ಸುಳ್ಯ, ಮಾ.1: ನಮ್ಮ ತುಳುನಾಡು ವಿಭಿನ್ನ ಸಂಸ್ಕೃತಿ ,ಆಚರಣೆಯನ್ನು ಹೊಂದಿದೆ. ಮೊಗೇರ ಸಮಾಜ ಇಲ್ಲಿ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದೆ ಎಂದು ದ.ಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಕರ್ನಾಟಕ ರಾಜ್ಯ ಮೊಗೇರ ಸಂಘದ ವತಿಯಿಂದ ಸಂಘಟನೆಗೆ 50 ವರ್ಷ ತುಂಬಿದ ಹಿನ್ಬಲೆಯಲ್ಲಿ ಕೊಡಿಯಾಲಬೈಲ್ ಸಮುದಾಯ ಭವನದಲ್ಲಿ ನಡೆದ ಮೊಗೇರ ದುಡಿ ಆಯನ 2026 ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಮೊಗೇರ ಸಮಾಜ ಸಾಮಾಜಿಕವಾವಿ ಆರ್ಥಿಕವಾಗಿ ಹಿಂದುಳಿದರೂ ಈಗ ಅವರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರುತ್ತಿದ್ದಾರೆ.ನಮ್ಮ ಮಕ್ಕಳನ್ನು ವ್ಯಕ್ತಿತ್ವ ನಿರ್ಮಾಣ ಕೆಲಸ ಮಾಡೋಣ, ಆ ಮೂಲಕ ರಾಷ್ಟ್ರ ನಿರ್ಮಣ ಸಾಧ್ಯವಾಗಲಿದೆ ಎಂದ ಅವರು ಹಿಂದೂ ಸಮಾಜ ಒಗ್ಗಟ್ಟಾಗಿ ಸಾಗಬೇಕು. ದೇಶದ ಅಭಿವೃದ್ಧಿ, ಸಮಾಜದ ಅಭಿವೃದ್ಧಿಗೆ ಇದು ಅಗತ್ಯ. ನರೇಂದ್ರ ಮೋದಿ ಸರಕಾರ ಹಿಂದುಳಿದವರ ಏಳಿಗೆಗಾಗಿ ಯೋಜನೆಯನ್ನು, ಕಾರ್ಯಕ್ರಮಗಳನ್ನು ಮಾಡುತ್ತಿದೆ. ಮೊಗೇರ ಸಮಾಜದ ಬೇಡಿಕೆಗಳನ್ನು ವಿಮರ್ಶೆ ಮಾಡಿಕೊಂಡು ನನ್ನ ಹಂತದಲ್ಲಿ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ನಮ್ಮಲ್ಲಿ ಬಡವ ಶ್ರೀಮಂತ,ಆ ಜಾತಿ ಈ ಜಾತಿ ಎಂಬ ಬೇಧ ಭಾವ ಇರಬಾರದು ಸಮಾಜದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ನಮ್ಮಲ್ಲಿರಬೇಕು.ಅಂಬೇಡ್ಕರ್ ಅವರ ಸಂವಿಧಾನದಿಂದ ನಾವಿಂದು ವಿವಿಧ ಸ್ಥಾನ-ಮಾನ, ಅಧಿಕಾರವನ್ನು ಪಡೆದಿದ್ದೇವೆ. ಬದುಕು, ಜೀವನ ನಡೆಸುವ ಶಿಕ್ಷಣ ಮಕ್ಕಳಿಗೆ ನೀಡಬೇಕು. ಬೇರೆಯವರ ಅಡಿಯಾಳು ಆಗದೇ ನಮ್ಮ ಸ್ವಂತ ಸಾಮರ್ಥ್ಯದಿಂದ ಮುಂದುವರಿಯೋಣ ಎಂದ ಅವರು ಶಾಸಕಿಯಾಗಿ ನಿಮ್ಮ ಜೊತೆ ನಾನಿದ್ದೇನೆ ಎಂದರು.
ಕರ್ನಾಟಕ ರಾಜ್ಯ ಮೊಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ್ ಸಂಕೇಶ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್.ಅಂಗಾರ ಅವರು ಮಾತನಾಡಿ ನಮ್ಮ ಇತಿಹಾಸವನ್ನು ನಮ್ಮಆಚಾರ ವಿಚಾರ ನಮ್ಮ ಆರಾಧನೆಗಳನ್ನು ತಿಳಿದುಕೊಳ್ಳಲು ಇಲ್ಲಿ ದುಡಿ ಆಯಾನ ಕಾರ್ಯಕ್ರಮ ನಡೆಯುತ್ತಿದೆ.ನಮ್ಮ ಜನಾಂದ ಅಧ್ಯಾಯನಕ್ಕೆ ದಾಸಕಜೆಯಲ್ಲಿ ದೀನ್ ದಯಾಳ್ ಟ್ರಸ್ಟ್ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ, ಬಿಜೆಪಿ ಸುಳ್ಯ ಅಧ್ಯಕ್ಷ ವೆಂಕಟ್ ವಳಲಂಬೆ, ಜೆಡಿಎಸ್ ಅಧ್ಯಕ್ಷ ಸುಕುಮಾರ ಕೊಡ್ತುಗುಳಿ, ಪ್ರಮುಖರಾದ ಡಾ.ರಘು ಬೆಳ್ಳಿಪ್ಪಾಡಿ, ವಿಶ್ವನಾಥ ಬೆಂಗಳೂರು, ರಾಮಪ್ಪ ಮಂಜೇಶ್ವರ, ಸುಂದರ ಮೇರ, ಡಾ.ರತ್ನಾವತಿ, ಕೆ.ಎಂ.ಮುಸ್ತಫಾ, ಲಕ್ಷ್ಮಣ ಪಾರೆ, ಸೀತಾರಾಮ ಕುಂಚಾಡಿ, ಅಪ್ಪು ಮಾರ್ನೆ, ಜನಾರ್ದನ ಮರ್ಗೋಡು, ಚಂದ್ರ ಬಿ., ನಿಟ್ಟೋಣಿ, ವಸಂತ ಅಜೆಗೋಡು, ಕೃಷ್ಣ ಕಾಟೇಹಳ್ಳಿ, ಸದಾನಂದ ನಕ್ರೆ, ಮಾಯಿಲಪ್ಪ ಮತ್ತಿತರರು ಉಪಸ್ಥಿತರಿದ್ದರು. ಚಿತ್ತರಂಜನ್ ಪ್ರಾಸ್ತಾವಿಕ ಮಾತನಾಡಿದರು. ಅಶೋಕ್ ಕುಂಚಾಡಿ ವಿಷಯ ಮಂಡಿಸಿದರು. ಕರುಣಾಕರ ಪಲ್ಲತ್ತಡ್ಕ ಸ್ವಾಗತಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ನಗರದ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಸುಳ್ಯದ ಜ್ಯೋತಿ ಸರ್ಕಲ್ ಬಳಿ ಮೆರವಣಿಗೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ರಘು ಚಾಲನೆ ನೀಡಿದರು. ಜ್ಯೋತಿ ಸರ್ಕಲ್ ಬಳಿಯಿಂಸ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ಗಾಂಧಿನಗರ ತನಕ ಸಾಗಿತು.
ಮೊಗೇರ ಸಮಾಜ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದೆ: ಬ್ರಿಜೇಶ್ ಚೌಟ





















































