧ ಹಾಗೂ ಆಕ್ರೋಶಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಕಡಬ ಪಟ್ಟಣ ಪಂಚಾಯತ್‌ಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಹೊರಡಿಸಿದ್ದ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಿದೆ.
ಏನಿದು ಘಟನೆ? ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಆಡಳಿತ ಹಿಡಿದ ಬೆನ್ನಲ್ಲೇ, ಸರ್ಕಾರವು ಅಶ್ರಫ್ ಶೇಡಿಗುಂಡಿ, ಶಾಲಿನಿ ಸತೀಶ್ ಹಾಗೂ ಆಶಿಸ್ ಅರಸ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಆದರೆ, ಈ ನೇಮಕಾತಿಯು ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗಮನಕ್ಕೆ ಬಾರದೆ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವೇನು? ಪಂಚಾಯತ್ ವ್ಯಾಪ್ತಿಯಲ್ಲಿ ಇಲ್ಲದ ಅಪರಿಚಿತ ವ್ಯಕ್ತಿಗಳು ಹಾಗೂ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದ್ದಕ್ಕೆ ತಳಮಟ್ಟದ ಕಾರ್ಯಕರ್ತರು ಕೆಂಡಾಮಂಡಲವಾಗಿದ್ದರು. ಇತ್ತೀಚೆಗೆ ಅಂಬೇಡ್ಕರ್ ಭವನದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ವಿಚಾರವಾಗಿ ಭಾರಿ ಗದ್ದಲ ಏರ್ಪಟ್ಟಿತ್ತು. ಅನೇಕ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಯ ಎಚ್ಚರಿಕೆಯನ್ನೂ ನೀಡಿದ್ದರು. ರಾಜಕೀಯ ಪ್ರಭಾವ ಬಳಸಿ ‘ವಾಮ ಮಾರ್ಗ’ದ ಮೂಲಕ ಸ್ಥಾನ ಗಿಟ್ಟಿಸಿಕೊಂಡವರಿಗೆ ಈಗ ಸರ್ಕಾರದ ಈ ನಿರ್ಧಾರದಿಂದ ಮುಖಭಂಗವಾದಂತಾಗಿದೆ.
ಹೊಸ ಪಟ್ಟಿ ರವಾನೆ: ಈ ಕುರಿತು ಮಾಹಿತಿ ನೀಡಿರುವ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., “ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಹಳೆಯ ನೇಮಕಾತಿಯನ್ನು ಹಿಂಪಡೆಯಲಾಗಿದೆ. ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಈಗ ಹೊಸ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿದೆ. ಶೀಘ್ರದಲ್ಲೇ ಅರ್ಹ ಕಾರ್ಯಕರ್ತರನ್ನೊಳಗೊಂಡ ಹೊಸ ಆದೇಶ ಹೊರಬೀಳಲಿದೆ,” ಎಂದು ತಿಳಿಸಿದ್ದಾರೆ




















































